ಇನ್ನೊಂದು ಬ್ಯಾಗ್ ನಾಪತ್ತೆ, ತೀವ್ರ ಆತಂಕ| 2 ಬ್ಯಾಗ್ ತಂದಿದ್ದ ಶಂಕಿತ ದುಷ್ಕರ್ಮಿ| ಒಂದನ್ನು ಏರ್‌ಪೋರ್ಟಲ್ಲಿಟ್ಟು ಪರಾರಿ| ಇನ್ನೊಂದರಲ್ಲಿ ಬಾಂಬ್ ಇತ್ತೇ?| ಬೇರೆಡೆ ಇಟ್ಟಿದ್ದಾನೆಯೇ?| ಪೊಲೀಸ್ ತನಿಖೆ
ಮಂಗಳೂರು[ಜ.21]: ಬಾಂಬ್ ಇಟ್ಟದುಷ್ಕರ್ಮಿ ಮಂಗಳೂರಿನ ಸ್ಟೇಟ್‌ಬ್ಯಾಂಕ್ ಬಸ್ ಸ್ಟ್ಯಾಂಡ್ ನಿಲ್ದಾಣನಿಂದ ಬಸ್ಸಿನಲ್ಲಿ ಬಂದಿದ್ದು ಆತನಲ್ಲಿ ಎರಡು ಬ್ಯಾಗುಗಳಿದ್ದವು ಎನ್ನುವ ಅಂಶವೂ ಬಯಲಾಗಿದೆ. ವಿಮಾನ ನಿಲ್ದಾಣದಲ್ಲಿ ಸ್ಫೋಟಕವಿದ್ದ ಬಾಂಬ್ ಅನ್ನು ಇಟ್ಟು ಹೋದ ಬಳಿಕ, ತನ್ನ ಬಳಿಯಿದ್ದ ಮತ್ತೊಂದು ಬ್ಯಾಗ್ ಅನ್ನು ಆತ ಜೊತೆಗೇ ಕೊಂಡೊಯ್ದಿದ್ದು ಅದರಲ್ಲೂ ಬಾಂಬ್ ಇತ್ತೇ ಎಂಬ ಆತಂಕ ಶುರುವಾಗಿದೆ.
ಟೈಮರ್‌ಗೂ, ಬಾಂಬ್‌ಗೂ ಕನೆಕ್ಷನ್ ಕೊಟ್ಟಿರಲೇ ಇಲ್ಲ!
ಸ್ಟೇಟ್ ಬ್ಯಾಂಕ್ ಸಮೀಪದ ಬಸ್ಸು ನಿಲ್ದಾಣದಲ್ಲಿ ಬಜಪೆಗೆ ಹೋಗುವ ರಾಜ್‌ಕುಮಾರ್ ಎಂಬ ಹೆಸರಿನ ಖಾಸಗಿ ಬಸ್ ಅನ್ನು ಹತ್ತಿದ್ದ. ಕೆಂಜಾರು ವಿಮಾನ ನಿಲ್ದಾಣ ಸ್ಟಾಪ್‌ನಲ್ಲಿ ಸರಿಯಾಗಿ ಇಳಿದಿದ್ದ ಆತನ ಕೈಯಲ್ಲಿ 2 ಬ್ಯಾಗ್ ಇತ್ತು. ಇಳಿದವನೇ ಅಲ್ಲಿದ್ದ ಸೆಲೂನ್‌ಗೆ ತೆರಳಿ ಒಂದು ಬ್ಯಾಗ್ ಇಡಲು ಸ್ಥಳಾವಕಾಶ ಕೋರಿದ್ದ. ಸೆಲೂನ್‌ನವರು ಸಹಜವಾಗಿ ಅನುಮತಿ ನೀಡಿದ್ದಾರೆ. ಆದರೆ ಒಳಗೆ ಇಡುವುದು ಬೇಡ ಹೊರಗೆ ಇಡಿ ಎಂದು ತಿಳಿಸಿದ್ದಾರೆ. ಅದರಂತೆ ಅಲ್ಲಿ ಬ್ಯಾಗ್ ಇಟ್ಟು ಹೋಗಿದ್ದ ಆತ ಸ್ಫೋಟಕ ತುಂಬಿದ್ದ ಇನ್ನೊಂದು ಬ್ಯಾಗ್‌ನೊಂದಿಗೆ ಅಲ್ಲೇ ಇದ್ದ ರಿಕ್ಷಾವೊಂದನ್ನು ಬಾಡಿಗೆಗೆ ಪಡೆದು ನಿಲ್ದಾಣಕ್ಕೆ ತೆರಳಿದ್ದ. ಹಿಂದಿ ಭಾಷೆ ಮಾತನಾಡುತ್ತಿದ್ದ ಆತ ಸೆಲೂನ್ ಮತ್ತು ರಿಕ್ಷಾ ಚಾಲಕನ ಬಳಿ ಹಿಂದಿಯಲ್ಲೇ ವ್ಯವಹರಿಸಿದ್ದ.
ಬೇರೆಡೆ ಸ್ಫೋಟಕ್ಕೆ ಸಂಚು?:
ಎಲ್ಲ ವಿಮಾನ ನಿಲ್ದಾಣಗಳಂತೆ ಮಂಗಳೂರು ವಿಮಾನ ನಿಲ್ದಾಣಲ್ಲೂ ವಾಹನ ತೆರಳು ಮತ್ತು ಹಿಂದುರುಗಲು(ಎಂಟ್ರಿ ಮತ್ತು ಎಕ್ಸಿಟ್) ಪ್ರತ್ಯೇಕ ದಾರಿಗಳಿದ್ದು ಈ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ಆದರೆ ಬಂದ ದಾರಿಯಲ್ಲೇ ವಾಪಸ್ ತೆರಳುವಂತೆ ಆತ ರಿಕ್ಷಾ ಚಾಲಕನಿಗೆ ಬೆದರಿಸಿದ್ದ ಎನ್ನಲಾಗಿದೆ. ಆದರೆ ಚಾಲಕ ಅದಕ್ಕೆ ಒಪ್ಪದಿದ್ದಾಗ ಕೊನೆಗೆ ಎಕ್ಸಿಟ್ ಮೂಲಕವೇ ಸುತ್ತು ಬಳಸಿ ಸೆಲೂನ್‌ಗೆ ಮತ್ತೆ ಆಗಮಿಸಿ ಬ್ಯಾಗ್ ಪಡೆದಿದ್ದಾನೆ. ಬ್ಯಾಗ್ ಪಡೆದು ಅದೇ ರಿಕ್ಷಾದಲ್ಲಿ ಕಾವೂರು ಕಡೆಗೆ ತೆರಳಿದ್ದಾನೆ.
ಟೈಮರ್‌ಗೂ, ಬಾಂಬ್‌ಗೂ ಕನೆಕ್ಷನ್ ಕೊಟ್ಟಿರಲೇ ಇಲ್ಲ!
ಬಳಿಕ ಆತ ಯಾವ ಕಡೆ ತೆರಳಿದ್ದಾನೆ ಎಂಬ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಆತ ತನ್ನೊಂದಿಗೆ ಕೊಂಡೊಯ್ದ ಇನ್ನೊಂದು ಬ್ಯಾಗ್‌ನಲ್ಲೂ ಬಾಂಬ್ ಇದ್ದಿದ್ದರೆ ಇನ್ನೊಂದು ಕಡೆ ಸ್ಫೋಟ ನಡೆಸುವ ಸಂಚು ಹೊಂದಿದ್ದನೇ ಎಂಬ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿದ್ದು, ಈ ಅಂಶ ತನಿಖೆಯಿಂದ ಬೆಳಕಿಗೆ ಬರಬೇಕಿದೆ. ಪ್ರಸ್ತುತ ಸೆಲೂನ್‌ನಲ್ಲಿದ್ದ ವ್ಯಕ್ತಿಯಿಂದ ಬಜ್ಪೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.