
ಬೆಂಗಳೂರು[ಡಿ.28]: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಗುರುವಾರವೂ ಎಚ್.ಡಿ. ಕುಮಾರಸ್ವಾಮಿ ಅವರ ಸಂಪುಟ ಸೇರಿದ ಎಂಟು ಮಂದಿ ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಲಿಲ್ಲ. ಆದರೆ, ರಾಜ್ಯ ನಾಯಕರ ನಡುವೆ ತೀವ್ರ ತಿಕ್ಕಾಟಕ್ಕೆ ಕಾರಣವಾಗಿದ್ದ ಗೃಹ ಖಾತೆ ಹಾಗೂ ವೈದ್ಯ ಶಿಕ್ಷಣ ಖಾತೆಗಳು ಪ್ರಭಾವಿಗಳಾದ ಜಿ.ಪರಮೇಶ್ವರ್ ಹಾಗೂ ಸಚಿವ ಡಿ.ಕೆ. ಶಿವಕುಮಾರ್ ಅವರ ಕೈ ತಪ್ಪುವ ಸಾಧ್ಯತೆಗಳು ಹೆಚ್ಚಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಂಸತ್ ಅಧಿವೇಶದಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಕರ್ನಾಟಕದ ಸಚಿವರ ಖಾತೆ ಕ್ಯಾತೆ ಬಗೆಹರಿಸಲು ಗುರುವಾರ ತಮ್ಮ ಸಮಯವನ್ನು ನೀಡಲಿಲ್ಲ. ಶುಕ್ರವಾರ ಈ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ. ಈ ಬಗ್ಗೆ ಚರ್ಚಿಸಲು ರಾಜ್ಯ ಉಸ್ತುವಾರಿ ವೇಣುಗೋಪಾಲ್ ಗುರುವಾರ ದೆಹಲಿಯಲ್ಲಿದ್ದರೂ, ರಾಹುಲ್ ಭೇಟಿ ಸಾಧ್ಯವಾಗಲಿಲ್ಲ. ಆದರೆ, ರಾಜ್ಯದ ಬೆಳವಣಿಗೆಗಳ ಬಗ್ಗೆ ವೇಣುಗೋಪಾಲ್ ಅವರು ಹೈಕಮಾಂಡ್‌ನ ಪ್ರಮುಖರೆನಿಸಿದ ಅಹ್ಮದ್ ಪಟೇಲ್ ಅವರಿಗೆ ವಿವರಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಹೊಸ ಸಚಿವರು ಸಂಪುಟ ಸೇರಿದಾಗ ಅವರಿಗೆ ಖಾತೆಯನ್ನು ಬಿಟ್ಟುಕೊಡುವಂತೆ ಈ ಹಿಂದೆಯೆ ಸೂಚಿಸಲಾಗಿದ್ದು, ಹೈಕಮಾಂಡ್ ತನ್ನ ಈ ಸೂಚನೆಯನ್ನು ಪಾಲಿಸುವಂತೆ ತಿಳಿಸುವ ಸಾಧ್ಯತೆಯೇ ಹೆಚ್ಚಾಗಿದೆ. ಹೀಗಾಗಿ ಡಿಸಿಎಂ ಪರಮೇಶ್ವರ್ ಅವರಿಗೆ ಗೃಹ ಖಾತೆಯನ್ನು ಬಿಟ್ಟುಕೊಡಬೇಕಾದ ಅನಿವಾರ್ಯತೆ ನಿರ್ಮಾಣವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಲಭ್ಯವಾದವ ಮಾಹಿತಿ ತೀವ್ರ ಕಗ್ಗಂಟ್ಟಾಗಿದ್ದ ಖಾತೆಗಳಾದ ಗೃಹ ಖಾತೆ ಹಾಗೂ ವೈದ್ಯಶಿಕ್ಷಣ ಖಾತೆಗಳು ಕ್ರಮವಾಗಿ ಎಂ.ಬಿ. ಪಾಟೀಲ್ ಮತ್ತು ಇ. ತುಕಾರಾಂ ಅವರಿಗೆ ದೊರೆಯುವ ಸಾಧ್ಯತೆಯಿದೆ.
ಉಳಿದಂತೆ ನೂತನ ಸಚಿವರಾದ ಸಿ.ಎಸ್. ಶಿವಳ್ಳಿ ಅವರಿಗೆ ಪೌರಾಡಳಿತ (ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನದಿಂದ ಕೊಕ್ ನೀಡಿದ್ದರಿಂದ ತೆರವಾದ ಖಾತೆ), ಸತೀಶ್ ಜಾರಕಿಹೊಳಿ ಅವರಿಗೆ ಅರಣ್ಯ (ಶಂಕರ್ ಅವರಿಗೆ ಸಚಿವ ಸ್ಥಾನದಿಂದ ಕೊಕ್ ನೀಡಿದ್ದರಿಂದ ತೆರವಾದ ಖಾತೆ), ಎಂ.ಟಿ.ಬಿ. ನಾಗರಾಜು ಅವರಿಗೆ ವಸತಿ (ಯು.ಟಿ. ಖಾದರ್ ಬಳಿ ಇದ್ದ ಹೆಚ್ಚುವರಿ ಖಾತೆ), ರಹೀಂ ಖಾನ್ ಅವರಿಗೆ ಯುವ ಜನ ಮತ್ತು ಕ್ರೀಡೆ (ಉಪ ಮುಖ್ಯಮಂತ್ರಿ ಪರಮೇಶ್ವರ್ ಬಳಿಯಿದ್ದ ಮೂರನೇ ಹೆಚ್ಚುವರಿ ಖಾತೆ), ಆರ್.ಬಿ. ತಿಮ್ಮಾಪುರ ಅವರಿಗೆ ಕೌಶಲ್ಯಾಭಿವೃದ್ಧಿ (ಆರ್.ವಿ. ದೇಶಪಾಂಡೆ ಅವರ ಬಳಿಯಿದ್ದ ಹೆಚ್ಚುವರಿ ಖಾತೆ) ಹಾಗೂ ಪಿ.ಟಿ. ಪರಮೇಶ್ವರ್ ನಾಯ್ಕ್‌ಗೆ ಐಟಿ ಬಿಟಿ ಹಾಗೂ ಮುಜರಾಯಿ (ಕೆ.ಜೆ. ಜಾರ್ಜ್ ಹಾಗೂ ರಾಜಶೇಖರ್ ಪಾಟೀಲ್ ಅವರ ಬಳಿಯಿದ್ದ ಹೆಚ್ಚುವರಿ ಖಾತೆಗಳು) ದೊರೆಯುವ ಸಾಧ್ಯತೆಯಿದೆ.
ನೂತನ ಸಚಿವರ ಸಂಭಾವ್ಯ ಖಾತೆ
ಪರಮೇಶ್ವರ್‌ಗೆ ಕಾನೂನು-ಸಂಸದೀಯ?: ಈ ನಡುವೆ ಕೃಷ್ಣ ಬೈರೇಗೌಡ ಅವರ ಬಳಿ ಇರುವ ಹೆಚ್ಚುವರಿ ಖಾತೆಯಾದ ಕಾನೂನು ಮತ್ತು ಸಂಸದೀಯ ಖಾತೆಯನ್ನು ಹಿಂಪಡೆದು ಅದನ್ನು ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರಿಗೆ ನೀಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ