ಬೆಂಗಳೂರು (ಅ.17): ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ (Siddaramaiah) ಮತ್ತು ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಅಲ್ಪಸಂಖ್ಯಾತರ ಮತಗಳಿಗಾಗಿ ಹಲ್ಲುಗಿಂಜುತ್ತಿದ್ದಾರೆ. ಇದೇ ಕಾರಣಕ್ಕಾಗಿ ಅವರಿಬ್ಬರೂ ಆರ್‌ಎಸ್‌ಎಸ್ (RSS) ವಿಚಾರದಲ್ಲಿ ಆಕ್ಷೇಪಾರ್ಹ ಟೀಕೆ ಮಾಡುವಲ್ಲಿ ಸ್ಪರ್ಧೆಗಿಳಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ತಿರುಗೇಟು ನೀಡಿದ್ದಾರೆ.
ಶನಿವಾರ ಬಿಜೆಪಿ (BJP) ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳಿಬ್ಬರ ಉದ್ದೇಶ ಎಲ್ಲರಿಗೂ ಸ್ಪಷ್ಟವಾಗಿ ಗೊತ್ತಾಗಿದೆ. ಅಲ್ಪಸಂಖ್ಯಾತರ ಮತ ಪಡೆಯಲು ಅವರಿಬ್ಬರೂ ಸ್ಪರ್ಧೆಗಿಳಿದಿದ್ದಾರೆ. ಆರ್‌ಎಸ್‌ಎಸ್ ವಿಶ್ವದಲ್ಲಿ ಅತಿ ದೊಡ್ಡ ಸ್ವಯಂ ಸೇವಾ ಸಂಘಟನೆ (RSS) ಎಂಬುದು ಅವರಿಬ್ಬರಿಗೂ ಗೊತ್ತಿದೆ. ಆರ್‌ಎಸ್‌ಎಸ್ ಅನ್ನು ತೆಗಳುವುದರಿಂದ ಅಲ್ಪಸಂಖ್ಯಾತ ಮತಗಳನ್ನು (Vote) ಯಾರು ಎಷ್ಟುಪಡೆದುಕೊಳ್ಳುತ್ತಾರೆ ಎಂಬುದರ ಬಗ್ಗೆ ಸ್ಪರ್ಧೆ ಇದೆ. ಆರ್‌ಎಸ್‌ಎಸ್ ಒಳ್ಳೆಯದು ಎಂಬುದು ಅವರಿಗೂ ತಿಳಿದಿದೆ. ಆರ್‌ಎಸ್‌ಎಸ್ ಅನ್ನು ಟೀಕೆ ಮಾಡುವುದರಿಂದ ಅರ್ಥ ಇಲ್ಲ. ಅಲ್ಪಸಂಖ್ಯಾತ ಸಮುದಾಯ ಒಲಿಸಿಕೊಳ್ಳಲು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.
ಭಾಗವತ್ ಹೇಳಿಕೆಗೆ ಸಮರ್ಥನೆ:
ಇದೇ ವೇಳೆ ಜನಸಂಖ್ಯಾ ನಿಯಂತ್ರಣ ಕಾನೂನು ಬೇಕು ಎಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan bhagwath) ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, ಮೋಹನ್ ಭಾಗವತ್ ಅವರು ಹೇಳಿರುವುದು ಸರಿ ಇದೆ ಎಂದರು.
ವಾಲಿದ ಕಟ್ಟಡದ ಬಗ್ಗೆ ಪರಿಶೀಲನೆ:
ಬೆಂಗಳೂರಿನ (Bengaluru) ಬಿನ್ನಿಮಿಲ್‌ನ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ಒಂದು ಕಟ್ಟಡ ವಾಲಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಗುವುದು. ಕಟ್ಟಡ ಪರಿಸ್ಥಿತಿಯ ಕುರಿತು ಗಮನಕ್ಕೆ ಬಂದಿದ್ದೆ. ಬಿನ್ನಿಮಿಲ್ ಭಾಗದಲ್ಲಿ 10 ಸಾವಿರ ಪೊಲೀಸ್ (Police) ಕ್ವಾರ್ಟರ್ಸ್ ನಿರ್ಮಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಈ ಕಟ್ಟಡಗಳ ನಿರ್ಮಾಣವಾದರೆ ಪೊಲೀಸರ ವಸತಿ ಸಮಸ್ಯೆ ಬಹುತೇಕ ನಿವಾರಣೆಯಾಗಲಿದೆ. ಕೆಲವೆಡೆ ಪೊಲೀಸ್ ವಸತಿ ಗೃಹಗಳು ಇದ್ದರೂ ಪೊಲೀಸರು ಅಲ್ಲಿ ವಾಸಿಸುತ್ತಿಲ್ಲ. ಎಚ್‌ಆರ್‌ಎ ( HRA) ಹೆಚ್ಚು ಪ್ರಮಾಣದಲ್ಲಿ ಸಿಗುತ್ತಿರುವುದೇ ಇದಕ್ಕೆ ಕಾರಣ. ಹಿಂದೆ ವರ್ಷಕ್ಕೆ 5-6 ಪೊಲೀಸ್ ಸ್ಟೇಷನ್ ನಿರ್ಮಿಸಲಾಗುತ್ತಿತ್ತು. ಕಳೆದೆರಡು ವರ್ಷಗಳಲ್ಲಿ 100 ಪೊಲೀಸ್ ಠಾಣೆಗಳ ನಿರ್ಮಾಣಕ್ಕೆ 200 ಕೋಟಿ ರು. ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.