ರಾಜ್ಯದ 2ನೇ ಜನನಿಬಿಡ ಏರ್‌ಪೋರ್ಟ್‌, ನಿತ್ಯ 60ಕ್ಕೂ ಹೆಚ್ಚು ವಿಮಾನ!

By Kannadaprabha News  |  First Published Jan 21, 2020, 10:00 AM IST

ರಾಜ್ಯದ 2ನೇ ಜನನಿಬಿಡ ಏರ್‌ಪೋರ್ಟ್‌| ನಿತ್ಯ 60ಕ್ಕೂ ಹೆಚ್ಚು ವಿಮಾನ ಸಂಚರಿಸುವ ವಿಮಾನ ನಿಲ್ದಾಣವಿದು


ಮಂಗಳೂರು[ಜ.21]: ಸಜೀವ ಬಾಂಬ್‌ ಪತ್ತೆಯಾಗುವುದರೊಂದಿಗೆ ಉಗ್ರಾತಂಕಕ್ಕೆ ಒಳಗಾಗಿರುವ ಮಂಗಳೂರು ವಿಮಾನ ನಿಲ್ದಾಣ ಈಗ ದೇಶದಾದ್ಯಂತ ಸುದ್ದಿಗೆ ಗ್ರಾಸವಾಗಿದೆ. 2010ರ ಮೇ 30ರಂದು ಏರ್‌ ಇಂಡಿಯಾ ವಿಮಾನ ರನ್‌ವೇ ಬಿಟ್ಟು ಪ್ರಪಾತಕ್ಕೆ ಬಿದ್ದು 158 ಮಂದಿ ಸಾವಿಗೀಡಾದ ಘಟನೆ ವೇಳೆ ಸುದ್ದಿಯಾಗಿದ್ದ ಮಂಗಳೂರು ವಿಮಾನ ನಿಲ್ದಾಣ ಈಗ ಬಾಂಬ್‌ ಪತ್ತೆಯಾದ ಹಿನ್ನೆಲೆಯಲ್ಲಿ ಉಗ್ರರ ಭೀತಿಯನ್ನು ಎದುರಿಸುವಂತಾಗಿದೆ.

ಮಂಗಳೂರು ಬಾಂಬ್: ಇನ್ನೊಂದು ಬ್ಯಾಗ್‌ ನಾಪತ್ತೆ, ತೀವ್ರ ಆತಂಕ!

Latest Videos

1951ರಲ್ಲಿ ಬಜಪೆಯಲ್ಲಿ ಕಾರ್ಯಾರಂಭ ಮಾಡಿದ ಮಂಗಳೂರು ವಿಮಾನ ನಿಲ್ದಾಣ, ರನ್‌ವೇ ಹಾಗೂ ಟರ್ಮಿನಲ್‌ ವಿಸ್ತರಣೆಗೊಂಡ ಬಳಿಕ 2010 ಮೇ 15ರಂದು 8 ಕಿ.ಮೀ. ದೂರದ ಕೆಂಜಾರಿಗೆ ಸ್ಥಳಾಂತರಗೊಂಡಿತು. 2006ರಿಂದ ವಿದೇಶಕ್ಕೂ ವಿಮಾನಯಾನ ಆರಂಭಗೊಂಡಿತು. ಮಂಗಳೂರಿನಿಂದ ಬೆಂಗಳೂರು, ಮುಂಬೈ, ದೆಹಲಿ, ಹೈದರಾಬಾದ್‌ಗೆ ನೇರ ವಿಮಾನ ಸಂಚಾರ ಇದ್ದರೆ, ದುಬೈ, ಕುವೈಟ್‌ ಸೇರಿದಂತೆ ಐದಕ್ಕೂ ಅಧಿಕ ರಾಷ್ಟ್ರಗಳಿಗೆ ವಿಮಾನಯಾನವನ್ನು ಹೊಂದಿದೆ. ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊರತುಪಡಿಸಿದರೆ ರಾಜ್ಯದಲ್ಲಿ ಅತ್ಯಂತ ಹೆಚ್ಚು ಜನನಿಬಿಡ ವಿಮಾನ ನಿಲ್ದಾಣ ಇದೇ ಆಗಿದ್ದು, ನಿತ್ಯವೂ 60ಕ್ಕೂ ಅಧಿಕ ವಿಮಾನಗಳು ಸಂಚರಿಸುತ್ತಿವೆ.

ಈ ವಿಮಾನ ನಿಲ್ದಾಣದ ಮೂರನೇ ರನ್‌ವೇ ವಿಸ್ತರಣೆಗೆ ಇನ್ನೂ ಕಾಲಕೂಡಿಬಂದಿಲ್ಲ. ಈ ಮಧ್ಯೆ ದೇಶದಲ್ಲಿ ಪ್ಯಾಸೆಂಜರ್‌ ನಿರ್ವಹಣೆಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದ ಈ ವಿಮಾನ ನಿಲ್ದಾಣಕ್ಕೆ ಈಗ ಕೇರಳದ ಕಣ್ಣೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ವಿಮಾನ ನಿಲ್ದಾಣ ಕಾರ್ಯಾರಂಭಗೊಂಡ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ ಕಾಣುತ್ತಿದೆ. ಇದೀಗ ಈ ವಿಮಾನ ನಿಲ್ದಾಣವನ್ನು ಅಭಿವೃದ್ಧಿ ಅದಾನಿ ಗುಂಪಿಗೆ ಕೇಂದ್ರ ಸರ್ಕಾರ ಹಸ್ತಾಂತರಿಸುವ ಸಿದ್ಧತೆಯಲ್ಲಿದೆ.

ಟೈಮರ್‌ಗೂ, ಬಾಂಬ್‌ಗೂ ಕನೆಕ್ಷನ್‌ ಕೊಟ್ಟಿರಲೇ ಇಲ್ಲ!

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ಟ್ಯಾಕ್ಸಿವೇ, ವಿವಿಧ ವಿಮಾನಯಾನ ಸಂಸ್ಥೆಗಳ ಕೌಂಟರ್‌ಗಳು ಸೇರಿದಂತೆ ಸರ್ವಸಜ್ಜಿತ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಹೊಂದಿದ ಮಾನ್ಯತೆಯನ್ನು ಪಡೆದುಕೊಂಡಿದೆ. ಅತ್ಯಾಧುನಿಕ ಚೆಕ್ಕಿಂಗ್‌ ಸಿಸ್ಟಮ್‌, ಎರಡು ಏರೋಡ್ರಂ ವ್ಯವಸ್ಥೆ ಹೊಂದಿದೆ. ಕೇಂದ್ರೀಯ ಕೈಗಾರಿಕಾ ಭದ್ರತಾಪಡೆಯ ಕಣ್ಗಾವಲು ಅಲ್ಲದೆ, ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

click me!