ಅಂತಾರಾಜ್ಯ ವಲಸೆ ಕಾರ್ಮಿಕರ ಸರ್ವೆಗೆ ಒತ್ತಾಯ

Kannadaprabha News   | Kannada Prabha
Published : Nov 18, 2025, 07:37 AM IST
  migrant labourers

ಸಾರಾಂಶ

ಉತ್ತರ ಭಾರತೀಯರ ಅನಿಯಂತ್ರಿತ ವಲಸೆ ಮೇಲೆ ನಿಗಾ ಇಡಲು, ನಿಖರ ಮಾಹಿತಿ ಸಂಗ್ರಹಿಸಲು ರಾಜ್ಯದಲ್ಲಿ ಅಂತಾರಾಜ್ಯ ವಲಸಿಗರ ಸರ್ವೆ ನಡೆಸಬೇಕು ಎಂದು ಕಾರ್ಮಿಕ ಸಂಘಟನೆಗಳು, ಕನ್ನಡಪರ ಹೋರಾಟಗಾರರು ಒತ್ತಾಯಿಸಿದ್ದಾರೆ.

ಮಯೂರ್‌ ಹೆಗಡೆ

ಬೆಂಗಳೂರು : ಉತ್ತರ ಭಾರತೀಯರ ಅನಿಯಂತ್ರಿತ ವಲಸೆ ಮೇಲೆ ನಿಗಾ ಇಡಲು, ನಿಖರ ಮಾಹಿತಿ ಸಂಗ್ರಹಿಸಲು ರಾಜ್ಯದಲ್ಲಿ ಅಂತಾರಾಜ್ಯ ವಲಸಿಗರ ಸರ್ವೆ ನಡೆಸಬೇಕು ಎಂದು ಕಾರ್ಮಿಕ ಸಂಘಟನೆಗಳು, ಕನ್ನಡಪರ ಹೋರಾಟಗಾರರು ಒತ್ತಾಯಿಸಿದ್ದಾರೆ.

ತಮಿಳುನಾಡಿನ ಮತದಾರರ ಪಟ್ಟಿಗೆ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರು ಸೇರಬಹುದು ಎಂದು ಅಲ್ಲಿನ ರಾಜಕೀಯ ಪಕ್ಷಗಳು ಕಳವಳ ವ್ಯಕ್ತಪಡಿಸಿದ್ದವು. ಈ ಆತಂಕದ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಕಳೆದ ಆಗಸ್ಟ್‌ನಲ್ಲಿ ಅಂತಾರಾಜ್ಯ ವಲಸೆ ಕಾರ್ಮಿಕರ ಸರ್ವೆ ನಡೆಸಲು ಯೋಜಿಸಿತ್ತು. ಅದೇ ಮಾದರಿಯಲ್ಲಿ ಸ್ಥಳೀಯರ ಉದ್ಯೋಗ ರಕ್ಷಿಸುವುದು, ಅಪರಾಧಕ್ಕೆ ಕಡಿವಾಣ ಸೇರಿ ಇತರೆ ಕಾರಣಗಳಿಗೆ ಕರ್ನಾಟಕದಲ್ಲೂ ಈ ರೀತಿಯ ಸರ್ವೆ ನಡೆಸುವ ಅಗತ್ಯವಿದೆ ಎಂಬ ಒತ್ತಾಯ ಕೇಳಿಬಂದಿದೆ.

2015ರಲ್ಲಿ ಕೂಡ ತಮಿಳುನಾಡು ಸರ್ಕಾರ ತಿರುವನಂತಪುರದ ಅಭಿವೃದ್ಧಿ ಅಧ್ಯಯನ ಕೇಂದ್ರ ಮತ್ತು ವಿವಿಧ ವಿಶ್ವವಿದ್ಯಾಲಯದ ಸಹಕಾರದಲ್ಲಿ ಸುಮಾರು 20,000 ವಲಸೆ ಕಾರ್ಮಿಕರ ಸಮೀಕ್ಷೆ ನಡೆಸಿತ್ತು. ಆದರೆ, ರಾಜ್ಯದಲ್ಲಿ ಒಮ್ಮೆಯೂ ಇಂತಹ ಪ್ರಯತ್ನ ಆಗಿಲ್ಲ.

ಸ್ವರೂಪ ಅರಿಯಲು ಅಗತ್ಯ:

ರಾಜ್ಯದಲ್ಲಿ ವಲಸಿಗರ ಜನಸಂಖ್ಯೆಯ ವಾಸ್ತವಿಕ ಚಿತ್ರಣವನ್ನು ಪಡೆಯಲು, ವಲಸೆ ಮಾದರಿ, ಕೆಲಸದ ಸ್ವರೂಪ, ಆರೋಗ್ಯ ಮತ್ತು ಜೀವನ ಪರಿಸ್ಥಿತಿ ಅರ್ಥೈಸಿಕೊಳ್ಳಲು ಸಮೀಕ್ಷೆ ಅಗತ್ಯ. ಪಶ್ಚಿಮ ಬಂಗಾಳ, ಬಿಹಾರ, ಉತ್ತರಪ್ರದೇಶ, ಜಾರ್ಖಂಡ್‌, ಒಡಿಶಾಗಳಿಂದ ಕಾರ್ಮಿಕರನ್ನು ಕರೆತರುವವರ, ಏಜೆನ್ಸಿಗಳ ಹಾಗೂ ಕೆಲಸಕ್ಕೆ ಬರುವವರ ನಿಗಾ ಇರಬೇಕು ಎಂದು ಕಾರ್ಮಿಕ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.

ಕಟ್ಟಡ ಕೆಲಸ, ಹೋಟೆಲ್‌, ಜವಳಿ, ಕೈಗಾರಿಕಾ ವಸಾಹತುಗಳಲ್ಲಿ ಕಾರ್ಮಿಕ ಇಲಾಖೆಗಳ ಲೇಬರ್ ಇನ್‌ಸ್ಪೆಕ್ಟರ್‌ಗಳು ಸ್ಥಳಕ್ಕೆ ತೆರಳಿ ದಾಖಲೀಕರಣ ಮಾಡಬೇಕು. ಕಾರ್ಮಿಕರು. ಕರೆತಂದ ಏಜೆನ್ಸಿಗಳಿಂದ ಕಾರ್ಮಿಕರ ಕಡ್ಡಾಯ ವಿಳಾಸ, ಹಿನ್ನೆಲೆ ಮಾಹಿತಿ ಸಂಗ್ರಹಿಸಬೇಕು. ಜತೆಗೆ ಎಷ್ಟು ದಿನದಿಂದ ಕೆಲಸದಲ್ಲಿದ್ದಾರೆ, ವಾಪಸ್‌ ಹೋಗಿದ್ದಾರಾ, ಕೆಲಸ ಬದಲಿಸಿದ್ದಾರಾ ಇತ್ಯಾದಿ ಮಾಹಿತಿಗಳನ್ನು ಕೆಲಸಕ್ಕೆ ನಿಯೋಜಿಸಿಕೊಂಡವರಿಂದ ನಿಯಮಿತವಾಗಿ ನವೀಕರಣ ಮಾಡಿಕೊಳ್ಳಬೇಕಿದೆ ಎಂದು ಸಂಘಟನೆಗಳು ಆಗ್ರಹಿಸುತ್ತಿವೆ.

16 ಬಗೆಯ ಕೆಲಸಕ್ಕೆ ಸಂಬಂಧಿಸಿ ಪ್ರತ್ಯೇಕ ಮಂಡಳಿ

ಕೇರಳದಲ್ಲಿ ಕಾರ್ಮಿಕ ಇಲಾಖೆಯಡಿ ಅಸಂಘಟಿತ ವಲಯದ ವಿವಿಧ 16 ಬಗೆಯ ಕೆಲಸಕ್ಕೆ ಸಂಬಂಧಿಸಿ ಪ್ರತ್ಯೇಕ ಮಂಡಳಿ ಇದೆ. ಆದರೆ, ನಮ್ಮಲ್ಲಿ ಕಟ್ಟಡ, ನಿರ್ಮಾಣ ಮಂಡಳಿ ಹೊರತುಪಡಿಸಿ ಇತರೆ ಬೋರ್ಡ್‌ ಇಲ್ಲ. ಹೌಸ್‌ಕೀಪಿಂಗ್‌, ಕೃಷಿ, ಸಾರಿಗೆ, ಹೋಟೆಲ್‌ ಸೇರಿ ಇತರೆ ಮಂಡಳಿ ಇದ್ದರೆ ಅದರಡಿ ಸ್ಥಳೀಯ, ವಲಸೆ ಕಾರ್ಮಿಕರ ನೋಂದಣಿ ಆಗುತ್ತದೆ. ಆಗ ಸಂಖ್ಯೆ, ವಸ್ತುಸ್ಥಿತಿ ತಿಳಿಯಲು ಸಾಧ್ಯ. ಹೀಗಾಗಿ ಕಾರ್ಮಿಕ ಇಲಾಖೆಯಿಂದ ವಲಸೆ ಕಾರ್ಮಿಕರ ಸರ್ವೆ ಆಗಬೇಕು ಎಂದು ಟ್ರೇಡ್‌ ಯೂನಿಯನ್‌ ಕೋ ಆರ್ಡಿನೇಶನ್‌ ಸೆಂಟರ್‌ ಜಿ.ಆರ್.ಶಿವಶಂಕರ್‌ ಆಗ್ರಹಿಸಿದ್ದಾರೆ.

ಜಿಲ್ಲೆ, ತಾಲೂಕು ಹಾಗೂ ಗ್ರಾಮೀಣ ಮಟ್ಟದಲ್ಲಿ ಸಮೀಕ್ಷೆ ನಡೆಸಬೇಕಿದೆ. ಪ್ರತಿ ಜಿಲ್ಲೆಯಲ್ಲೂ ಇಲಾಖೆಯಿಂದ ಎಲ್ಲಾ ಅಂತಾರಾಜ್ಯ ಕಾರ್ಮಿಕರನ್ನು ದಾಖಲಿಸಿಕೊಂಡು ಕಾಯಂ ಆಗಿ ನೆಲೆಸಿರುವವರು, ಬಂದು ಹೋಗುವವರು, ಅಸಂಘಟಿತ ವಲಯದಲ್ಲಿರುವವರು, ಕಾಯಂ ಅಥವಾ ಸಂಘಟಿತ ವಲಯ ಎಂದು ವರ್ಗೀಕರಣ ಮಾಡಿಕೊಳ್ಳಬೇಕಿದೆ ಎಂದು ಅವರು ಹೇಳುತ್ತಾರೆ.

ವಲಸೆ ಕಾರ್ಮಿಕರ ಕುರಿತು ಸರ್ವೆ ನಡೆಸಿ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳುವುದು ಅಗತ್ಯ. ರಾಜ್ಯದಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳಲ್ಲಿ ಅವರ ಪಾಲು ಹೆಚ್ಚಾಗಿ ಕಂಡುಬರುತ್ತಿದೆ. ಜತೆಗೆ ತಮ್ಮ ರಾಜ್ಯದಲ್ಲಿ ಅಪರಾಧ ಹಿನ್ನೆಲೆಯುಳ್ಳವರು ಇಲ್ಲಿಗೆ ಆಗಮಿಸಿ ತಲೆಮರೆಸಿಕೊಂಡಿರುವ ಸಾಧ್ಯತೆಗಳೂ ಇರುತ್ತವೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಸರ್ವೆ ನಡೆಸಿ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳುವುದು, ವಲಸೆ ಕಾರ್ಮಿಕರ ನೋಂದಣಿ ಮಾಡಿಕೊಳ್ಳುವುದು ಅತ್ಯಂತ ಅಗತ್ಯ ಎನ್ನುತ್ತಾರೆ ಕನ್ನಡ ಹೋರಾಟಗಾರ ಅರುಣ್‌ ಜಾವಗಲ್‌.

ಹೊರ ರಾಜ್ಯದ ಕಾರ್ಮಿಕರನ್ನು ನಿರ್ಬಂಧಿಸಲು ಸಾಧ್ಯವಿಲ್ಲ. ಆದರೆ, ಸ್ಥಳೀಯ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಸುವ ನಿಟ್ಟಿನಲ್ಲಿ ಹಾಗೂ ಹೆಚ್ಚು ಪಾಲು ಉದ್ಯೋಗದ ಹಕ್ಕು ಒದಗಿಸುವಲ್ಲೂ ಇದು ಪ್ರಯೋಜನ ಆಗಲಿದೆ ಎಂದು ಅವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್