
ಹೊಸಪೇಟೆ (ಸೆ.05): ನಾನು ಪೋಲಪ್ಪ ಹಾಗೂ ಅವರ ಕುಟುಂಬಕ್ಕೆ ಪೆಟ್ರೋಲ್ ಹಾಕಿ ಸುಡುತ್ತೀನಿ ಎಂದು ಬೆದರಿಕೆ ಹಾಕಿಲ್ಲ. ಇದು ಸತ್ಯಕ್ಕೆ ದೂರವಾದ ಆರೋಪ. ಭೂಗಳ್ಳರು ಪೋಲಪ್ಪರನ್ನು ಬಳಸಿಕೊಂಡು ಪಾರಾಗುತ್ತಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಗರದಲ್ಲಿ ಕೆಲ ಭೂಗಳ್ಳರು ಪೋಲಪ್ಪ ಅವರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪೋಲಪ್ಪರ ಮೂಲಕ ದೂರು ಕೊಡಿಸಿ, ಅವರು ಪಾರಾಗುತ್ತಿದ್ದಾರೆ ಅಷ್ಟೇ, ಇದು ಭೂಮಿ ಕಬಳಿಸುವವರ ಕುತಂತ್ರ.
ನಾನು ಪೋಲಪ್ಪ ಕುಟುಂಬಕ್ಕೆ ಯಾವುದೇ ರೀತಿಯ ದೌರ್ಜನ್ಯ ಮಾಡಿಲ್ಲ’ ಎಂದರು. ‘ನನ್ನ ಮನೆಯ ವಿಚಾರವಾಗಿ ಈ ಹಿಂದೆ ಆರ್‌ಟಿಐ ಕಾರ್ಯಕರ್ತರೊಬ್ಬರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಲೋಕಾಯುಕ್ತರೇ ಹೇಳಿದ್ದಾರೆ. ಒಂದು ವೇಳೆ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ್ದನ್ನು ದಾಖಲೆ ಸಮೇತ ಸಾಬೀತುಪಡಿಸಿದರೆ ನಾನೇ ನಿಂತು ಒಡೆಸುವೆ’ ಎಂದು ಸವಾಲು ಹಾಕಿದರು. ನಾನು ಜಾತಿನಿಂದನೆ ಮಾಡುವ ವ್ಯಕ್ತಿಯಲ್ಲ. ಮಡಿವಾಳ ಸಮಾಜದವರು ಆಸ್ತಿ ಕಬಳಿಕೆಯಾಗಿದೆ ಎಂದು ದೂರಿದ್ದರು.
Hosapete: ಜಿಲ್ಲೆಗಾಗಿ ರಾಜಕೀಯ ನಿವೃತ್ತಿಗೂ ಸಿದ್ಧನಾಗಿದ್ದೆ: ಸಚಿವ ಆನಂದ್ ಸಿಂಗ್
ಹಾಗಾಗಿ ನಾನು ಹೋಗಿದ್ದೆ, ನಾನು ಯಾರಿಗೂ ಜಾತಿ ನಿಂದನೆ ಮಾಡಿಲ್ಲ. ರಜಪೂತ ಸಮಾಜ ಎಷ್ಟಿದೆ. ನಾವೇ ಕಡಿಮೆ ಜನಸಂಖ್ಯೆ ಇದ್ದೇವೆ, ಮಡಿವಾಳ ಸಮಾಜದವರು ಎಷ್ಟಿದ್ದಾರೆ. ಪಾಪ ಅವರಿಗೂ ನ್ಯಾಯ ದೊರೆಯಬೇಕಲ್ವಾ ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಘಟನೆ ಬಗ್ಗೆ ವಿವರಣೆ ಪಡೆದಿದ್ದಾರೆ. ಅವರಿಗೆ ಎಲ್ಲವನ್ನೂ ವಿವರಿಸಿರುವೆ. ಮುಖ್ಯಮಂತ್ರಿ, ಪಕ್ಷದ ನಾಯಕರ ಜತೆಗೆ ಚರ್ಚಿಸಿ ದಾಖಲೆ ಸಮೇತವೇ ನಾನು ಮಾಧ್ಯಮದ ಎದುರು ವಿವರವಾಗಿ ಹೇಳುವೆ ಎಂದರು. ಮಾಜಿ ಸಂಸದ ಉಗ್ರಪ್ಪ ಅವರು ದಾಖಲೆಗಳಿಲ್ಲದೇ ಆರೋಪ ಮಾಡ್ತಾ ಇದ್ದಾರೆ.
ಆರೋಪಗಳೆಲ್ಲವೂ ಸತ್ಯಾಂಶಗಳಲ್ಲ. ಅವರು ಮಾಜಿ ಸಂಸದರು, ಜತೆಗೆ ವಕೀಲರು ಹೌದು, ಸತ್ಯಾಸತ್ಯತೆ ತಿಳಿದುಕೊಳ್ಳಲಿ ಎಂದರು. ನನ್ನ ವಿರುದ್ಧ ಪೋಲಪ್ಪ ಯಾವುದೇ ಕಾನೂನು ಹೋರಾಟ ಮಾಡಿಲ್ಲ. ಈ ವಿಚಾರದಲ್ಲಿ ಉಗ್ರಪ್ಪನವರು ಯಾರೋ ಕಾಯಿಸಿದ ಹಂಚಿನ ಮೇಲೆ ದೋಸೆ ಹಾಕಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಭೂಗಳ್ಳರಿಗೆ ಕಾಲವೇ ಉತ್ತರಿಸಲಿದೆ ಎಂದರು. ಇದು ರಾಜಕೀಯ ಷಡ್ಯಂತ್ರ ಅಲ್ಲವೇ ಅಲ್ಲ. ಭೂಗಳ್ಳರು ತಮ್ಮ ರಕ್ಷಣೆಗಾಗಿ ಪೋಲಪ್ಪ ಅವರನ್ನು ಮುಂದೆ ಬಿಟ್ಟಿದ್ದಾರೆ. ಈ ವಿಚಾರ ಮುಂದಿಟ್ಟುಕೊಂಡು ಆನಂದ ಸಿಂಗ್ ಅವರನ್ನು ರಾಜಕೀಯವಾಗಿ ಮುಗಿಸೋಣ ಅಂದುಕೊಂಡಿದ್ದಾರೆ.
Hosapete: ಜೀವ ಬೆದರಿಕೆ ಆರೋಪ: ಸಚಿವ ಆನಂದ್ ಸಿಂಗ್ ವಿರುದ್ಧ ಕೇಸ್
ಮಾತೇತ್ತಿದ್ರೆ, ಪೊಲಪ್ಪ ಸಣ್ಣ ಸಮುದಾಯ ಅಂತಾರಲ್ಲಾ, ನಮ್ಮದು ಕೂಡ ಸಣ್ಣ ಸಮುದಾಯ. ನಾನು ರಜಪೂತ ಸಮುದಾಯದಿಂದ ಬರುತ್ತೇನೆ. ಕರ್ನಾಟಕದಲ್ಲಿ ನಾವು ಎಷ್ಟಿದ್ದೇವೆ. ಹೊಸಪೇಟೆಯಲ್ಲಿ ಎಷ್ಟಿದ್ದೇವೆ, ಅರಿತುಕೊಳ್ಳಲಿ. ರಿಪಬ್ಲಿಕ್ ಪದವನ್ನು ಉಗ್ರಪ್ಪನವರು ಬಳಸಿದ್ದಾರೆ. ಇಲ್ಲಿ ಎಲ್ಲವೂ ಮುಕ್ತವಾಗಿದೆ, ಯಾವುದೂ ರಿಪಬ್ಲಿಕ್ ಇಲ್ಲ. ನನ್ನ ಮನೆ ವಿಚಾರವಾಗಿ ಉಗ್ರಪ್ಪನವರು ಬಂದು ದಾಖಲೆಗಳು ತೆಗೆದು ನೋಡಲಿ ಎಂದು ಆಹ್ವಾನ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ