60 ವರ್ಷ ತುಂಬಿದವರಿಗೆ ಮಾಸ್ಕ್ ಕಡ್ಡಾಯ: ಶೀಘ್ರವೇ ಆರೋಗ್ಯ ಇಲಾಖೆ ಮಾರ್ಗಸೂಚಿ- ದಿನೇಶ್ ಗುಂಡೂರಾವ್

By Kannadaprabha NewsFirst Published Dec 19, 2023, 7:26 AM IST
Highlights

60 ವರ್ಷ ತುಂಬಿದವರು, ಹೃದಯ ಸಂಬಂಧಿ ಸಮಸ್ಯೆ, ಕೋವಿಡ್ ಲಕ್ಷಣ ಹೊಂದಿರುವವರು ಕಡ್ಡಾಯ ಮಾಸ್ಕ್‌ ಧರಿಸಬೇಕು ಎಂದು ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮಡಿಕೇರಿ (ಡಿ.18): 60 ವರ್ಷ ತುಂಬಿದವರು, ಹೃದಯ ಸಂಬಂಧಿ ಸಮಸ್ಯೆ, ಕೋವಿಡ್ ಲಕ್ಷಣ ಹೊಂದಿರುವವರು ಕಡ್ಡಾಯ ಮಾಸ್ಕ್‌ ಧರಿಸಬೇಕು ಎಂದು ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸೋಮವಾರ ಕುಶಾಲನಗರದ ಸಮುದಾಯ ಆಸ್ಪತ್ರೆಗೆ ಭೇಟಿ ನೀಡಿದ ನಂತರ  ಮಾತನಾಡಿದ ಅವರು, ಕೋವಿಡ್ ಪರೀಕ್ಷೆ ಹೆಚ್ಚಿಸಲಾಗುವುದು, ಉಸಿರಾಟದ ತೊಂದರೆ ಹಾಗೂ ಕೋವಿಡ್ ಲಕ್ಷಣ ಹೊಂದಿರುವವರಿಗೆ ಪರೀಕ್ಷೆ ಕಡ್ಡಾಯಗೊಳಿಸಲಾಗುವುದು. ಅನಗತ್ಯ ಆತಂಕ ಬೇಡ ಎಂದರು. ಎಲ್ಲರಿಗೂ ಮಾಸ್ಕ್ ಕಡ್ಡಾಯ ಹಾಗೂ ಜನರ ಓಡಾಟದ ಮೇಲೆ ನಿರ್ಬಂಧ ಹೇರುವಂತಹ ಸ್ಥಿತಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬರೋಬ್ಬರಿ 643 ಸಂಚಾರ ನಿಯಮ ಉಲ್ಲಂಘನೆ ಮಾಡಿರೋ ಭೂಪ; ಸ್ಕೂಟಿ ಬೆಲೆ 30 ಸಾವಿರ, ದಂಡ 3.22 ಲಕ್ಷ ರೂ!

ಕೋವಿಡ್-19 ಸಮಸ್ಯೆಗೆ ಸಂಬಂಧಿಸಿದಂತೆ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಆರೋಗ್ಯ ಇಲಾಖೆಯು ಇಂದು ಮಾರ್ಗಸೂಚಿಗಳನ್ನು ನೀಡಲಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಕೊರೊನಾ ವೈರಸ್ ಮ್ಯುಟೇಶನ್ ಬಗ್ಗೆ ಯಾರೂ ಆತಂಕ ಪಡಬೇಕಾಗಿಲ್ಲ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ ಎಂದರು. ಮಾಕುಟ್ಟ ಚೆಕ್ ಪೋಸ್ಟ್ ನಲ್ಲಿ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುತ್ತಿದೆ. ಹೆಚ್ಚಿನ ತಪಾಸಣೆ ನಡೆಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೂ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ.

ಅಗತ್ಯವಿರುವ ಹಾಸಿಗೆ, ಪಿಪಿಇ ಕಿಟ್ ಮತ್ತು ಆಮ್ಲಜನಕವನ್ನು ಸಿದ್ಧವಾಗಿಟ್ಟುಕೊಳ್ಳಲು ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಿಳಿಸಲಾಗಿದೆ. ಕೇರಳ ಗಡಿ ಜಿಲ್ಲೆಗಳಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ಶೀತ, ಜ್ವರ ಮತ್ತು ಕೆಮ್ಮು ಇರುವವರು ಕೋವಿಡ್-19 ಪರೀಕ್ಷೆಗೆ ಒಳಗಾಗುವಂತೆ ಎಚ್ಚರಿಕೆ ನೀಡಲಾಗಿದೆ. ‘ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾದರೆ ಮಾತ್ರ ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಧ್ಯರಾತ್ರಿ ಮಾರತ್ತಹಳ್ಳಿ ಬ್ರಿಡ್ಜ್ ಸಮೀಪ ಭಾರೀ ಅಗ್ನಿ ಅವಘಡ; ಬೆಂಕಿಯ ಕೆನ್ನಾಲಗೆಗೆ ಬೆಚ್ಚಿಬಿದ್ದ ಬೆಂಗಳೂರು!

ಏತನ್ಮಧ್ಯೆ, ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಪ್ರಯಾಣಿಕರಿಗೆ ಥರ್ಮಲ್ ಸ್ಕ್ಯಾನಿಂಗ್ ಪ್ರಕ್ರಿಯೆ ನಡೆಯುತ್ತಿರುವುದರಿಂದ ಕೊಡಗು-ಕೇರಳ ಗಡಿಯಲ್ಲಿರುವ ಚೆಕ್ ಪೋಸ್ಟ್‌ಗಳು ಕಟ್ಟೆಚ್ಚರ ವಹಿಸಲಿವೆ. ಕುಟ್ಟ, ಮಾಕುಟ್ಟ ಮತ್ತು ಕರಿಕೆ ಚೆಕ್ ಪೋಸ್ಟ್‌ಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ಜ್ವರದಂತಹ ರೋಗಲಕ್ಷಣಗಳನ್ನು ಹೊಂದಿರುವ ಯಾರಾದರೂ ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಕೋವಿಡ್ -19 ಪರೀಕ್ಷೆಗೆ ಒಳಗಾಗುವುದನ್ನು ಕಡ್ಡಾಯಗೊಳಿಸಲಾಗುತ್ತದೆ ಎಂದಿದ್ದಾರೆ.

click me!