ವೈದ್ಯಕೀಯ ವೃತ್ತಿ ಕೈಗೊಳ್ಳುವಾಗ ಸಂಬಂಧಪಟ್ಟ ವೈದ್ಯಕೀಯ ಮಂಡಳಿ ಪ್ರಮಾಣ ಪತ್ರ ಹೊಂದಿರಲೇಬೇಕು. ಸಾರ್ವಜನಿಕರ ಆರೋಗ್ಯ ರಕ್ಷಣೆಯಂತಹ ಮಹತ್ವದ ಹೊಣೆ ಹೊತ್ತಿರುವ ಈ ವೃತ್ತಿಯಲ್ಲಿ ವೃತ್ತಿಪರ ಮಾನದಂಡ ಮತ್ತು ನಡವಳಿಕೆ ಕಾಯ್ದುಕೊಳ್ಳುವುದು ಸಹ ಅತ್ಯಂತ ಪ್ರಮುಖವಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಬೆಂಗಳೂರು (ಸೆ.27): ವೈದ್ಯಕೀಯ ವೃತ್ತಿ ಕೈಗೊಳ್ಳುವಾಗ ಸಂಬಂಧಪಟ್ಟ ವೈದ್ಯಕೀಯ ಮಂಡಳಿ ಪ್ರಮಾಣ ಪತ್ರ ಹೊಂದಿರಲೇಬೇಕು. ಸಾರ್ವಜನಿಕರ ಆರೋಗ್ಯ ರಕ್ಷಣೆಯಂತಹ ಮಹತ್ವದ ಹೊಣೆ ಹೊತ್ತಿರುವ ಈ ವೃತ್ತಿಯಲ್ಲಿ ವೃತ್ತಿಪರ ಮಾನದಂಡ ಮತ್ತು ನಡವಳಿಕೆ ಕಾಯ್ದುಕೊಳ್ಳುವುದು ಸಹ ಅತ್ಯಂತ ಪ್ರಮುಖವಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಕ್ಲಿನಿಕ್ ನ ನೋಂದಣಿಗೆ ಜಿಲ್ಲಾಧಿಕಾರಿ ಅನುಮತಿ ನೀಡಿಲ್ಲ ಎಂದು ಆಕ್ಷೇಪಿಸಿ ಉಡುಪಿಯ ಮೋಹನ್ ಭಟ್ಟ ಎಂಬುವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
undefined
ಕೋಳಿ ಸಾಕಣೆ ವಾಣಿಜ್ಯ ಚಟುವಟಿಕೆ ಅಲ್ಲ, ತೆರಿಗೆ ವಿಧಿಸಲು ಗ್ರಾಪಂಚಾಯ್ತಿಗೆ ಅಧಿಕಾರವಿಲ್ಲ: ಹೈಕೋರ್ಟ್
ಸಾರ್ವಜನಿಕ ಆರೋಗ್ಯ ರಕ್ಷಣೆಯಲ್ಲಿ ತೊಡಗಿರುವವರು ವೈದ್ಯಕೀಯ ವೃತ್ತಿಯನ್ನು ಕೈಗೊಳ್ಳುವವರು ಸಾರ್ವಜನಿಕ ನಂಬಿಕೆ ಉಳಿಸಿಕೊಳ್ಳುವ ಜೊತೆಗೆ ವೃತ್ತಿಪರ ಮಾನದಂಡ ಅನುಸರಿಸುತ್ತಿರಬೇಕು. ಜನರ ವಿಶ್ವಾಸ ಉಳಿಸಿಕೊಳ್ಳಬೇಕಾದರೆ ಅವರ ನಡವಳಿಕೆ ಕೂಡ ಮುಖ್ಯವಾಗಿರುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ವಿವರ
ಬಿಎಸ್‌ಸಿ ಪದವಿ ಹಾಗೂ ಪರ್ಯಾಯ ವೈದ್ಯಕೀಯ ಡಿಪ್ಲೊಮಾ ಮತ್ತು ಕೋಲ್ಕತ್ತಾದ ಭಾರತೀಯ ಪರ್ಯಾಯ ವೈದ್ಯಕೀಯ ಮಂಡಳಿಯಿಂದ ಎಂಡಿ ಪದವಿ ಪಡೆದಿರುವುದಾಗಿ ಹೇಳಿಕೊಂಡು ಉಡುಪಿ ಪಟ್ಟಣದಲ್ಲಿ ಕ್ಲಿನಿಕ್ ಆರಂಭಿಸಲು ಮತ್ತು ನೋಂದಣಿ ಮಾಡಲು ಅನುಮತಿ ಕೋರಿ 2010ರಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ-2007ರಡಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿ ಕಚೇರಿಯಿಂದ ಅರ್ಜಿದಾರರಿಗೆ ಹಲವು ನೋಟಿಸ್‌ಗಳನ್ನು ಕಳುಹಿಸಿ ರಾಜ್ಯ ವೈದ್ಯಕೀಯ ಮಂಡಳಿ ನೀಡಿರುವ ವೈದ್ಯಕೀಯ ವೃತ್ತಿಪರರು ಪ್ರಮಾಣಪತ್ರ ಸಲ್ಲಿಸುವಂತೆ ಕೋರಿದ್ದರು. ಆದರೆ, ಆ ಪ್ರಮಾಣ ಪತ್ರವನ್ನು ಅರ್ಜಿದಾರರು ಸಲ್ಲಿಸಿರಲಿಲ್ಲ. ಹಾಗಾಗಿ, ಅದನ್ನು ಪರಿಗಣಿಸಿ ಅರ್ಜಿದಾರರ ಮನವಿ ತಿರಸ್ಕರಿಸಿ ಜಿಲ್ಲಾಧಿಕಾರಿಗಳು 2018ರ ಡಿ.6ರಂದು ಹಿಂಬರಹ ನೀಡಿದ್ದರು.
ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಏಕ ಸದಸ್ಯಪೀಠವು ಅರ್ಜಿ ವಜಾಗೊಳಿಸಿ 2023ರ ಮಾ.12ರಂದು ಆದೇಶಿಸಿತ್ತು. ಇದರಿಂದ ಅರ್ಜಿದಾರರು ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿ, ತಮ್ಮ ವಿಭಾಗ ಆಯುಷ್ ಇಲಾಖೆಯ ವ್ಯಾಪ್ತಿಗೆ ಒಳಪಡುವುದಿಲ್ಲ, ಆದರೆ, ತಾನು ವೈದ್ಯಕೀಯ ವೃತ್ತಿಯನ್ನು ಕೈಗೊಳ್ಳಲು ಎಲ್ಲ ಅರ್ಹತೆ ಹೊಂದಿದ್ದೇನೆ ಎಂದು ವಾದ ಮಂಡಿಸಿದ್ದರು.
ಹೈಕೋರ್ಟ್‌ನಲ್ಲಿ 'ಗ್ಯಾರಂಟಿ' ಯೋಜನೆ ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ: ಕಾರಣವೇನು?
ಅರ್ಜಿದಾರರ ಎಲ್ಲ ವಾದಗಳನ್ನು ತಿರಸ್ಕರಿಸಿರುವ ವಿಭಾಗೀಯಪೀಠ, ಕೆಪಿಎಂಇ ಕಾಯ್ದೆ ಸೆಕ್ಷನ್ 5(9)(ಬಿ) ಪ್ರಕಾರ ಕ್ಲಿನಿಕ್ ನೋಂದಣಿಗೆ ರಾಜ್ಯ ವೈದ್ಯಕೀಯ ಮಂಡಳಿ ನೀಡಿರುವ ಪ್ರಮಾಣ ಪತ್ರ ಮತ್ತು ಇತರ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಅಲೋಪತಿ ವಿಭಾಗದಲ್ಲಿ ವೈದ್ಯಕೀಯ ವೃತ್ತಿ ಕೈಕೊಳ್ಳುವವವರಿಗೆ ಭಾರತೀಯ ವೈದ್ಯಕೀಯ ಮಂಡಳಿ ಪ್ರಮಾಣಪತ್ರ ನೀಡುತ್ತದೆ. ಅಂತೆಯೇ ಪ್ರತಿಯೊಂದು ವೈದ್ಯಕೀಯ ವಿಭಾಗಕ್ಕೂ ಒಂದೊಂದು ನಿಯಂತ್ರಣ ಸಂಸ್ಥೆಗಳಿದ್ದು, ಅವುಗಳ ಪ್ರಮಾಣಪತ್ರವನ್ನು ಪಡೆಯಲೇಬೇಕಾಗುತ್ತದೆ. ಆದರೆ ಅವುಗಳನ್ನು ಅರ್ಜಿದಾರರು ಸಲ್ಲಿಸಿಲ್ಲ. ಈ ಎಲ್ಲ ಅಂಶಗಳನ್ನು ಏಕಸದಸ್ಯಪೀಠ ದಾಖಲಿಸಿದೆ. ಆಧ್ದರಿಂದ ಏಕ ಸದಸ್ಯ ನ್ಯಾಯಪೀಠದ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಆದೇಶಿಸಿದೆ.