ಈ ವರ್ಷ ಮಾವು ಬಂಪರ್‌ ಇಳುವರಿ : ಲಾಭದ ನಿರೀಕ್ಷೆಯಲ್ಲಿ ಬೆಳೆಗಾರ

By Kannadaprabha NewsFirst Published Jan 25, 2021, 8:25 AM IST
Highlights

ರಾಜ್ಯದಲ್ಲಿ ಈ ವರ್ಷ ಮಾವಿನ ಫಸಲು ಅತ್ಯಂತ ಹೆಚ್ಚಾಗಿದೆ. ಹೆಚ್ಚಿನ ತೆನೆ ಕಾಣಿಸಿಕೊಂಡಿದ್ದು ಬೆಳೆಗಾರರು ಲಾಭದ ನಿರೀಕ್ಷೆಯಲ್ಲಿದ್ದಾರೆ. 

 ಬೆಂಗಳೂರು (ಜ.25):  ರಾಜ್ಯದಲ್ಲಿ ಮಾವು ಬೆಳೆಯುವ ಜಿಲ್ಲೆಗಳ ಮಾವಿನ ಮರಗಳಲ್ಲಿ ಭರ್ಜರಿ ಹೂವು ಕಾಣಿಸುತ್ತಿದ್ದು, ಭಾರೀ ಇಳುವರಿಯ ನಿರೀಕ್ಷೆ ಹುಟ್ಟುಹಾಕಿದೆ.

ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಮಳೆ ಕೊರತೆ ಮತ್ತು ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿದ್ದ ಪರಿಣಾಮ ನಿರೀಕ್ಷಿತ ಪ್ರಮಾಣದಲ್ಲಿ ಮಾವು ಫಸಲು ನೀಡಿರಲಿಲ್ಲ. ಆದರೆ, ಪ್ರಸಕ್ತ ವರ್ಷ ಅತಿ ಹೆಚ್ಚು ಮಳೆ ಬಿದ್ದಿದೆ. ಭೂಮಿಯಲ್ಲಿ ತೇವಾಂಶವಿದ್ದು ಅತ್ಯುತ್ತಮವಾಗಿ ಮರಗಳು ಹೂವು ಬಿಟ್ಟಿವೆ. ಜೊತೆಗೆ, ಪ್ರಸ್ತುತ ಯಾವುದೇ ಚಂಡಮಾರುತಗಳು ಇಲ್ಲ. ಅಲ್ಲದೆ, ಇಬ್ಬನಿ ಬೀಳುತ್ತಿರುವ ಪ್ರಮಾಣವೂ ಕಡಿಮೆಯಿದೆ. ಈ ಎಲ್ಲ ಕಾರಣಗಳಿಂದ ಕಳೆದ ಅವಧಿಗೆ ಹೋಲಿಕೆ ಮಾಡಿದಲ್ಲಿ ದುಪ್ಪಟ್ಟು ಪ್ರಮಾಣದಲ್ಲಿ ಮಾವು ಬೆಳೆಯಲಿದೆ. ಮಾವು ಬೆಳೆಗಾರರು ಮತ್ತು ವರ್ತಕರು ಹೆಚ್ಚು ಲಾಭ ನಿರೀಕ್ಷಿಸಬಹುದಾಗಿದೆ ಎಂದು ತೋಟಗಾರಿಕಾ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆ ಸಮಯದಲ್ಲಿ ಸಮಸ್ಯೆಯಾಗುತ್ತಾ? ಮಹಿಳೆಯರಿಗೆ ಬೆಸ್ಟ್ ಮದ್ದಿದು ...

ರಾಜ್ಯದಲ್ಲಿ ಒಟ್ಟು 180.53 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಕಳೆದ ವರ್ಷ ಒಟ್ಟು 7 ಲಕ್ಷ ಟನ್‌ ಮಾತ್ರ ಮಾವು ಲಭ್ಯವಾಗಿತ್ತು. 2021ನೇ ವರ್ಷದಲ್ಲಿ 13ರಿಂದ 14 ಲಕ್ಷ ಟನ್‌ ಮಾವು ಲಭ್ಯವಾಗುವ ನಿರೀಕ್ಷೆಯಿದೆ ಎಂದು ತೋಟಗಾರಿಕೆ ಇಲಾಖೆಯ ನಿವೃತ್ತ ಉಪ ನಿರ್ದೇಶಕ (ಹಣ್ಣು ಮತ್ತು ತರಕಾರಿ) ಡಾ.ಹಿತ್ತಲಮನಿ ತಿಳಿಸಿದ್ದಾರೆ.

ಏಪ್ರಿಲ್‌ಗೆ ಮಾರುಕಟ್ಟೆಗೆ:

ರಾಮನಗರ ಜಿಲ್ಲೆಯಲ್ಲಿ ಈಗಾಗಲೇ ಮಾವು ಶೇ.100ರಷ್ಟುಹೂವು ಬಿಟ್ಟಿದೆ. ಏಪ್ರಿಲ್‌ ತಿಂಗಳಲ್ಲಿ ಇದು ಮಾರುಕಟ್ಟೆಗೆ ಬರಲಿದ್ದು, ಈ ಭಾಗದ ರೈತರು ಹೆಚ್ಚು ಪ್ರಮಾಣದ ಲಾಭ ಗಳಿಸಲಿದ್ದಾರೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಾವು ಇದೀಗ ಹೂವು ಬಿಡಲು ಪ್ರಾರಂಭವಾಗಿದೆ. ಜೂನ್‌ ಮತ್ತು ಜುಲೈ ತಿಂಗಳಿನಲ್ಲಿ ಮಾವು ಮಾರುಕಟ್ಟೆಗೆ ಬರಲಿದೆ ಎಂದು ಹಿತ್ತಲಮನಿ ವಿವರಿಸಿದರು.

ವಿದೇಶಿ ಮಾರುಕಟ್ಟೆ ಬೇಡಿಕೆ ಹೆಚ್ಚು:

ರಾಜ್ಯದ ಮಾವಿನ ಹಣ್ಣಿಗೆ ವಿದೇಶಗಳಲ್ಲಿ ಹೆಚ್ಚು ಬೇಡಿಕೆಯಿದೆ. ಆದರೆ, ಕಳೆದ ಎರಡು ವರ್ಷಗಳಿಂದ ಹೊರ ದೇಶಗಳಿಗೆ ರಫ್ತಾಗಿರುವ ಪ್ರಮಾಣ ಕಡಿಮೆ. ಕೊರೋನಾ ಸೋಂಕು ಕಡಿಮೆಯಾಗಿದೆ. ಮಾವಿನ ಹಣ್ಣನ್ನು ವಿದೇಶಗಳಿಗೆ ರಫ್ತು ಮಾಡುವ ರೈತರು ಕಳೆದ ಎರಡು ವರ್ಷಗಳಿಗಿಂದ ಹೆಚ್ಚು ಲಾಭ ಪಡೆಯಬಹುದಾಗಿದೆ ಎಂದು ವಿವರಿಸಿದರು.

ಪ್ರಸಕ್ತ ವರ್ಷ ಮಾವು ಏರು ಹಂಗಾಮು(ಆನ್‌ ಇಯರ್‌) ಆಗಿದ್ದು, ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದಲ್ಲಿ ಪ್ರಸಕ್ತ ಅವಧಿಯಲ್ಲಿ ದುಪ್ಪಟ್ಟು ಫಸಲು ಬರಲಿದೆ. ಮಾವು ಬೆಳೆಗಾರರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಲ್ಲಿ ಉತ್ತಮ ಫಸಲು ನಿರೀಕ್ಷೆ ಮಾಡಬಹುದು.

- ಡಾ.ಹಿತ್ತಲಮನಿ, ತೋಟಗಾರಿಕೆ ಇಲಾಖೆಯ ನಿವೃತ್ತ ಅಧಿಕಾರಿ

click me!