
ಬೆಂಗಳೂರು (ಏ.16): ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ರೂಪಿಸಲಾಗಿರುವ ನೀತಿಯನ್ನು ಸಂಘಟಿತ ಮತ್ತು ಅಸಂಘಟಿತ ವಲಯಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ನ ಧಾರವಾಡ ಪೀಠ ಬುಧವಾರ ನಿರ್ದೇಶಿಸಿದೆ.
ಗೆಜೆಟ್‌ನಲ್ಲಿ ಪ್ರಕಟಗೊಂಡಿದ್ದರೂ ಋತುಚಕ್ರದ ರಜೆ ನೀತಿಯನ್ನು ಹೋಟೆಲ್‌ಗಳು ಮತ್ತಿತರ ಸಂಸ್ಥೆಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿಲ್ಲ. ಹಾಗಾಗಿ, ಮಹಿಳಾ ನೌಕರರಿಗೆ ಮುಟ್ಟಿನ ಸಂದರ್ಭದಲ್ಲಿ ಒಂದು ದಿನ ವೇತನಸಹಿತ ರಜೆ ನೀಡುವ ನೀತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬೆಳಗಾವಿ ಜಿಲ್ಲೆಯ ಹೋಟೆಲ್ ಉದ್ಯೋಗಿ ಚಂದ್ರವ್ವ ಹಣಮಂತ ಗೋಕಾವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ನಿರ್ದೇಶನ ನೀಡಿದೆ.
ಮಹಿಳೆ ಮತ್ತು ಪುರುಷ ಸಮಾನರು ಎಂದು ಕಾನೂನು ಹೇಳಿದರೂ ಜೈವಿಕವಾಗಿ ಭಿನ್ನರು. ಮುಟ್ಟಿನ ರಜೆಯ ಮನವಿಯು ವಿಶೇಷದ ವಿಚಾರವಲ್ಲ. ಬದಲಿಗೆ ಅದು ಘನತೆ, ನ್ಯಾಯಯುತ ಮತ್ತು ಮಹಿಳೆಯ ವಾಸ್ತವಿಕ ಬದುಕಿನ ಮಾನವೀಯ ಅರಿವು. ಹಾಗಾಗಿ, ಸಂಘಟಿತ ವಲಯ ಸೇರಿ ಎಲ್ಲ ವಲಯಗಳಲ್ಲೂ ಋತುಚಕ್ರದ ಸಮಯದಲ್ಲಿ ಮಹಿಳಾ ನೌಕರರಿಗೆ ಮಾಸಿಕ ಒಂದು ದಿನದ ವೇತನಸಹಿತ ರಜೆ ನೀಡುವ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿದೆ.
ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು, ಸರ್ಕಾರದ ನೀತಿಯು ಪ್ರಗತಿಪರ ನಿಟ್ಟಿನಲ್ಲಿನ ಹೆಜ್ಜೆಯಾಗಿದೆ. ವಿಶಾಲ ಮತ್ತು ವೈವಿಧ್ಯಮಯ ಅಸಂಘಟಿತ ವಲಯದಿಂದಾಗಿ ಕೆಲವು ಪ್ರಾಯೋಗಿಕ ಅಡೆತಡೆ ಉದ್ಭವಿಸಿವೆ. ಮುಟ್ಟಿನ ರಜೆಗೆ ಸಂಬಂಧಿಸಿದ ಮಸೂದೆಯು ವಿಧಾನಸಭೆಯ ಪರಿಗಣನೆಯಲ್ಲಿದೆ ಎಂದು ವಿಚಾರಣೆ ನ್ಯಾಯಪೀಠಕ್ಕೆ ತಿಳಿಸಿದ್ದರು.
ಬೆಳಗಾವಿಯ ಹೋಟೆಲ್‌ವೊಂದರಲ್ಲಿ ಅಡುಗೆ ಕೆಲಸಗಾರರಾಗಿರುವ ಚಂದ್ರವ್ವ ಹಣಮಂತ ಗೋಕಾವಿ ಮುಟ್ಟಿನ ಸಂದರ್ಭದಲ್ಲಿ ರಜೆ ನೀಡುವಂತೆ ಕೋರಿದ್ದರು. ಆದರೆ, ರಜೆ ನೀಡಲು ಹೋಟೆಲ್ ಮಾಲೀಕರು ನಿರಾಕರಿಸಿದ್ದರು. ಇದರಿಂದ, ಕಾರ್ಮಿಕ ಇಲಾಖೆಗೆ ಮನವಿ ಪತ್ರ ಸಲ್ಲಿಸಿದ್ದ ಚಂದ್ರವ್ವ, ಮುಟ್ಟಿನ ಸಂದರ್ಭದಲ್ಲಿ ಒಂದು ದಿನ ವೇತನಸಹಿತ ರಜೆ ನೀಡುವ ನೀತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಕೋರಿದ್ದರು.ನಂತರ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಅಧಿನಿಯಮ ಹಾಗೂ ಕಾರ್ಖಾನೆಗಳ ಅಧಿನಿಯಮಕ್ಕೆ ಒಳಪಡುವ ಎಲ್ಲ ಸಂಸ್ಥೆಗಳಲ್ಲಿ ಸರ್ಕಾರದ ನೀತಿಯ ಏಕರೂಪ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ರಜೆ ಪಡೆಯುವ ಮಹಿಳಾ ನೌಕರರಿಗೆ ವೇತನ ಕಡಿತ, ಬೆದರಿಕೆ ಅಥವಾ ಕೆಲಸದಿಂದ ದೂರವಿಡುವ ಕ್ರಮಗಳು ನಡೆದರೆ ಅದನ್ನು ಕಾರ್ಮಿಕ ಕಾನೂನು ಉಲ್ಲಂಘನೆ ಎಂದು ಪರಿಗಣಿಸಿ ಕ್ರಮ ಜರುಗಿಸಬೇಕು. ತಳಮಟ್ಟದ ಮಹಿಳಾ ಕಾರ್ಮಿಕರಿಗೆ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಕೋರಿದ್ದರು. ಆ ಮನವಿಗೆ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಚಂದ್ರವ್ವ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ