ನನಗೂ ಬಂಧಿತ ಅಜಿತ್ ರೈಗೂ ಯಾವುದೇ ಸಂಬಂಧವಿಲ್ಲ, ಥೈಲ್ಯಾಂಡ್ ನಿಂದ ಭೂಗತ ಕ್ರಿಮಿನಲ್ ಮನ್ವಿತ್ ರೈ ಹೇಳಿಕೆ

By Gowthami KFirst Published Jul 3, 2023, 11:45 AM IST
Highlights

ನೂರಾರು ಕೋಟಿ ರು. ಅಕ್ರಮ ಆಸ್ತಿ ಪತ್ತೆಯಾದ ಕಾರಣ ಲೋಕಾಯುಕ್ತರ ವಶದಲ್ಲಿರುವ ಕೆ.ಆರ್‌. ಪುರ ತಹಸೀಲ್ದಾರ್‌ ಅಜಿತ್‌ ಕುಮಾರ್‌ ರೈ ಹಾಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಅಂಡರ್‌ ವರ್ಲ್ಡ್ ನ ಮನ್ವಿತ್ ರೈ ಹೇಳಿದ್ದಾನೆ.

ಬೆಂಗಳೂರು (ಜು.3): ನೂರಾರು ಕೋಟಿ ರು. ಅಕ್ರಮ ಆಸ್ತಿ ಪತ್ತೆಯಾದ ಕಾರಣ ಲೋಕಾಯುಕ್ತರ ವಶದಲ್ಲಿರುವ ಕೆ.ಆರ್‌. ಪುರ ತಹಸೀಲ್ದಾರ್‌ ಅಜಿತ್‌ ಕುಮಾರ್‌ ರೈ ಹಾಗೂ ಅಂಡರ್‌ ವರ್ಲ್ಡ್ ನ ಮನ್ವಿತ್ ರೈ ಜೊತೆ ಸಂಪರ್ಕ ಇದೆ ಎಂಬ ಸುದ್ದಿಗೆ ಥೈಲ್ಯಾಂಡ್ ನಿಂದ ಅಂಡರ್‌ ವರ್ಲ್ಡ್ ಕ್ರಿಮಿನಲ್ ಮನ್ವಿತ್ ರೈ ಪ್ರತಿಕ್ರಿಯೆ ನೀಡಿದ್ದಾರೆ. ಅಜಿತ್ ರೈ ಕೇಸ್ ನಲ್ಲಿ ನನ್ನ ಹೆಸರು ಬಳಕೆ ಮಾಡಲಾಗುತ್ತಿದೆ. ನಾನು ಮತ್ತು ಅವರು ಒಂದೇ ಊರಿನವರು ಅನ್ನೋದು ನಿಜ. ಆದರೆ ಅವರ ವ್ಯವಹಾರದಲ್ಲಿ ನಮಗೆ ಯಾವುದೇ ಸಂಬಂಧ ಇಲ್ಲ. ನಾವು ಮೊದಲಿನಿಂದಲೂ ಒಳ್ಳೆಯ ಗೆಳೆಯರು ಅಷ್ಟೇ. ನ್ಯೂಸ್ ನಲ್ಲಿ ನನಗೂ ಅಜಿತ್ ರೈ ಗೂ ವ್ಯಾವಹಾರಿಕ ಸಂಬಂಧ ಇದೆ ಎಂದು ಸುದ್ದಿ ಬರುತ್ತಿದೆ. ನನ್ನ ಮತ್ತು  ಅಜಿತ್ ರೈ ಹೆಸರಲ್ಲಿ ಯಾವುದೇ ಜಾಗದ ದಾಖಲೆ ಇದ್ದರೆ ನಾನೇ ಬಂದು ಶರಣಾಗತಿ ಆಗ್ತೀನಿ. ನಾನು ಥೈಲ್ಯಾಂಡ್ ಬಂದು ಒಂದೂವರೆ ವರ್ಷ ಆಯ್ತು, ಊರಿಗೆ ಬಂದಿಲ್ಲ. ನಾನು ಇಲ್ಲಿ ನನ್ನ ವ್ಯವಹಾರ ಮಾಡಿಕೊಂಡು ಇದ್ದೇನೆ. ಇತ್ತೀಚಿಗೆ ಗುಣರಂಜನ್ ಶೆಟ್ಟಿ ಕೇಸ್ ನಲ್ಲೂ ನನ್ನ ಹೆಸರು ಪ್ರಸ್ತಾಪ ಆಗಿತ್ತು. ಆದರೆ ತನಿಖೆ‌ ಆಗಿ ‌ನನ್ನ ಪಾತ್ರ ಇಲ್ಲ ಅಂತ ಬಂದಿದೆ. ಇದೀಗ ಮತ್ತೆ ನನ್ನ ಹೆಸರು ಬರುತ್ತಿದೆ, ನಾನು ಕಾ‌ನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಕೋಟ್ಯಂತರ ರೂ ಅಕ್ರಮ ಆಸ್ತಿ ಗಳಿಸಿ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ Tahsildar Ajith Rai ಯಾರು, ಹಿನ್ನೆಲೆ ಏನು?

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಬಂಧಿತನಾಗಿರುವ ಕೆ.ಆರ್‌.ಪುರ ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ಅವರ ಆಸ್ತಿ ಮೌಲ್ಯ 500 ಕೋಟಿ ರು. ದಾಟಿರುವ ಕಾರಣ ಅವರಿಗೆ ಜಾರಿ ನಿರ್ದೇಶನಾಲಯದ (ಇ.ಡಿ.) ಕಂಟಕ ಎದುರಾಗಲಿದೆ.

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿರುವ ಲೋಕಾಯುಕ್ತ ಪೊಲೀಸರಿಗೆ ಆಸ್ತಿಯ ಕುರಿತು ಹಲವು ಮಾಹಿತಿಗಳು ಲಭ್ಯವಾಗುತ್ತಿವೆ. ಅಕ್ರಮ ಹಣ ವರ್ಗಾವಣೆ, ತೆರಿಗೆ ವಂಚನೆ ಮಾಡಿರುವುದು ಪ್ರಾಥಮಿಕ ಹಂತದ ವಿಚಾರಣೆಯಲ್ಲಿ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಸಂಪೂರ್ಣವಾಗಿ ವಿಚಾರಣೆ ಮುಕ್ತಾಯಗೊಳಿಸಿದ ಬಳಿಕ ಇ.ಡಿ. ತನಿಖೆಗೆ ಪತ್ರ ಬರೆಯಲಿದ್ದಾರೆ. ತದನಂತರ ಇ.ಡಿ. ಅಧಿಕಾರಿಗಳು ತನಿಖೆಗೆ ಪ್ರವೇಶಿಸಿ, ಕೋಟ್ಯಂತರ ರು. ಹಣ ವಹಿವಾಟಿನ ಕುರಿತು ತನಿಖೆಯನ್ನು ಕೈಗೆತ್ತಿಕೊಂಡ ಬಳಿಕ ಮತ್ತಷ್ಟುಅಂಶಗಳು ಬಯಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ರೈ ಅವರಿಗೆ 150 ಎಕರೆ ಜಮೀನು, 40 ಲಕ್ಷ ರು. ನಗದು ಸೇರಿ ಕೋಟ್ಯಂತರ ರು. ಮೌಲ್ಯದ ಆಸ್ತಿ ಇರುವುದು ಲೋಕಾಯುಕ್ತ ಪೊಲೀಸರ ತನಿಖೆ ವೇಳೆ ಪತ್ತೆಯಾಗಿದೆ. ಇದೇ ವೇಳೆ ಐಷಾರಾಮಿ ಕಾರ್‌ಗಳು, ವಾಚ್‌ಗಳು, ವಿದೇಶಿ ಮದ್ಯಗಳು ಸಹ ಪತ್ತೆಯಾಗಿವೆ. ಈ ಬಗ್ಗೆ ಇ.ಡಿ. ಅಧಿಕಾರಿಗಳು ಅನಧಿಕೃತವಾಗಿ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಅಲ್ಲದೇ, ಪ್ರಕರಣ ಸಂಬಂಧ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಮತ್ತು ಹಣದ ಮೂಲದ ವಿಚಾರಗಳನ್ನು ಕ್ರೋಡೀಕರಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

250 ಎಕರೆ ಭೂಮಿ ಖರೀದಿಸಿರುವ ಅಜಿತ್‌ ರೈ : ಅಂಡರ್‌ವಲ್ಡ್‌ ಕ್ರಿಮಿ ಮಾನ್ವಿತ್‌ ರೈ ಜೊತೆ ನಂಟು ?

ದೊಡ್ಡಬಳ್ಳಾಪುರದಲ್ಲಿ ತಾಲೂಕಿನಲ್ಲಿ ತನ್ನ 150 ಎಕರೆ ಜಮೀನಿನಲ್ಲಿ ದೇಶದ ಎರಡನೇ ಹಾಗೂ ರಾಜ್ಯದಲ್ಲೇ ಮೊದಲ ಫಾರ್ಮುಲಾ-1 ರೇಸ್‌ ಟ್ರ್ಯಾಕ್‌ ನಿರ್ಮಾಣಕ್ಕೆ ರೈ ಪೂರ್ವಸಿದ್ಧತೆ ಕೈಗೊಂಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಈ ಸಂಬಂಧ ಮನೆ ಮೇಲೆ ನಡೆಸಿದ ದಾಳಿ ವೇಳೆ ದಾಖಲೆಗಳು ಸಹ ಪತ್ತೆಯಾಗಿವೆ. ದೇಶದ ಮೊದಲ ಫಾರ್ಮುಲಾ ರೇಸ್‌ ಟ್ರ್ಯಾಕ್‌ ಹೊಂದಿರುವ ಉತ್ತರ ಪ್ರದೇಶದ ನೋಯ್ಡಾ ನಗರದ ‘ಬುದ್ಧ ಇಂಟರ್‌ನ್ಯಾಷನಲ್‌ ಸರ್ಕಿಟ್‌’ಗೆ ಭೇಟಿ ನೀಡಿ ಮಾಹಿತಿ ಪಡೆದಿರುವ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಈ ಎಲ್ಲಾ ದಾಖಲೆಗಳನ್ನು ಇ.ಡಿ. ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಒದಗಿಸಲಿದ್ದಾರೆ. ಇ.ಡಿ. ಅಧಿಕಾರಿಗಳು ತನಿಖೆಗೆ ಪ್ರವೇಶಿಸಿದ ಬಳಿಕ ಈ ವಿಚಾರದಲ್ಲಿ ಮತ್ತಷ್ಟುಅಂಶಗಳು ಬಯಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಆರೋಪಿಯ ಆಪ್ತರು ಕೂಡ ಆರೋಪಿಗಳು:
ಬಂಧಿತ ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ಬೇನಾಮಿಯಾಗಿ ಕೋಟ್ಯಂತರ ರು. ಮೌಲ್ಯದ ಆಸ್ತಿಯನ್ನು ಸಂಪಾದಿಸಿದ್ದು, ಬೇನಾಮಿ ಹೆಸರಲ್ಲಿರುವ ಆವರ ಬಂಟರನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿಸಲು ಲೋಕಾಯುಕ್ತ ಪೊಲೀಸರು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ ಎಂದು ತಿಳಿದುಬಂದಿದೆ.

ಸಹೋದರ ಅಶಿತ್‌ ರೈ, ಸಂಬಂಧಿ ಗೌರವ್‌ ಶೆಟ್ಟಿಮತ್ತು ಆತನ ಆಪ್ತರಾದ ಕೃಷ್ಣಪ್ಪ, ನವೀನ್‌ಕುಮಾರ್‌, ಹರ್ಷವರ್ಧನ್‌ ಸಹ ಆರೋಪಿಯ ಕೋಟ್ಯಂತರ ಆಸ್ತಿಯಲ್ಲಿ ಪಾಲುದಾರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಐವರನ್ನು ಆರೋಪಿಯನ್ನಾಗಿಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಜಿತ್‌ಕುಮಾರ್‌ ರೈ ಮನೆಯಲ್ಲಿ ನೂರಾರು ಎಕರೆ ಆಸ್ತಿಯ ಪತ್ರಗಳ ಜತೆಗೆ 11 ಐಷಾರಾಮಿ ಕಾರ್‌ಗಳು, ಬೈಕ್‌ಗಳು ಜಪ್ತಿಯಾಗಿದ್ದು, ಇವುಗಳನ್ನು ರೈ ಆಪ್ತರ ಹೆಸರಲ್ಲಿ ನೋಂದಣಿ ಮಾಡಿರುವುದಕ್ಕೆ ಪೂರಕ ದಾಖಲೆಗಳು ಲಭ್ಯವಾಗಿವೆ. ಈ ಹಿನ್ನೆಲೆಯಲ್ಲಿ ಅವರನ್ನು ಆರೋಪಿಯನ್ನಾಗಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

1368 ಸಂಖ್ಯೆಯ 10 ಸಿಮ್‌ಕಾರ್ಡ್‌ ಪತ್ತೆ?
ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ಬಳಿ ಒಂದೇ ಸಂಖ್ಯೆಯ ಕಾರ್‌, ಬೈಕ್‌ ಮಾತ್ರವಲ್ಲದೇ, ಸಿಮ್‌ಕಾರ್ಡ್‌ಗಳು ಸಹ ಪತ್ತೆಯಾಗಿವೆ ಎಂದು ಹೇಳಲಾಗಿದೆ. ಸಂಖ್ಯಾಶಾಸ್ತ್ರ, ಜ್ಯೋತಿಷ್ಯವನ್ನು ನಂಬುತ್ತಿದ್ದ ಆರೋಪಿ ಬಳಿ ಹಲವು ಸಿಮ್‌ಕಾರ್ಡ್‌ಗಳ ಕೊನೆ ಸಂಖ್ಯೆ 1368 ಆಗಿರುವ ವಿಚಾರವು ತನಿಖೆಯ ವೇಳೆ ಗೊತ್ತಾಗಿದೆ. ಇದು ಆತನಿಗೆ ಅದೃಷ್ಟದ ಸಂಖ್ಯೆ ಎಂಬ ಕಾರಣಕ್ಕಾಗಿ ಅದೇ ಸಂಖ್ಯೆಯನ್ನು ಬಳಕೆ ಮಾಡುತ್ತಿದ್ದರು ಎನ್ನಲಾಗಿದೆ. ಕಾರ್‌, ಬೈಕ್‌ಗಳ ಸಂಖ್ಯೆಯು 1368 ಆಗಿದೆ.
 

click me!