ಕಾಸರಗೋಡಿನ ಮಂಜೇಶ್ವರ ಯುವತಿಯ ಕೊಲೆ ಪ್ರಕರಣದಲ್ಲಿ ಸೈನೆಡ್ ಮೋಹನ ಕುಮಾರ್ ವಿರುದ್ಧದ ಆರೋಪ ಮಂಗಳೂರು ನ್ಯಾಯಾಲಯದಲ್ಲಿ ಸಾಬೀತಾಗಿದೆ. 2006ರಲ್ಲಿ ಪೈವಳಿಕೆ ಗ್ರಾಮದ 26 ವರ್ಷದ ಯುವತಿಯನ್ನು ಸೈನೆಡ್ ಮೋಹನ್ ಮಡಿಕೇರಿಗೆ ಕರೆದೊಯ್ದು ಅಲ್ಲಿನ ವಸತಿ ಗೃಹವೊಂದರಲ್ಲಿ ಅತ್ಯಾಚಾರ ಎಸಗಿ, ಸೈನೈಡ್ ನೀಡಿ ಕೊಲೆ ಮಾಡಿದ್ದ.
ಮಂಗಳೂರು( ಜು.13): ಕಾಸರಗೋಡು ಮಂಜೇಶ್ವರ ಯುವತಿಯ ಕೊಲೆ ಪ್ರಕರಣದಲ್ಲಿ ಸೈನೆಡ್ ಮೋಹನ ಕುಮಾರ್ ವಿರುದ್ಧದ ಆರೋಪ ಶುಕ್ರವಾರ ಮಂಗಳೂರು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಇದು 17ನೇ ಕೊಲೆ ಪ್ರಕರಣವಾಗಿದ್ದು, ಜು.18ರಂದು ಅಂತಿಮ ವಿಚಾರಣೆ ನಡೆದು ಆರೋಪಿಗೆ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ.
ಈವರೆಗೆ 16 ಪ್ರಕರಣಗಳಲ್ಲಿ ವಿವಿಧ ಪ್ರಮಾಣದ ಶಿಕ್ಷೆಗೆ ಆತ ಗುರಿಯಾಗಿದ್ದಾನೆ. ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 17ನೇ ಪ್ರಕರಣದ ವಿಚಾರಣೆ ನಡೆದಿದ್ದು, ನ್ಯಾಯಾಧೀಶ ಸೈಯಿದುನ್ನೀಸ ಅವರು ಶುಕ್ರವಾರ ತೀರ್ಪು ಕಾದಿರಿಸಿದ್ದಾರೆ. ಕಾಸರಗೋಡಿನ ಪೈವಳಿಕೆ ಗ್ರಾಮದ 26 ವರ್ಷದ ಯುವತಿಯನ್ನು ಸೈನೆಡ್ ಮೋಹನ್ 2006ರಲ್ಲಿ ಮಡಿಕೇರಿಗೆ ಕರೆದೊಯ್ದು ಅಲ್ಲಿನ ವಸತಿ ಗೃಹವೊಂದರಲ್ಲಿ ಅತ್ಯಾಚಾರ ಎಸಗಿ, ಸೈನೈಡ್ ನೀಡಿ ಕೊಲೆ ಮಾಡಿದ್ದ. ಬಳಿಕ ಆಕೆಯ ಚಿನ್ನಾಭರಣವನ್ನು ಮಂಗಳೂರಿನ ಫೈನಾನ್ಸ್‌ವೊಂದರಲ್ಲಿ ಅಡ ಇಟ್ಟಿದ್ದ.
undefined
ಸುಳ್ಳು ಹೇಳಿ ಸಂಬಂಧ ಬೆಳೆಸಿದ್ದ:
ಮೋಹನ್ ತನ್ನ ಹೆಸರು ಸುಧಾಕರ ಎಂದು ಪರಿಚಯಿಸಿಕೊಂಡಿದ್ದ. ವಿಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿದ್ದ. ಪೈವಳಿಕೆಯ ಮನೆಯೊಂದರಲ್ಲಿ ಕೆಲಸಕ್ಕೆ ಇದ್ದ ಈ ಯುವತಿಯನ್ನು 20-6-2006ರಂದು ಮಂಗಳೂರಿಗೆ ಕರೆಸಿಕೊಂಡಿದ್ದ. ವಿವಾಹಕ್ಕೆ ವರನ ನೋಡುವ ಕಾರಣ ಆಕೆ ಜೊತೆಗೆ ಅತ್ತೆ ಕೂಡ ಮಂಗಳೂರಿಗೆ ಬಂದಿದ್ದರು. ಮಂಗಳೂರಿನ ಸ್ಟೇಟ್‌ಬ್ಯಾಂಕ್‌ನಲ್ಲಿ ಈ ಮೂವರು ಭೇಟಿಯಾಗಿ ವಿವಾಹದ ಬಗ್ಗೆ ಮಾತುಕತೆ ನಡೆಸಿದ್ದರು. ಬಳಿಕ ಯುವತಿ ಜೊತೆಗೆ ಸುಧಾಕರ ಬಸ್ಸೊಂದನ್ನು ಹತ್ತಿ ಹೋಗಿರುವುದನ್ನು ಆಕೆಯ ಅತ್ತೆ ನೋಡಿದ್ದರು. ಅದು ಬಿಟ್ಟರೆ, ಬಳಿಕ ಅವರು ಎಲ್ಲಿಗೆ ಹೋಗಿದ್ದರು ಎಂಬುದು ಅತ್ತೆಗೆ ಗೊತ್ತಿರಲಿಲ್ಲ.
ಚಿನ್ನಾಭರಣ ದೋಚಿ ಅಡವಿಟ್ಟ:
ಯುವತಿಯನ್ನು ನೇರವಾಗಿ ಮಡಿಕೇರಿಗೆ ಕರೆದುಕೊಂಡ ಹೋದ ಮೋಹನ್ ಕುಮಾರ್, ಅಲ್ಲಿ ವಸತಿಗೃಹದಲ್ಲಿ ವಾಸ್ತವ್ಯ ಹೂಡಿದ್ದ. ಮರುದಿನ ಆಕೆಯ ಮೇಲೆ ಅತ್ಯಾಚಾರ ನಡೆಸಿ, ಬಳಿಕ ಸೈನೆಡ್ ನೀಡಿ ಕೊಲೆಗೆ ಕಾರಣನಾಗಿದ್ದ. ಕೊಲೆಯಾದ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನಾಭರಣವನ್ನು ಮೋಹನ ಕುಮಾರ್ ದೋಚಿ ಮಂಗಳೂರಿನ ಫೈನಾನ್ಸ್‌ವೊಂದರಲ್ಲಿ ಅಡವಿರಿಸಿದ್ದ. ಸರಣಿ ಹತ್ಯೆಗೆ ಸಂಬಂಧಿಸಿ 2009ರಲ್ಲಿ ಬಂಧಿಸಲ್ಪಟ್ಟಮೋಹನ ಕುಮಾರ್ ಮಂಜೇಶ್ವರದ ಯುವತಿಯ ಕೊಲೆಯ ವಿಚಾರವನ್ನೂ ಒಪ್ಪಿಕೊಂಡಿದ್ದ.
ವಿಡಿಯೋ ಕಾನ್ಫರೆನ್ಸ್ ವಿಚಾರಣೆ:
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಆರೋಪಿ ಮೋಹನ ಕುಮಾರ್‌ನನ್ನು ಅಲ್ಲಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯ ವಿಚಾರಣೆ ನಡೆಸಿದೆ. ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕಿ ಜುಡಿತ್ ಓ.ಎಂ.ಕ್ರಾಸ್ತಾ ವಾದಿಸಿದ್ದರು.