
ಶಿವಾನಂದ ಗೊಂಬಿ
ಹುಬ್ಬಳ್ಳಿ (ನ.18): ಕನ್ನಡಾಂಬೆಗೆ ಈ ಬಸ್ಸಿನಲ್ಲಿ ನಿತ್ಯ ಪೂಜೆ ಸಲ್ಲುತ್ತೆ. ಓದಲು ಕನ್ನಡ ಸಾಹಿತಿಗಳ ಪುಸ್ತಕಗಳು ಇರುತ್ತೆ. ‘ಇದು ಕನ್ನಡದ ತೇರು ಕೈ ಮುಗಿದು ಏರು’ ಎಂಬ ಉದ್ಘೋಷ ಕೂಡ ಇಲ್ಲಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮೀಣ ಘಟಕದ ಹುಬ್ಬಳ್ಳಿ-ಶಿವಮೊಗ್ಗ ನಡುವೆ ಓಡುವ ಕೆಂಪು ಬಸ್ ಒಳಗಿನ ಒಂದು ಝಲಕ್ ಇದು. ಕನ್ನಡಾಂಬೆಗೆ ಬಸ್ ಚಾಲಕ ನಾಗರಾಜ ಬೂಮಣ್ಣವರ ಸಲ್ಲಿಸುವ ವಂದನೆಯ ಪರಿಯಿದು.
ನವಲಗುಂದ ತಾಲೂಕಿನ ತೀರ್ಲಾಪುರ ಗ್ರಾಮದ ನಿವಾಸಿ ನಾಗರಾಜ ಬೂಮಣ್ಣವರ 11 ವರ್ಷದ ಹಿಂದೆ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿ ಕೆಲಸಕ್ಕೆ ಸೇರಿದವರು. 9 ವರ್ಷದಿಂದ ತಾವು ಓಡಿಸುವ ಬಸ್ಸಿಗೆ ರಾಜ್ಯೋತ್ಸವದಂದು ಹೂವಿನಿಂದ ಅಲಂಕರಿಸಿ, ಕೆಲವೊಂದಿಷ್ಟು ಸಾಹಿತಿಗಳ ಸ್ಟಿಕ್ಕರ್ ಅಂಟಿಸಲು ಸಾವಿರಾರು ರುಪಾಯಿ ಕೈಯಿಂದಲೇ ಖರ್ಚು ಮಾಡುತ್ತಿದ್ದರು.
ಈ ವರ್ಷ ವಿಶೇಷವಾಗಿ ರಾಜ್ಯೋತ್ಸವ ಆಚರಿಸಬೇಕು. ಪ್ರತಿನಿತ್ಯ ಕನ್ನಡಾಂಬೆಗೆ ಪೂಜೆ ಸಲ್ಲುವಂತೆ ಮಾಡಬೇಕೆಂದು ಯೋಚಿಸಿದ್ದಾರೆ. ಅದಕ್ಕಾಗಿ ಕಳೆದ ವರ್ಷದಿಂದಲೇ ಪ್ರತಿ ತಿಂಗಳು ಎಂಟ್ಹತ್ತು ಸಾವಿರ ರೂ.ತೆಗೆದಿರಿಸಿದ್ದಾರೆ. ರಾಣಿಬೆನ್ನೂರಲ್ಲಿ ಕಲಾವಿದರೊಬ್ಬರಿಂದ ಭುವನೇಶ್ವರಿ ದೇವಿ ಮೂರ್ತಿಯನ್ನು ಮಾಡಿಸಿದ್ದಾರೆ. ಹಿಂದೆ ಕರ್ನಾಟಕದ ನಕಾಶೆ ಇರುವಂತೆ 4 ಅಡಿಗೂ ಹೆಚ್ಚು ಎತ್ತರವಿರುವ ಭುವನೇಶ್ವರಿ ದೇವಿಯ ಮೂರ್ತಿ ಮಾಡಿಸಿ ಬಸ್ಸಿನ ಮುಂಭಾಗದಲ್ಲಿ ಪ್ರತಿಷ್ಠಾಪಿಸಿದ್ದಾರೆ. ಈ ಬಸ್ ಓಡಿಸುವ ಮುನ್ನ ಭುವನೇಶ್ವರಿ ದೇವಿಗೆ ಪೂಜೆ ಮಾಡಲಾಗುತ್ತದೆ. ಒಂದು ವೇಳೆ ಚಾಲಕರು ಬದಲಾದರೂ ದೇವಿಗೆ ಪೂಜೆ ಮಾಡಿದ ಬಳಿಕವೇ ಅಂದಿನ ಪಯಣ ಆರಂಭವಾಗುತ್ತದೆ.
ಇನ್ನುಳಿದಂತೆ ಹಳದಿ, ಕೆಂಪು ಬಣ್ಣದಿಂದ ಇಡೀ ಬಸ್ ಕಂಗೊಳಿಸುತ್ತಿದೆ. ಕನ್ನಡದ ಬಾವುಟಗಳು ಇಲ್ಲಿ ರಾರಾಜಿಸುತ್ತಿವೆ. ಕನ್ನಡದ ಪ್ರಮುಖ ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರು, ಬಸವಾದಿ ಶರಣರು ಸೇರಿದಂತೆ ನಾಡು-ನುಡಿಗೆ ಸೇವೆ ಸಲ್ಲಿಸಿದ 400ಕ್ಕೂ ಅಧಿಕ ಮಹನೀಯರ ಭಾವಚಿತ್ರ, ಮಾಹಿತಿ ಬಸ್‌ನಲ್ಲಿ ಲಭ್ಯವಿದೆ. ಎಲ್ಲ ಜಿಲ್ಲೆಗಳ ನಕ್ಷೆ ಹಾಗೂ ಮಾಹಿತಿ ಹಾಗೂ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ವಿಭಾಗದ ಘಟಕಗಳ ಮಾಹಿತಿಯೂ ಇಲ್ಲಿದೆ.
ಡಾ.ದ.ರಾ.ಬೇಂದ್ರೆ, ಕುವೆಂಪು ಸೇರಿದಂತೆ ಹಲವು ಸಾಹಿತಿಗಳ 40ಕ್ಕೂ ಅಧಿಕ ಕನ್ನಡ ಪುಸ್ತಕಗಳಿವೆ. ಮಿನಿ ಗ್ರಂಥಾಲಯವನ್ನೇ ಈ ಬಸ್‌ನಲ್ಲಿ ಕಾಣಬಹುದು. ಇಲ್ಲಿ ಪ್ರಯಾಣಿಕರು ಪುಸ್ತಕಗಳನ್ನು ಓದಬಹುದಾಗಿದೆ. ‘ಕನ್ನಡ ಸಾಹಿತ್ಯ ಓದಿ, ಭಾಷೆ ಬೆಳೆಸಿ’ ಎಂಬ ಕಳಕಳಿಯ ಮನವಿಯ ಬೋರ್ಡ್ ಕೂಡ ಕಾಣಿಸುತ್ತದೆ.
ಈ ಬಸ್‌ನ ಅಲಂಕಾರಕ್ಕೆ ಚಾಲಕ ನಾಗರಾಜ ಬೂಮಣ್ಣವರ ಬರೋಬ್ಬರಿ ₹1.15 ಲಕ್ಷ ಖರ್ಚು ಮಾಡಿದ್ದಾರೆ. ಕಳೆದ ವರ್ಷದಿಂದಲೇ ಇದಕ್ಕಾಗಿ ಪ್ರತಿ ತಿಂಗಳು ಏಳೆಂಟು ಸಾವಿರದಂತೆ ಉಳಿಸುತ್ತಾ ಬಂದಿದ್ದರು. ಇವರ ಕನ್ನಡ ಸೇವೆಗೆ ಸಂಸ್ಥೆಯಷ್ಟೇ ಅಲ್ಲ; ಸಾರ್ವಜನಿಕ ವಲಯದಲ್ಲೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹಣ ಉಳಿಸಿ ಸೇವೆಪ್ರತಿ ವರ್ಷ ನನ್ನ ಕೈಲಾದಷ್ಟು ರಾಜ್ಯೋತ್ಸವಕ್ಕೆ ಬಸ್ ಅಲಂಕರಿಸುತ್ತಿದ್ದೆ. ಆದರೆ, ಈ ವರ್ಷ ಅದ್ಧೂರಿಯಾಗಿ ಮಾಡಲೇಬೇಕೆಂದು ಒಂದು ವರ್ಷದಿಂದ ಹಣ ಉಳಿಸುತ್ತಿದ್ದೆ. ಭುವನೇಶ್ವರಿ ದೇವಿಯ ಮೂರ್ತಿ ಮಾಡಿಸಿದ್ದೇನೆ. ಅದಕ್ಕೆ ಪ್ರತಿನಿತ್ಯ ಪೂಜೆ ಸಲ್ಲಿಸುತ್ತಿದ್ದೇನೆ. ಅದು ನಿರಂತರ ನಡೆಯಲಿದೆ. ಮಿನಿ ಗ್ರಂಥಾಲಯ ಮಾಡಿದ್ದೇನೆ. ಇದಕ್ಕೆ ಅಧಿಕಾರಿಗಳ ಸಹಕಾರವೂ ಉಂಟು.
-ನಾಗರಾಜ ಬೂಮಣ್ಣವರ, ಚಾಲಕ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ.
ಕನ್ನಡಾಂಬೆಗೆ ವಂದನೆ
ಹುಬ್ಬಳ್ಳಿ ಗ್ರಾಮಾಂತರ 1ನೇ ಘಟಕದ ಚಾಲಕ ನಾಗರಾಜ ಬೂಮಣ್ಣವರ್ ₹1.15 ಲಕ್ಷ ಖರ್ಚು ಮಾಡಿ ಕನ್ನಡದ ತೇರಿನಂತೆ ಬಸ್ಸನ್ನು ಸಿಂಗರಿಸಿದ್ದಾರೆ. ಬಸ್‌ನಲ್ಲಿ 31 ಜಿಲ್ಲೆಗಳ ನಕ್ಷೆ, ಸಾಹಿತಿಗಳ, ಮಹನೀಯರ ಮಾಹಿತಿ ನೀಡುವ ಪ್ರಯತ್ನ ಮಾಡಿದ್ದಾರೆ. ಭುವನೇಶ್ವರಿ ದೇವಿ ಮೂರ್ತಿಗೆ ನಿತ್ಯ ಪೂಜೆ ಮಾಡುವ ಮೂಲಕ ತಮ್ಮದೇ ರೀತಿಯಲ್ಲಿ ಕನ್ನಡಾಂಬೆಗೆ ವಂದಿಸುತ್ತಿರುವುದು ಶ್ಲಾಘನೀಯ.
-ಎಚ್.ರಾಮನಗೌಡರ, ವಿಭಾಗೀಯ ನಿಯಂತ್ರಣಾಧಿಕಾರಿ, ಹುಬ್ಬಳ್ಳಿ ಗ್ರಾಮೀಣ ಘಟಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ