ಪುನೀತ್‌ ಎಫೆಕ್ಟ್ : ಹೃದಯ ಪರೀಕ್ಷೆ ಬಿಸಿನೆಸ್‌ ಜೋರು!

By Kannadaprabha News  |  First Published Nov 4, 2021, 7:00 AM IST
  • ಪವರ್‌ ಸ್ಟಾರ್‌ ‘ಸಡನ್‌ ಡೆತ್‌’ನ ಪರಿಣಾಮ ಜನರಲ್ಲಿ ಹೃದಯದ ಆರೋಗ್ಯದ ಬಗ್ಗೆ ಕಳವಳ ಹೆಚ್ಚಳ
  • ಆಸ್ಪತ್ರೆಗಳಿಗೆ ದೌಡು - ಡಯಾಗ್ನೋಸ್ಟಿಕ್‌ ಕೇಂದ್ರಗಳಲ್ಲಿ ವಿಶೇಷ ತಪಾಸಣಾ ಶಿಬಿರ
  • ಪುನೀತ್‌ ಶ್ರದ್ಧಾಂಜಲಿ ಫ್ಲೆಕ್ಸ್‌ನಲ್ಲೇ ಡಿಸ್ಕೌಂಟ್‌ ಪ್ಯಾಕೇಜ್‌
     

 ಬೆಂಗಳೂರು (ನ.04):  ನಟ ಪುನೀತ್‌ ರಾಜ್‌ಕುಮಾರ್‌ (Puneeth rajkumar) ಹೃದಯ ಸ್ತಂಭನಕ್ಕೆ (Cardiac Arrest) ಒಳಗಾಗಿ ದಿಢೀರ್‌ ಸಾವನ್ನಪ್ಪಿದ ಬೆನ್ನಲ್ಲೇ ಡಯಾಗ್ನೋಸ್ಟಿಕ್‌ (ರೋಗ ಪತ್ತೆ ಕೇಂದ್ರಗಳು) ಕೇಂದ್ರಗಳಿಗೆ ಎಡತಾಕುವ ಜನರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗತೊಡಗಿದೆ. ಇದನ್ನೇ ವ್ಯಾಪಾರದ ಹೊಸ ಅವಕಾಶವಾಗಿ ಬಳಸಿಕೊಳ್ಳುತ್ತಿರುವ ಕೇಂದ್ರಗಳು, ಆರೋಗ್ಯ ತಪಾಸಣೆಯ (Health Checkup) ಹೊಸ ಹೊಸ ಪ್ಯಾಕೇಜ್‌ ಘೋಷಿಸಲು ಆರಂಭಿಸಿವೆ.

ಪುನೀತ್‌ ಅವರು ಜಿಮ್‌ನಲ್ಲಿ (Gym) ಅಭ್ಯಾಸದ ಬಳಿಕ ಎದೆ ನೋವಿಗೆ ತುತ್ತಾಗಿದ್ದರು ಎಂಬ ಸುದ್ದಿ ಹಬ್ಬಿದ ನಂತರ ಮಾರನೇ ದಿನದಿಂದಲೇ ಬೆಂಗಳೂರು (bengaluru), ಮೈಸೂರು, ಮಂಡ್ಯ, ಮಂಗಳೂರು (Mangaluru) ಸೇರಿ ಹಲವೆಡೆ ಹೃದ್ರೋಗ ಆಸ್ಪತ್ರೆಗಳಿಗೆ ಜನ ದಾಂಗುಡಿ ಇಟ್ಟಿದ್ದರು. ಅದರ ಬೆನ್ನಲ್ಲೇ ಇದೀಗ ಹೃದಯ ಸಂಬಂಧಿ ಇತರೆ ಸಮಸ್ಯೆಗಳು ಇದ್ದರೆ ಪತ್ತೆಯಾಗಲಿ ಎನ್ನುವ ಕಾರಣಕ್ಕಾಗಿ ಜನರು ಸಾವಿರಾರು ಸಂಖ್ಯೆಯಲ್ಲಿ ಡಯಾಗ್ನೋಸ್ಟಿಕ್‌ ಸೆಂಟರ್‌ಗಳಿಗೆ ಮೊರೆ ಹೋಗುತ್ತಿದ್ದಾರೆ.

Tap to resize

Latest Videos

ಹೀಗಾಗಿ ರಾಜ್ಯದ ಹಲವು ಭಾಗಗಳಲ್ಲಿ ಡಯಾಗ್ನೋಸ್ಟಿಕ್‌ ಸೆಂಟರ್‌ಗಳು ಇಸಿಜಿ, ಆರ್‌ಬಿಎಸ್‌, ರಕ್ತದೊತ್ತಡ, ರಕ್ತದಲ್ಲಿನ ಕೊಬ್ಬಿನ ಅಂಶ ಮೊದಲಾದ ಪರೀಕ್ಷೆಗಳನ್ನು ನಡೆಸುವ ವಿಶೇಷ ಪ್ಯಾಕೇಜ್‌ ಘೋಷಿಸಿವೆ. ಇನ್ನು ಕೆಲವು ಆಸ್ಪತ್ರೆಗಳಂತೂ ವಿಶೇಷ ರಿಯಾಯಿತಿ ಘೋಷಿಸಿ ಆರೋಗ್ಯ ತಪಾಸಣಾ ಶಿಬಿರಗಳನ್ನೇ ಆಯೋಜಿಸಿವೆ.

ಶ್ರದ್ಧಾಂಜಲಿ ವ್ಯಾಪಾರಕ್ಕೆ ಟೀಕೆ:

ಈ ನಡುವೆ ಕೆಲ ಆಸ್ಪತ್ರೆಗಳು ಪುನೀತ್‌ಗೆ ಶ್ರದ್ಧಾಂಜಲಿ ಸಲ್ಲಿಸಿ ಆಸ್ಪತ್ರೆಯ ಮುಂದೆ ನಿಲ್ಲಿಸಿದ ಫ್ಲೆಕ್ಸ್‌ಗಳಲ್ಲೇ ಇಂಥ ಪ್ಯಾಕೇಜ್‌ ಮಾಹಿತಿಯನ್ನೂ ಪ್ರಕಟಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗುತ್ತಿದೆ. ಪುನೀತ್‌ ನಿಧನದ ಆಘಾತದಿಂದ ಕೋಟ್ಯಂತರ ಕನ್ನಡಿಗರು ಮರುಗುತ್ತಿದ್ದರೆ ಕೆಲವು ಡಯಾಗ್ನೋಸ್ಟಿಕ್‌ ಕೇಂದ್ರಗಳು ಹಾಗೂ ಆಸ್ಪತ್ರೆಗಳು ಅಪ್ಪು ಸಾವನ್ನು ಮುಂದಿಟ್ಟುಕೊಡು ವ್ಯಾಪಾರ ಮಾಡಿಕೊಳ್ಳುತ್ತಿರುವುದು ಖಂಡನೀಯ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ಕ್ರೆಡೆಂಟ್‌ ಡಯಾಗ್ನೋಸ್ಟಿಕ್‌ ಎಂಬ ಕೇಂದ್ರವು ಪುನೀತ್‌ ರಾಜ್‌ಕುಮಾರ್‌ಗೆ ಶ್ರದ್ಧಾಂಜಲಿ ಸಲ್ಲಿಸಲು ಹಲವೆಡೆ ಫ್ಲೆಕ್ಸ್‌ ಅಳವಡಿಸಿದೆ. ಇದರಲ್ಲಿ ‘ಪುನೀತ್‌ ರಾಜ್‌ಕುಮಾರ್‌ ಹೃದಯ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಹೃದಯ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸಲು ಅ.31ರಂದು ಭಾನುವಾರ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ವಿಶೇಷ ಶಿಬಿರ ನಡೆಸಲಾಗುವುದು. ಜತೆಗೆ ಇಸಿಜಿ, ಆರ್‌ಬಿಎಸ್‌, ರಕ್ತದೊತ್ತಡ, ರಕ್ತದಲ್ಲಿನ ಕೊಬ್ಬಿನಾಂಶದಂತಹ ಪರೀಕ್ಷೆ ನಡೆಸಲಾಗುವುದು. 300 ರು. ವಿಶೇಷ ರಿಯಾಯಿತಿಯೂ ಇದೆ’ ಎಂದು ಮಾಹಿತಿ ನೀಡಿದೆ.

ಇನ್ನು ಶುಕ್ರವಾರ ಪುನೀತ್‌ ಅವರು ನಿಧನರಾದ ದಿನ ತಮ್ಮ ಆಸ್ಪತ್ರೆಯ ಸಾಮಾಜಿಕ ಜಾಲತಾಣ ಪುಟಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದ ಹಲವು ಆಸ್ಪತ್ರೆಗಳು ಮರು ದಿನವೇ ಹೃದ್ರೋಗ ಪರೀಕ್ಷೆಗೆ ವಿಶೇಷ ಪ್ಯಾಕೇಜ್‌ಗಳನ್ನು ಪ್ರಕಟಿಸಿವೆ.

 
ಆರೋಗ್ಯ ಕಾಳಜಿ

- ಕಟ್ಟುಮಸ್ತಾಗಿದ್ದ ಚಿತ್ರನಟ ಪುನೀತ್‌ ಹೃದಯ ಸ್ತಂಭನದಿಂದ ಮೃತಪಟ್ಟಿದ್ದರಿಂದ ಯುವಕರಲ್ಲಿ ಆತಂಕ

- ಹೃದಯ ತಪಾಸಣೆಗಾಗಿ ಆಸ್ಪತ್ರೆ, ಡಯಾಗ್ನೋಸ್ಟಿಕ್‌ ಕೇಂದ್ರಗಳಿಗೆ ತೆರಳುವವರ ಸಂಖ್ಯೆ ದಿಢೀರ್‌ ಏರಿಕೆ

- ಇದನ್ನೇ ಬಿಸಿನೆಸ್‌ ಅವಕಾಶವಾಗಿ ಬಳಸಿಕೊಂಡ ಡಯಾಗ್ನೋಸ್ಟಿಕ್‌ ಕೇಂದ್ರಗಳಿಂದ ಡಿಸ್ಕೌಂಟ್‌ ಪ್ಯಾಕೇಜ್‌

- ಪುನೀತ್‌ ಸಾವಿಗೆ ಶ್ರದ್ಧಾಂಜಲಿ ಸಲ್ಲಿಸುವ ನೆಪದಲ್ಲಿ ಫ್ಲೆಕ್ಸ್‌ ಪ್ರದರ್ಶಿಸಿ, ಅದರಲ್ಲೇ ಟೆಸ್ಟ್‌ ಬಗ್ಗೆ ಪ್ರಚಾರ

- ಇಸಿಜಿ, ಆರ್‌ಬಿಎಸ್‌, ಕೊಬ್ಬಿನಂಶ ಮುಂತಾದ ಪರೀಕ್ಷೆಗಳಿಗೆ ವಿಶೇಷ ಪ್ಯಾಕೇಜ್‌, ಡಿಸ್ಕೌಂಟ್‌ ಘೋಷಣೆ

- ಪುನೀತ್‌ ಅವರು ಜಿಮ್‌ನಲ್ಲಿ ಅಭ್ಯಾಸದ ಬಳಿಕ ಎದೆ ನೋವಿಗೆ ತುತ್ತಾಗಿದ್ದರು ಎಂಬ ಸುದ್ದಿ

- ಶ್ರದ್ಧಾಂಜಲಿ ಸಲ್ಲಿಸಿದ್ದ ಹಲವು ಆಸ್ಪತ್ರೆಗಳು ಮರು ದಿನವೇ ಹೃದ್ರೋಗ ಪರೀಕ್ಷೆಗೆ ವಿಶೇಷ ಪ್ಯಾಕೇಜ್‌ಗಳನ್ನು ಪ್ರಕಟಿಸಿವೆ.

click me!