
ಬಿ.ಶೇಖರ್ ಗೋಪಿನಾಥಂ
ಮೈಸೂರು (ಅ.13): 750 ಕೆ.ಜಿ.ತೂಕದ ಚಿನ್ನದ ಅಂಬಾರಿಯನ್ನು ಆನೆಯ ಮೇಲೆ ಸೊಗಸಾಗಿ ಕಟ್ಟುವುದೇ ಒಂದು ಕಲೆಗಾರಿಕೆ. ಅರಣ್ಯ ಇಲಾಖೆಯ ಸಿಬ್ಬಂದಿ ಪ್ರತಿ ವರ್ಷ ಅಂಬಾರಿ ಕಟ್ಟುವ ಕೈಂಕರ್ಯವನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಿ, ಸೊಗಸಾಗಿ ಅಂಬಾರಿ ಕಟ್ಟುತ್ತಾರೆ. ದಸರಾ ಜಂಬೂಸವಾರಿ ಆರಂಭವಾಗುವ ವೇಳೆಗೆ ಮೈಸೂರು ಅರಮನೆಯ ಆನೆ ಬಿಡಾರದಲ್ಲಿ ಅಭಿಮನ್ಯು ಆನೆ ಮೈಮೇಲೆ ಗಾದಿ, ಚಾಪ್ ಹಾಕಿ ಹಗ್ಗದಿಂದ ಬೀಗಿಯಾಗಿ ಕಟ್ಟಲಾಯಿತು. ನಂತರ ರಂಗು ರಂಗಿನ ಜುಲಾ ಹೊದಿಸಲಾಯಿತು. ಬಳಿಕ ಮೆರವಣಿಗೆ ಆರಂಭವಾದ ಮೇಲೆ ಲಕ್ಷ್ಮಿ ಮತ್ತು ಹಿರಣ್ಯಾ ಆನೆಗಳೊಂದಿಗೆ ಅಭಿಮನ್ಯು ಆನೆಯು ಆನೆ ಬಿಡಾರದಿಂದ ಖಾಸ್ ಅರಮನೆ ಬಳಿಗೆ ಆಗಮಿಸಿತು.
ಒಂದು ಕಡೆ ದಸರಾ ಮೆರವಣಿಗೆಯು ಜಾನಪದ ಕಲಾತಂಡಗಳು, ಸ್ತಬ್ಧಚಿತ್ರಗಳೊಂದಿಗೆ ಸಾಗುತ್ತಿದ್ದರೇ, ಮತ್ತೊಂಡೆದೆ ಅಭಿಮನ್ಯು ಆನೆ ಮೇಲೆ ಅಂಬಾರಿ ಕಟ್ಟುವ ಕಾರ್ಯವೂ ಸಂಪ್ರದಾಯದಂತೆ ಆರಂಭವಾಯಿತು. ಚಿನ್ನದ ಅಂಬಾರಿಯನ್ನು ಅರಮನೆಯವರು ಅರಣ್ಯ ಇಲಾಖೆಯವರಿಗೆ ನೀಡುತ್ತಿದ್ದಂತೆ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಚಿನ್ನದ ಅಂಬಾರಿಯೊಳಗೆ ಇರಿಸ ಸಿದ್ಧಗೊಳಿಸಲಾಯಿತು. ಚಿನ್ನದ ಅಂಬಾರಿಯನ್ನು ಕ್ರೇನ್ ಸಹಾಯದಿಂದ ಅಭಿಮನ್ಯು ಆನೆಯ ಮೈಮೇಲೆ ಇರಿಸಿ ಬಿಗಿಯಾಗಿ, ಭದ್ರವಾಗಿ ಕಟ್ಟಲಾಯಿತು.
ಅಲ್ಲದೇ, ಅಭಿಮನ್ಯು ಕೊಂಬಿಗೆ ಸಿಂಗೋಟಿ ಬಳೆ, ಹಣೆಪಟ್ಟಿ, ಕಾಲಿಗೆ ಡುಬ್ಬ, ಕಿವಿಗೆ ಚಾಮರ ತೊಡಿಸಿ ಅಲಂಕರಿಸಲಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿ, ಮಾವುತರು, ಕಾವಾಡಿಗಳು ಅಂಬಾರಿಯನ್ನು ಕಟ್ಟುವ ಕೈಂಕರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಖಾಸ್ ಅರಮನೆ ಬಳಿ ಅಂಬಾರಿ ಹೊತ್ತ ಅಭಿಮನ್ಯು ಜೊತೆಗೆ ಕುಮ್ಕಿ ಆನೆಗಳಾದ ಲಕ್ಷ್ಮಿ ಮತ್ತು ಹಿರಣ್ಯಾ ಬಂದು ನಿಂತವು. ಅಂಬಾರಿ ಆನೆಯನ್ನು ಅಶ್ವರೋಹಿದಳ, ಕೆಎಸ್ಆರ್ ಪಿ, ಸಿಎಆರ್, ಡಿಎಆರ್, ಆರ್ ಪಿಎಫ್ ಸಮ್ಮುಖದಲ್ಲಿ ಪೊಲೀಸ್ ಬ್ಯಾಂಡ್ ವಾದ್ಯ ಮೇಳದೊಂದಿಗೆ ಖಾಸ್ ಅರಮನೆಯಿಂದ ಕರೆ ತರಲಾಯಿತು. ಅಂಬಾರಿ ಆನೆಯು ಜಯಮಾರ್ತಾಂಡ ದ್ವಾರದ ಬಳಿಯಿಂದ ಬಳಸಿಕೊಂಡು ಮೈಸೂರು ಅರಮನೆ ಮುಂಭಾಗಕ್ಕೆ ಆಗಮಿಸಿತು.
ಸಿದ್ದರಾಮಯ್ಯ ಪತ್ನಿಯನ್ನು ನಾವು ಹೊರಗೆ ತಂದಿಲ್ಲ: ಎಚ್.ಡಿ.ಕುಮಾರಸ್ವಾಮಿ
ಅಂಬಾರಿ ಆನೆಯು ಮೆರವಣಿಗೆ ಮಾರ್ಗಕ್ಕೆ ಆಗಮಿಸುತ್ತಿದ್ದಂತೆ ನೆರೆದಿದ್ದವರು ಜೈ ಚಾಮುಂಡೇಶ್ವರಿ ಎಂದು ಘೋಷಣೆ ಕೂಗಿ ನಮಿಸಿದರು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಮನ್ಯು ಮೈಮೇಲಿದ್ದ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡುತ್ತಿದ್ದಂತೆ ಪೊಲೀಸ್ ಬ್ಯಾಂಡ್ ರಾಷ್ಟ್ರಗೀತೆ ನುಡಿಸಿದರು. ಕೋಟೆ ಮಾರಮ್ಮ ದೇವಸ್ಥಾನದ ಬಳಿಯ ಪಾರ್ಕಿಂಗ್ ಸ್ಥಳದಲ್ಲಿದ್ದ ಸಿಎಆರ್ ಪಿರಂಗಿ ದಳದ ಸಿಬ್ಬಂದಿ 7 ಪಿರಂಗಿಗಳ್ನು ಬಳಸಿ 21 ಸುತ್ತು ಕುಶಾಲತೋಪನ್ನು 1 ನಿಮಿಷದಲ್ಲಿ ಸಿಡಿಸಿದರು. ಕುಶಾಲತೋಪಿನ ಬಾರಿ ಶಬ್ದಕ್ಕೆ ಆನೆಗಳು ಜಗ್ಗದೇ ನಿಲ್ಲುವ ಮೂಲಕ ಅತಿಥಿಗಳಿಗೆ ನಮಸ್ಕರಿಸಿದ ನಂತರ ಮೆರವಣಿಗೆಯಲ್ಲಿ ಗಜಗಾಂರ್ಭೀಯದ ಹೆಜ್ಜೆ ಹಾಕುತ್ತಾ ಸಾಗಿದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ