ಜಮೀರ್ ಅಹಮದ್ ಆಪ್ತ ಜೆಡಿಎಸ್‌ ಮುಖಂಡ ಅರೆಸ್ಟ್

By Web DeskFirst Published Jul 1, 2019, 8:28 AM IST
Highlights

ಸಚಿವ ಜಮೀರ್ ಅಹಮದ್ ಆಪ್ತ ಹಾಗೂ ಜೆಡಿಎಸ್ ಮುಖಂಡನೋರ್ವನನ್ನು ಬಂಧಿಸಲಾಗಿದೆ. ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಮಾಡಲಾಗಿದೆ. 

 ಬೆಂಗಳೂರು [ಜು.1] :  ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಆಡಳಿತಾರೂಢ ಜೆಡಿಎಸ್‌ನ ನಾಮ ನಿರ್ದೇಶಿತ ಬಿಬಿಎಂಪಿ ಸದಸ್ಯರೊಬ್ಬರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಬಂಧಿಸಿದೆ.

ಸೈಯದ್‌ ಮುಜಾಹಿದ್‌ ಬಂಧಿತ ಆರೋಪಿ. ಸೈಯದ್‌ ಮನೆ ಹಾಗೂ ಕಾರಿನಲ್ಲಿ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಲಾಗಿದ್ದು, 13 ದಿನಗಳ ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದ್ದಾರೆ.

ಸೈಯದ್‌ ಮುಜಾಹಿದ್‌ ಜೆಡಿಎಸ್‌ನಿಂದ ನಾಮನಿರ್ದೇಶಿತರಾಗಿದ್ದರೂ ಕಾಂಗ್ರೆಸ್ಸಿನ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್‌ ಅಹಮದ್‌ ಅವರ ಬೆಂಬಲಿಗನಾಗಿ ಗುರುತಿಸಿಕೊಂಡಿದ್ದ.

ಸೈಯದ್‌ ಐಎಂಎ ಮಾಲಿಕ ಮಹಮ್ಮದ್‌ ಮನ್ಸೂರ್‌ ಖಾನ್‌ ಆಪ್ತನಾಗಿದ್ದ. ಮನ್ಸೂರ್‌ ಖಾನ್‌ ದೇಶ ಬಿಟ್ಟು ಹೋಗುವ ಮುನ್ನ ಸೈಯದ್‌ ಮುಜಾಹಿದ್‌ನನ್ನು ಸಂಪರ್ಕ ಮಾಡಿದ್ದ ವಿಚಾರ ವಿಶೇಷ ತನಿಖಾ ತಂಡಕ್ಕೆ ತಿಳಿದಿತ್ತು. ಈ ಹಿನ್ನೆಲೆಯಲ್ಲಿ ಡಿಸಿಪಿ ಗಿರೀಶ್‌ ನೇತೃತ್ವದ ಎಸ್‌ಐಟಿ ತಂಡ ಶನಿವಾರ ತಡರಾತ್ರಿ ಫ್ರೇಜರ್‌ ಟೌನ್‌ನ ಮೋರೆ ರಸ್ತೆಯಲ್ಲಿರುವ ಸೈಯದ್‌ ಮುಜಾಹಿದ್‌ ಮನೆ ಮೇಲೆ ಏಕಾಏಕಿ ದಾಳಿ ನಡೆಸಿತ್ತು. ದಾಳಿ ವೇಳೆ ಮುಜಾಹಿದ್‌ ಹೆಸರಿನಲ್ಲಿರುವ ಫಾರ್ಚುನರ್‌ ಕಾರ್‌, ಎರಡು ಮೊಬೈಲ್‌ ಹಾಗೂ ಕೆಲ ಮಹತ್ವದ ದಾಖಲೆ ಪತ್ರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಐಎಂಎ ಕಂಪನಿ ಜೊತೆ ಮುಜಾಹಿದ್‌ ಕೋಟ್ಯಂತರ ರು. ವ್ಯವಹಾರ ನಡೆಸಿರುವುದು ದಾಖಲೆಗಳ ಪರಿಶೀಲನೆಯಿಂದ ಗೊತ್ತಾಗಿದೆ. ಅಲ್ಲದೆ ಇಲ್ಲಿ ತನಕ ಐಎಂಎಗೆ ಸೇರಿದ 101 ಖಾತೆಗಳನ್ನು ಜಪ್ತಿ ಮಾಡಲಾಗಿದ್ದು, 1.16 ಕೋಟಿ ರು. ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಎಸ್‌ಐಟಿ ಎಸ್‌ಐಟಿ ಮೂಲಗಳು ತಿಳಿಸಿವೆ.

ನಿರಂತರ ಸಂಪರ್ಕ:

ಮನ್ಸೂರ್‌ ಖಾನ್‌ ವಿದೇಶಕ್ಕೆ ಪರಾರಿಯಾದ ಬಳಿಕ ಆತನೊಂದಿಗೆ ನಿರಂತರವಾಗಿ ಮುಜಾಹಿದ್‌ ಸಂಪರ್ಕದಲ್ಲಿದ್ದ. ಮನ್ಸೂರ್‌ ದೇಶ ಬಿಟ್ಟು ಹೋಗುವ ವಿಚಾರ ಗೊತ್ತಿದ್ದರೂ ಪೊಲೀಸರಿಗೆ ಮಾಹಿತಿ ನೀಡಿಲ್ಲ. ಅಲ್ಲದೆ, ಮನ್ಸೂರ್‌ ಖಾನ್‌ನಿಂದ ಹಾಸನದಲ್ಲಿ ಆಸ್ತಿ ಖರೀದಿ ಮಾಡುವಾಗ ಸೈಯದ್‌ ಅಕ್ರಮವಾಗಿ 10 ಕೋಟಿ ರು. ಹಣ ವರ್ಗಾವಣೆ ಮಾಡಿಕೊಂಡಿದ್ದ. ಮನ್ಸೂರ್‌ ನಾಪತ್ತೆಯಾಗುವ ಕೆಲ ದಿನಗಳ ಹಿಂದೆ, ಹೂಡಿಕೆದಾರರಿಗೆ ಬಡ್ಡಿ ಹಣ ನೀಡುವ ಸಂಬಂಧ ಕಂಪನಿಯ ನಿರ್ದೇಶಕರ ಜೊತೆ ಚರ್ಚಿಸಿದ್ದ. ಈ ವೇಳೆ ಕೋಲಾರದ ಬಿಲ್ಡರ್‌ ಒಬ್ಬರಿಂದ 3 ಕೋಟಿ ರು. ಸಂಗ್ರಹಿಸುವಂತೆ ಕಂಪನಿಯ ಇಬ್ಬರು ನಿರ್ದೇಶಕರಿಗೆ ಸೂಚಿಸಿದ್ದ ಎನ್ನಲಾಗಿದೆ.

ಪ್ರಸ್ತುತ ನಾಮನಿರ್ದೇಶಿತ ಪಾಲಿಕೆ ಸದಸ್ಯನಾಗಿರುವ ಮುಜಾಹಿದ್‌, ಈ ಹಿಂದೆ ಶಿವಾಜಿನಗರದ ವಾರ್ಡ್‌ವೊಂದರಿಂದ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ. ಅಲ್ಲದೇ, ಈತನ ವಿರುದ್ಧ ಪುಲಿಕೇಶಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. 2014ರ ರೌಡಿಶೀಟರ್‌ ಪಟ್ಟಿಯಲ್ಲಿ ಮುಜಾಹಿದ್‌ ಅಲಿಯಾಸ್‌ ಖರ್ಚೀಫ್‌ ಮುಜ್ಜು ಹೆಸರಿತ್ತು. ಇತ್ತೀಚೆಗಷ್ಟೇ ಪೊಲೀಸರು ಆತನ ಹೆಸರನ್ನು ರೌಡಿಶೀಟರ್‌ ಪಟ್ಟಿಯಿಂದ ಕೈಬಿಟ್ಟಿದ್ದರು.

ಕುಟುಂಬದ ರಕ್ಷಣೆಗೆ ಮೊರೆ ಇಟ್ಟಿದ್ದ ಮನ್ಸೂರ್‌’

ಐಎಂಎ ಸಮೂಹ ಸಂಸ್ಥೆಯ ಮಾಲೀಕ ಜೂ.8 ರಂದು ವಿದೇಶಕ್ಕೆ ಹೋಗುವ ಮುನ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನನಗೆ ಸಿಕ್ಕಿದ್ದರು ಎಂದು ಮಾಧ್ಯಮಗಳಿಗೆ ಬಂಧಿತ ಸೈಯದ್‌ ಮುಜಾಹಿದ್‌ ಹೇಳಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವಿಡಿಯೋದಲ್ಲಿ ಏನಿದೆ?

ಮನ್ಸೂರ್‌ ಖಾನ್‌ ವಿದೇಶಕ್ಕೆ ತೆರಳಿದ ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ಸೈಯದ್‌, ಮಾಜಿ ಸಚಿವ ರೋಷನ್‌ ಬೇಗ್‌ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ. ಏರ್‌ಪೋರ್ಟ್‌ನಲ್ಲಿ ಮನ್ಸೂರ್‌ ನನ್ನ ಬಳಿ ಮಾತನಾಡಿದ್ದ. ‘ನಾನು ಯಾವುದೇ ಕಾರಣಕ್ಕೂ ಜನರಿಗೆ ವಂಚನೆ ಮಾಡುವುದಿಲ್ಲ. ಎರಡು ದಿನದಲ್ಲಿ ನಾನು ಹಣ ಕೊಡದಿದ್ದರೆ ಜನ ನನ್ನ ಸಾಯಿಸಿ ಬಿಡುತ್ತಾರೆ. ರೋಷನ್‌ ಬೇಗ್‌ ಅವರೇ ಜನರನ್ನು ನನ್ನ ವಿರುದ್ಧ ಎತ್ತಿ ಕಟ್ಟುತ್ತಾರೆ. ಹೀಗಾಗಿ ನನ್ನನ್ನು ಕುಟುಂಬದವರನ್ನು ಒಂದು ಕಡೆ ಇರಿಸಿದ್ದೇನೆ. ನನ್ನ ಕುಟುಂಬಕ್ಕೆ ತೊಂದರೆ ಆದರೆ ನಿನ್ನನ್ನು ಸಂಪರ್ಕ ಮಾಡುತ್ತೇನೆ. ಕುಟುಂಬಕ್ಕೆ ರಕ್ಷಣೆ ಕೊಡು ಎಂದು ನನ್ನ ಬಳಿ ಹೇಳಿದ್ದರು. ಜೀವ ಬೆದರಿಕೆ ಕೂಡ ಇದೆ ಎಂದು ಹೇಳಿದ್ದರು. ಮನ್ಸೂರ್‌ ಖಾನ್‌ ಅವರಿಗೆ ವಂಚನೆ ಮಾಡುವ ಉದ್ದೇಶ ಇಲ್ಲ. ಜನರಿಗೆ ಅನ್ಯಾಯ ಆಗಬಾರದು ಎಂಬ ಕಾರಣಕ್ಕೆ ಜನರು ಹಣವನ್ನು ಒಂದು ಕಡೆ ಹೂಡಿಕೆ ಮಾಡಿದ್ದಾಗಿ ಮನ್ಸೂರ್‌ ಹೇಳಿದ್ದರು’ ಎಂದು ಮುಜಾಹಿದ್‌ ಹೇಳಿರುವುದು ವಿಡಿಯೋದಲ್ಲಿ ಇದೆ.

click me!