
ಹುಬ್ಬಳ್ಳಿ(ಏ.22): ಹುಬ್ಬಳ್ಳಿಯಲ್ಲಿ ಕಳೆದ ಶನಿವಾರ ತಡರಾತ್ರಿ ನಡೆದ ಗಲಭೆಯ ‘ಮಾಸ್ಟರ್ ಮೈಂಡ್’ ಎಂದೇ ಹೇಳಲಾದ, ಮಸೀದಿಯಲ್ಲಿ ಆಜಾನ್ ಕೂಗುವ ವಸೀಂ ಪಠಾಣ್, ಆತನ ಮೂವರು ಸಹಚರರು ಸೇರಿ ಒಟ್ಟು ಎಂಟು ಮಂದಿಯನ್ನು ಪೊಲೀಸರು ಗುರುವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿಯಲ್ಲಿ ತಲೆಮರೆಸಿಕೊಂಡಿದ್ದ ವಸೀಂನನ್ನು ಗಲಭೆ ನಡೆದು 5 ದಿನಗಳ ಬಳಿಕ ಬಂಧಿಸಿದ್ದು, ಈತನ ಮೂವರು ಸಹಚರರನ್ನು ಹುಬ್ಬಳ್ಳಿ, ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಈ ಮೂಲಕ ಒಟ್ಟಾರೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 134ಕ್ಕೇರಿದಂತಾಗಿದೆ.
ಪೊಲೀಸರು ಬಂಧಿಸುವ ಮೂರು ಗಂಟೆ ಮೊದಲಷ್ಟೇ ವಿಡಿಯೋವೊಂದನ್ನು ಬಿಡುಗಡೆ ಮಾಡಿ ‘ನಾನು ಗಲಭೆಗೆ ಪ್ರಚೋದನೆ ನೀಡಿಲ್ಲ, ಸಮಾಧಾನಪಡಿಸುತ್ತಿದ್ದೆ ಅಷ್ಟೆ. ಆದರೆ ಇದೀಗ ನನ್ನನ್ನೇ ಗಲಭೆಯ ಮಾಸ್ಟರ್ ಮೈಂಡ್ ಎಂಬಂತೆ ಬಿಂಬಿಸಲಾಗುತ್ತಿದೆ’ ಎಂದು ವಸೀಂ ಹೇಳಿಕೊಂಡಿದ್ದ.
ವಸೀಂ ಪ್ರಚೋದನೆ?:
ಅಭಿಷೇಕ್ ಹಿರೇಮಠ ಎಂಬ ಯುವಕನೊಬ್ಬ ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ವಾಟ್ಸ್‌ಆ್ಯಪ್ ಸ್ಟೇಟಸ್ವೊಂದನ್ನು ಹಾಕಿದ್ದು, ಈ ಸಂಬಂಧ ಆತನನ್ನು ಪೊಲೀಸರು ಬಂಧಿಸಿದ್ದರು. ಆದರೆ, ಆರೋಪಿಯನ್ನು ತಮಗೊಪ್ಪಿಸುವಂತೆ ಮುಸ್ಲಿಂ ಸಮುದಾಯದವರು ಶನಿವಾರ ರಾತ್ರಿ ಠಾಣೆಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ವಸೀಂ ಪಠಾಣ್ ಪೊಲೀಸ್ ಕಾರು ಮೇಲೆ ಹತ್ತಿ ನಿಂತು ಭಾಷಣ ಮಾಡಿದ್ದ. ಅಲ್ಲಿವರೆಗೂ ಶಾಂತ ರೀತಿಯಿಂದ ನಡೆಯುತ್ತಿದ್ದ ಪ್ರತಿಭಟನೆ ಬಳಿಕ ಹಿಂಸಾರೂಪಕ್ಕೆ ತಿರುಗಿ ಕಲ್ಲು ತೂರಾಟ, ಪೊಲೀಸರ ಮೇಲೆ ಹಲ್ಲೆಯೂ ನಡೆದಿತ್ತು. ಒಂದು ಹಂತದಲ್ಲಿ ಠಾಣೆಗೆ ನುಗ್ಗುವ ಪ್ರಯತ್ನವನ್ನೂ ಗುಂಪು ಮಾಡಿತ್ತು. ಈ ವೇಳೆ ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಕೂಡ ಸಿಡಿಸಿದ್ದರು.
ತಲೆಮರೆಸಿಕೊಂಡಿದ್ದ:
ವಸೀಂ ಪೊಲೀಸ್ ವಾಹನದ ಮೇಲೆ ನಿಂತು ಮೈಕ್ ಹಿಡಿದು ಭಾಷಣ ಮಾಡಿದ್ದ ವಿಡಿಯೋ ಘಟನೆ ನಡೆದ ಮರುದಿನವೇ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ವಸೀಂ ನಾಪತ್ತೆಯಾಗಿದ್ದ. ಈತನ ಪತ್ತೆಗೆ ಪ್ರತ್ಯೇಕವಾಗಿ ಎರಡ್ಮೂರು ತಂಡಗಳನ್ನು ರಚಿಸಲಾಗಿತ್ತು. ಶಿಗ್ಗಾವಿ ಸೇರಿ ಹಲವೆಡೆ ಹುಡುಕಾಟ ನಡೆಸಲಾಗಿತ್ತು. ಕೊನೆಗೆ ಮೊಬೈಲ್ ಜಾಡು ಹಿಡಿದಾಗ ಬೆಳಗಾವಿಯಲ್ಲಿರುವುದು ಪತ್ತೆಯಾಗಿತ್ತು. ಅಲ್ಲಿ ಈತನನ್ನು ಬಂಧಿಸಿ ಬಳಿಕ ಹಳೇ ಹುಬ್ಬಳ್ಳಿ ಠಾಣೆಯಲ್ಲಿಟ್ಟು ಸುಮಾರು 4 ಗಂಟೆಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಯುವಕರನ್ನು ಸಂಘಟಿಸುತ್ತಿದ್ದ ಸಹಚರರು:
ವಸೀಂ ಪಠಾಣ್ ಮಾತ್ರವಲ್ಲದೆ ಹುಬ್ಬಳ್ಳಿಯ ತುಫೈಲ್ ಮುಲ್ಲಾ, ರೌಡಿಶೀಟರ್ ಅಬ್ದುಲ್ ಮಲಿಕ್ ಬೇಪಾರಿ, ಎಐಎಂಐಎಂ ಮುಖಂಡ ಮೊಹಮ್ಮದ್ ಆರೀಫ್‌ನನ್ನೂ ಪೊಲೀಸರು ಬಂಧಿಸಿದ್ದಾರೆ. ಈ ನಾಲ್ವರೂ ಗಲಭೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂಬ ಆರೋಪ ಇದೆ. ಇವರಲ್ಲಿ ಮುಲ್ಲಾ ಮತ್ತು ಬೇಪಾರಿಯನ್ನು ಪೊಲೀಸರು ಬೆಂಗಳೂರಲ್ಲಿ ಬಂಧಿಸಿದ್ದಾರೆ. ಇವರು ವಸೀಂ ಸೂಚನೆಯಂತೆ ಕೆಲಸ ನಿರ್ವಹಿಸುತ್ತಿದ್ದರು. ಅಂದು ಕೂಡ ಯುವಕರನ್ನು ಸಂಘಟಿಸಿ ಕರೆತಂದವರವಲ್ಲಿ ಇವರೇ ಪ್ರಮುಖರು ಎಂದು ಹೇಳಲಾಗಿದೆ. ಇನ್ನು ಮೊಹಮ್ಮದ್ ಆರೀಫ್‌ನನ್ನು ಹುಬ್ಬಳ್ಳಿ ಹೊರವಲಯದಿಂದ ವಶಕ್ಕೆ ಪಡೆಯಲಾಗಿದೆ. ಈತನೂ ವಸೀಂ ಹೇಳಿದಂತೆ ಯುವಕರನ್ನು ಗುಂಪು ಸೇರಿಸುತ್ತಿದ್ದ ಎಂಬ ಆರೋಪ ಇದೆ.
ಯಾರೀ ವಸೀಂ?
ವಸೀಂ ಪಠಾಣ್ ಲಾರಿ ಚಾಲಕನಾಗಿದ್ದ. ಇತ್ತೀಚೆಗೆ ಆ ಕೆಲಸ ಬಿಟ್ಟಿದ್ದ. ಹುಬ್ಬಳ್ಳಿಯ ಮಿಲ್ಲತ್ ನಗರದಲ್ಲಿ ಈತನ ಮನೆಯಿದ್ದು, ಅಲ್ಲೇ ಒಂದು ಕಚೇರಿ ಕೂಡ ಇಟ್ಟುಕೊಂಡಿದ್ದ. ವೇಷಭೂಷಣವೆಲ್ಲ ಮೌಲ್ವಿ ರೀತಿಯೇ ಇದ್ದ ಕಾರಣ ಈತನನ್ನು ಬಹುತೇಕರು ಮೌಲ್ವಿ ಎಂದೇ ಭಾವಿಸಿದ್ದರು. ಆದರೆ ಈತ ಮಸೀದಿಯಲ್ಲಿ ಆಜಾನ್ ಕೂಗುತ್ತಿದ್ದ ಎಂದು ತಿಳಿದು ಬಂದಿದೆ.
ಮುಸ್ಲಿಂ ಧರ್ಮಕ್ಕೆ ಎಲ್ಲೇ ಅವಮಾನವಾದರೂ ಅದರ ಬಗ್ಗೆ ಪೂರ್ಣ ಮಾಹಿತಿ ಪಡೆಯುತ್ತಿದ್ದ. ಜತೆಗೆ ತನ್ನದೇ ಯುವಕರ ಗುಂಪು ಕಟ್ಟಿಕೊಂಡು ಇದರ ವಿರುದ್ಧ ಪ್ರತಿಭಟನೆ ಮಾಡಬೇಕು ಎಂದು ಹುರಿದುಂಬಿಸುತ್ತಿದ್ದನಂತೆ. ಬೇರೆ ಬೇರೆ ಸಂಘಟನೆಗಳೊಂದಿಗೆ ಈತ ಸಂಪರ್ಕ ಇಟ್ಟುಕೊಂಡಿದ್ದ ಎಂದು ಹೇಳಲಾಗಿದ್ದು, ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಾನು ಮಾಸ್ಟರ್ ಮೈಂಡಲ್ಲ
ಹುಬ್ಬಳ್ಳಿ ಗಲಾಟೆಯ ಮಾಸ್ಟರ್ ಮೈಂಡ್ ನಾನಲ್ಲ. ಗಲಾಟೆ ನಡೆಸದಂತೆ ನಾನು ಯುವಕರ ಗುಂಪನ್ನು ಸಮಾಧಾನಪಡಿಸುತ್ತಿದ್ದೆ. ಬೇಕಿದ್ದರೆ ನಾನು ಮಾತನಾಡಿದ ವಿಡಿಯೋ ನೋಡಿ. ನಾನು ಎಲ್ಲೂ ಕಲ್ಲು ಎಸೆಯಿರಿ, ಗಲಾಟೆ ಮಾಡಿ ಎಂದು ಪ್ರಚೋದನೆ ನೀಡಿಲ್ಲ. ಈ ಗಲಭೆ ಯಾರೋ ಬೇಕಂತಲೇ ಮಾಡಿರುವ ಕೃತ್ಯ.
- ವಸೀಂ ಪಠಾಣ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ