ಎಸಿಬಿಗೆ ಹೈಕೋರ್ಟ್‌ ಮತ್ತೆ ತರಾಟೆ

By Kannadaprabha NewsFirst Published Jul 28, 2022, 8:29 AM IST
Highlights

ಆದಾಯ ಮೀರಿದ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯಲ್ಲಿ ನಿಯಮ ಪಾಲಿಸದ ಭ್ರಷ್ಟಾಚಾರ ನಿಗ್ರಹ ದಳ 

ಬೆಂಗಳೂರು(ಜು.28):  ಆದಾಯ ಮೀರಿದ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯಲ್ಲಿ ನಿಯಮ ಪಾಲಿಸದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, ಎಸಿಬಿ ತನಿಖೆಯಲ್ಲಿ ಕನಿಷ್ಠ ವಿಧಾನಗಳನ್ನೂ ಪಾಲಿಸುತ್ತಿಲ್ಲ ಎಂದು ಕಟುವಾಗಿ ಟೀಕಿಸಿದೆ. ಇದರೊಂದಿಗೆ ಇತ್ತೀಚಿನ ದಿನದಲ್ಲಿ 2ನೇ ಬಾರಿ ಎಸಿಬಿಗೆ ಕೋರ್ಟ್‌ ಚಾಟಿ ಬೀಸಿದೆ. ಕರ್ನಾಟಕ ವಿದ್ಯುತ್‌ ಪ್ರಸರಣಾ ನಿಗಮದ ಕಾರ್ಯಕಾರಿ ಎಂಜಿನಿಯರ್‌ ಕೆ.ಆರ್‌. ಕುಮಾರ್‌ ನಾಯ್ಕ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯಪೀಠ, ಪ್ರಕರಣದಲ್ಲಿನ ತನಿಖಾ ಲೋಪಗಳನ್ನು ಪಟ್ಟಿಮಾಡುವ ಮೂಲಕ ಎಸಿಬಿಯನ್ನು ತರಾಟೆಗೆ ತೆಗೆದುಕೊಂಡಿದೆ.
ಪ್ರಕರಣದಲ್ಲಿ ಕಾನೂನಿನ ಪ್ರಕ್ರಿಯೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. ಇಂತಹ ಲೋಪವನ್ನು ನೋಡಿ ಕಣ್ಮುಚ್ಚಿ ಕೂರಲಾಗುವುದಿಲ್ಲ ಎಂದ ಹೈಕೋರ್ಟ್‌, ಕುಮಾರ್‌ ನಾಯ್ಕ್‌ ವಿರುದ್ಧದ ಆದಾಯ ಮೀರಿ ಆಸ್ತಿ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ.

ಎಸಿಬಿ ಲೋಪಗಳೇನು?:

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಂಬಂಧ ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಜ್ಞಾನೇಂದ್ರಕುಮಾರ್‌ ವಿರುದ್ಧ 2022ರ ಮಾ.15ರಂದು ಎಸಿಬಿ ದೂರು ದಾಖಲಿಸಿ, ಅವರ ಮನೆ ಮೇಲೆ ದಾಳಿ ನಡೆಸಿಸಿತ್ತು. ತನಿಖೆ ವೇಳೆ ಲಭ್ಯವಾದ ಮಾಹಿತಿ ಆಧರಿಸಿ ಅರ್ಜಿದಾರ ಕುಮಾರ್‌ ನಾಯ್ಕ್‌ ವಿರುದ್ಧವೂ ಪ್ರಕರಣ ದಾಖಲಿಸಿತ್ತು. ಇದರಿಂದ ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಕುಮಾರ್‌ ನಾಯ್ಕ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಹರಿಗೆ ಭೂಸ್ವಾಧೀನ ಪರಿಹಾರ ವಿಳಂಬ ಸಲ್ಲದು: ಹೈಕೋರ್ಟ್‌ ಚಾಟಿ

ಪ್ರಕರಣದಲ್ಲಿನ ಎಸಿಬಿಯ ತನಿಖಾ ವೈಖರಿಯನ್ನು ಖಂಡಿಸಿರುವ ಹೈಕೋರ್ಟ್‌, ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಗಳಲ್ಲಿ ಮೊದಲು ಮೂಲ ವರದಿ ಅಥವಾ ‘ಸೋರ್ಸ್‌ ರಿಪೋರ್ಟ್‌’ ತಯಾರಿಸಬೇಕು. ನಂತರ ಅದನ್ನು ಆಧರಿಸಿ ಎಸಿಬಿ ಎಫ್‌ಐಆರ್‌ ದಾಖಲಿಸಬೇಕು. ಈ ಪ್ರಕ್ರಿಯೆ ಅನುಸರಿಸದೇ ತರಾತುರಿಯಲ್ಲಿ ಮೂಲ ವರದಿಯನ್ನು ತಯಾರಿಸಲಾಗಿದೆ. ಒಂದೇ ದಿನ ಅದೂ 24 ಗಂಟೆಗಳಲ್ಲೇ ಮೂಲ ವರದಿ ಹಾಗೂ ಎಫ್‌ಐಆರ್‌ ಸಿದ್ಧಪಡಿಸಲಾಗಿದೆ. ಅಧಿಕಾರಿಯ ಸೇವಾವಧಿಯ ವಿವರವನ್ನೂ ನಮೂದಿಸಿಲ್ಲ. ಎಫ್‌ಐಆರ್‌ಗೂ ಮುನ್ನ ವಾರ್ಷಿಕ ಸಂಬಳದ ಬಗ್ಗೆಯೂ ಪರಿಶೀಲಿಸಿಲ್ಲ. ಆಸ್ತಿಯ ವಾರ್ಷಿಕ ವರದಿ ಪರಾಮರ್ಶಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದೆ.

ಅರ್ಜಿದಾರರ ಪರ ವಕೀಲರು, ಪ್ರಕರಣದಲ್ಲಿ ಎಸಿಬಿಯು ತನಿಖಾ ಪ್ರಕ್ರಿಯೆಯನ್ನು ಪಾಲಿಸಿಲ್ಲ. ಎಫ್‌ಐಆರ್‌ಗೂ ಮೊದಲು ಪ್ರಾಥಮಿಕ ತನಿಖೆ ನಡೆಸಿಲ್ಲ. ಸಮರ್ಪಕ ಮೂಲ ವರದಿ ತಯಾರಿಸದೇ ಎಫ್‌ಐಆರ್‌ ದಾಖಲಿಸಿದೆ. ಒಂದೇ ದಿನ ಅಂದರೆ 2022ರ ಮಾ.16ರಂದೇ ಮೂಲ ವರದಿ ಸಿದ್ಧಪಡಿಸಿ, ಅದೇ ದಿನ ಎಫ್‌ಐಆರ್‌ ದಾಖಲಿಸಿದೆ. ಇದು ಕಾನೂನು ಬಾಹಿರವಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದಿದ್ದರು.
 

click me!