
ಸ್ವಸ್ತಿಕ್ ಕನ್ಯಾಡಿ, ಏಷಿಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಏ.4) : ಮಾವಿನ ಸೀಸನ್ ಬಂತು ಅಂದಾಗ ಎಲ್ಲರ ಬಾಯಲ್ಲೂ ನೀರೂರೋದು ಸಹಜ. ಅದರಲ್ಲೂ ಫ್ರೆಷ್ ಮ್ಯಾಂಗೋ ಸವಿಯಬೇಕು ಅನ್ನುವ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಇದಕ್ಕೀಗ ಭಾರತೀಯ ಅಂಚೆ ಇಲಾಖೆ ಒಂದು ಹೆಜ್ಜೆ ಮುಂದೆ ಸಾಗಿ ನಿಮ್ಮ ಮನೆ ಬಾಗಿಲಿಗೆ ತಾಜಾ ಮಾವಿನಹಣ್ಣು ತಲುಪಿಸಲು ತಯಾರಾಗಿದೆ. ಕಳೆದ ಐದು ವರ್ಷಗಳಿಂದ ಅಂಚೆ ಇಲಾಖೆ ಈ ಸೇವೆ ನೀಡುತ್ತಾ ಬಂದಿದ್ದು ಈ ವರ್ಷ ಮತ್ತೆ ಈ ಸೇವೆ ಆರಂಭಗೊಂಡಿದೆ.
'ಮಾವು' ಈ ಋತುವಿನ ಮಾವನ್ನು ಮನೆಯಲ್ಲೇ ಕುಳಿತು ಸವಿಯಿರಿ, ಭಾರತೀಯ ಅಂಚೆ ಇಲಾಖೆಯ ಮೂಲಕ ರೈತರಿಂದ ನೇರವಾಗಿ ನಿಮ್ಮ ಮನೆ ಬಾಗಿಲಿಗೆ ಎಂಬ ಟ್ಯಾಗ್ ಲೈನ್ ನೊಂದಿಗೆ ಈ ಯೋಜನೆ ಆರಂಭಗೊಂಡಿದ್ದು ಬೆಂಗಳೂರಿನ ಪೋಸ್ಟ್ ಮಾಸ್ಟರ್ ಜನರಲ್ ಕಚೇರಿ ಆವರಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಾವು ಬೆಳೆಗಾರರು ಮಾವಿನ ಹಣ್ಣುಗಳ ಬಾಕ್ಸ್ ಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿ ಗ್ರಾಹಕರಿಗೆ ಮಾವಿನ ಹಣ್ಣನ್ನು ತಲುಪಿಸುವ ಕಾರ್ಯ ಆರಂಭಿಸಿದರು. ಇದು ಕೇವಲ ಒಂದೇ ದಿನದಲ್ಲಿ ಗ್ರಾಹಕರಿಗೆ ತಲುಪಲಿದ್ದು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ರೈತರಿಂದ ಗ್ರಾಹಕರಿಗೆ ಮಾವಿನ ಹಣ್ಣುಗಳು ತಲುಪಲಿವೆ.
2019 ಮಾರ್ಚ್ ನಿಂದ ಪ್ರತೀ ಮಾವಿನ ಸೀಸನ್ ನಲ್ಲಿ ಭಾರತೀಯ ಅಂಚೆ ಇಲಾಖೆ ಈ ಸೇವೆಯನ್ನು ಒದಗಿಸುತ್ತಿದ್ದು ಇಲ್ಲಿಯವರೆಗೆ 92,265 ಪಾರ್ಸೆಲ್ ಗಳನ್ನು ಯಶಸ್ವಿಯಾಗಿ ತಲುಪಿಸಿದೆ. ಒಟ್ಟು 3,15,019.98 ಕೆ.ಜಿ ತೂಕದ ಮಾವಿನ ಹಣ್ಣುಗಳು ಮಾರಾಟವಾಗಿದ್ದು 74,59,265 ರೂ ವ್ಯವಹಾರ ನಡೆಸಿದೆ.
ಈಗಾಗಲೇ ಕೋಲಾರ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ರೈತರು ಮಾವಿನ ಹಣ್ಣುಗಳನ್ನು ಗ್ರಾಹಕರಿಗೆ ತಲುಪಿಸುತ್ತಿದ್ದು ಬೆಂಗಳೂರಿನ ಸುತ್ತಮುತ್ತ ಮಾವಿನ ಹಣ್ಣಿನ ಸರಬರಾಜು ನಡೀತಿದೆ. ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಮಾವಿನ ಹಣ್ಣು ಗ್ರಾಹಕರಿಗೆ ತಲುಪುವುದರಿಂದ ಗ್ರಾಹಕರಿಗೂ ಅನುಕೂಲ. ತೋಟದಿಂದ ನೇರವಾಗಿ ನಾವೇ ಕೊಯ್ದು ತಂದು ಮಾರಾಟ ಮಾಡೋದ್ರಿಂದ ಮಧ್ಯವರ್ತಿಗಳಿಗೆ ಕೊಡೋ ಹಣವೂ ತಪ್ಪುತ್ತದೆ ಅಂತಾರೆ ಮಾವು ಬೆಳೆಗಾರರು.
ಬುಕ್ ಮಾಡೋದು ಹೇಗೆ?
Www.kolaramangoes.com. ಪೋರ್ಟಲ್ ಮೂಲಕ ಮಾವಿನ ಹಣ್ಣುಗಳನ್ನು ಆರ್ಡರ್ ಮಾಡಬಹುದಾಗಿದೆ. ಮೂರು ಕೆ.ಜಿ ಬಾಕ್ಸ್ ಗೆ 850₹ ಚಾರ್ಜ್ ಮಾಡಲಾಗುತ್ತಿದ್ದು ಆನ್ಲೈನ್ ಮೂಲಕ ಪೇಮೆಂಟ್ ಮಾಡಿದರೆ ಒಂದೇ ದಿನದಲ್ಲಿ ಮಾವಿನಹಣ್ಣು ನಿಮ್ಮ ಮನೆ ಬಾಗಿಲಿನಲ್ಲಿರುತ್ತದೆ.
ಮಾವಿನಹಣ್ಣು ಕೆಡದಂತೆ ಅಂಚೆ ಇಲಾಖೆ ತಲುಪಿಸಲು ಸಾಧ್ಯವೇ?
ಭಾರತೀಯ ಅಂಚೆ ಇಲಾಖೆಯ ಪೋಸ್ಟ್ ಮಾಸ್ಟರ್ ಜನರಲ್ ಈ ಬಗ್ಗೆ ಪ್ರತಿಕ್ರಿಯಿಸಿ ಇಂದು ಭಾರತೀಯ ಅಂಚೆ ಇಲಾಖೆ ಆನ್ ರೋಡ್ ಮೂಲಕ ಅತ್ಯುತ್ತಮ ನೆಟ್ವರ್ಕ್ ಹೊಂದಿದ್ದು ಕೇವಲ ಒಂದೇ ದಿನದಲ್ಲಿ ಮುಂಬೈನಿಂದ ಕರ್ನಾಟಕಕ್ಕೆ ಡೆಲಿವರಿ ಕೊಡುವಷ್ಟು ತ್ವರಿತವಾಗಿ ಕಾರ್ಯ ನಿರ್ವಹಿಸುತ್ತಿದೆ. ಹಾಗಾಗಿ ದೊಡ್ಡ ಚಾಲೆಂಜ್ ಅಲ್ಲವೇ ಅಲ್ಲ. ಸರಿಯಾದ ಸಮಯಕ್ಕೆ ನಾವು ಹಣ್ಣುಗಳನ್ನು ತಲುಪಿಸಬಲ್ಲೆವು ಎಂದರು. ಈಗ ಸದ್ಯ ಬೆಂಗಳೂರಿನಲ್ಲಿ ಗ್ರಾಹಕರಿಗೆ ಮಾವಿನ ಹಣ್ಣುಗಳು ಸರಬರಾಜು ಆಗುತ್ತಿದ್ದು ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಈ ಸೇವೆ ವಿಸ್ತರಿಸಲು ಪ್ಲಾನ್ ಮಾಡಲಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ