ರಾಜ್ಯದ ಜನರು ಸುಖ, ಸಮೃದ್ಧಿಯಿಂದ ಇರಲಿ: ಸಿದ್ದರಾಮಯ್ಯ ಪ್ರಾರ್ಥನೆ

By Kannadaprabha NewsFirst Published Oct 13, 2024, 4:59 AM IST
Highlights

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಮುನ್ನ ಮತ್ತು ಆರಂಭದ ಧ್ಯೋತಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅರಮನೆ ಬಲರಾಮ ದ್ವಾರದಲ್ಲಿ ನಂದಿ ಧ್ವಜಕ್ಕೆ ಶನಿವಾರ ಪೂಜೆ ಸಲ್ಲಿಸಿದರು. 

ಮಹೇಂದ್ರ ದೇವನೂರು

ಮೈಸೂರು (ಅ.13): ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಮುನ್ನ ಮತ್ತು ಆರಂಭದ ಧ್ಯೋತಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅರಮನೆ ಬಲರಾಮ ದ್ವಾರದಲ್ಲಿ ನಂದಿ ಧ್ವಜಕ್ಕೆ ಶನಿವಾರ ಪೂಜೆ ಸಲ್ಲಿಸಿದರು. ಅರಮನೆಯ ಉತ್ತರ ಬಲರಾಮ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ನಡೆದ ಈ ಪೂಜಾ ಕಾರ್ಯಕ್ರಮ ವಿಜಯದಶಮಿ ಮೆರವಣಿಗೆಗೆ ಮುನ್ನುಡಿ ಬರೆಯಿತು. ಸಚಿವ ಸಂಪುಟ ಸಹೋದ್ಯೋಗಿಗಳೊಂದಿಗೆ ರಾಜ್ಯ ಸಾರಿಗೆ ಸಂಸ್ಥೆಯ ಐರಾವತ ಬಸ್ ನಲ್ಲಿ ಆಗಮಿಸಿದ ಅವರು, ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು.

Latest Videos

ಮಧ್ಯಾಹ್ನ 1.41 ರಿಂದ 2.10 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಸರಿಯಾಗಿ 1.55ಕ್ಕೆ ನಂದಿಧ್ವಜಕ್ಕೆ ಪುಷ್ಪಾರ್ಚನೆ ನೆರವೇರಿಸಿ, ಜಂಬೂಸವಾರಿ ಮೆರವಣಿಗೆಗೆ ವಿದ್ಯುಕ್ತ ಚಾಲನೆ ನೀಡಿದರು. ಈಡುಗಾಯಿ ಒಡೆದು ನಮಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿ ಡ್ಯಾಂಗಳು ತುಂಬಿರುವುದರಿಂದ ಅದ್ಧೂರಿಯಾಗಿ ದಸರಾ ಆಚರಿಸಲಾಗುತ್ತಿದೆ. ಉತ್ತಮ ಮಳೆ ಬೆಳೆಯಾಗಿ, ರೈತರು, ಸಾರ್ವಜನಿಕರು ಸುಖ, ಸಮೃದ್ಧಿಯಿಂದ ಇರಲಿ ಎಂದು ಅವರು ಪ್ರಾರ್ಥಿಸಿದರು.

ದುಷ್ಟರ ಸಂಹಾರ, ಶಿಷ್ಟರ ರಕ್ಷಣೆಯೇ ದಸರಾದ ಸಂಕೇತ. ವಿಜಯದಶಮಿ, ದಸರಾ ಉತ್ಸವದ ಕೊನೆಯ ದಿನವಾಗಿದ್ದು, ಈ ಶುಭ ಸಂದರ್ಭದಲ್ಲಿ ನಾಡಿನ ಹಾಗೂ ದೇಶದ ಜನರಿಗೆ ದಸರಾ ಉತ್ಸವದ ಶುಭಾಶಯ ಕೋರುತ್ತೇನೆ. ರಾಜ್ಯದಲ್ಲಿ ಅಶಾಂತಿ ಮೂಡಿಸಿ, ಬದುಕನ್ನು ಹಾಳುಮಾಡಲು ಸಂಚು ರೂಪಿಸುವವರಿಗೆ ದೇವರು ಸದ್ಭುದ್ಧಿ ನೀಡಲಿ ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯ ಪತ್ನಿಯನ್ನು ನಾವು ಹೊರಗೆ ತಂದಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಶಾಸಕರಾದ ತನ್ವೀರ್ಸೇಠ್, ಟಿ.ಎಸ್. ಶ್ರೀವತ್ಸ, ಎ.ಆರ್. ಕೃಷ್ಣಮೂರ್ತಿ, ಡಿ. ರವಿಶಂಕರ್, ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ್, ಸಂಸದ ಸುನಿಲ್ಬೋಸ್ ಸೇರಿದಂತೆ ಹಲವರು ಇದ್ದರು. ಬಳಿಕ ಮುಖ್ಯಮಂತ್ರಿ ಹಾಗೂ ಗಣ್ಯರು ಅಲ್ಲಿಂದ ತೆರೆದ ವಾಹನದಲ್ಲಿ, ನೆರೆದಿದ್ದ ಸಾವಿರಾರು ಸಂಖ್ಯೆಯ ಜನರತ್ತ ಕೈಬೀಸುತ್ತಾ ಅರಮನೆ ಆವರಣಕ್ಕೆ ಆಗಮಿಸಿದರು.

click me!