
ದಕ್ಷಿಣ ಕನ್ನಡ (ಸೆ.18): ಇದೇ ಮೊದಲ ಬಾರಿಗೆ ಕರಾವಳಿಯ ‘ಬಿಸಿನೆಸ್ ಹಬ್’ ಮಂಗಳೂರಿನಲ್ಲಿ ಶುಕ್ರವಾರ ರಾಜ್ಯ ಸಚಿವ ಸಂಪುಟದ ಸಭೆ ನಡೆಯಲಿದ್ದು, ಇದಕ್ಕಾಗಿ ಮಂಗಳೂರು ನಗರ ಸಕಲ ಸಜ್ಜಾಗಿದೆ.
ನಗರದ ಪಡೀಲಿನಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿಯ (ಪ್ರಜಾಸೌಧ) ಎರಡನೇ ಮಹಡಿಯಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಪ್ರಮುಖವಾಗಿ ತುಳು ಭಾಷೆಗೆ 2ನೇ ಹೆಚ್ಚುವರಿ ರಾಜ್ಯ ಭಾಷೆ ಸ್ಥಾನಮಾನ ನೀಡುವ ಕುರಿತು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ‘ಮಂಗಳೂರು ಜಿಲ್ಲೆ’ ಎಂಬುದಾಗಿ ಬದಲಾವಣೆ ಮಾಡುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ. ಜೊತೆಗೆ, ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲು ಸಿಆರ್‌ಝೆಡ್ ನಿಯಮ ಸಡಿಲಿಕೆ ಘೋಷಣೆ ಮಾಡುವ ನಿರೀಕ್ಷೆಯಿದೆ.
ಜಿಲ್ಲಾಧಿಕಾರಿಗಳ ಕಚೇರಿಯ ಬೃಹತ್ ಸಂಕೀರ್ಣದ ಎರಡನೇ ಮಹಡಿಯಲ್ಲಿ ಸಚಿವ ಸಂಪುಟ ಸಭೆಗಾಗಿ ಹವಾನಿಯಂತ್ರಿತ ಪ್ರತ್ಯೇಕ ಮಿನಿ ಹಾಲ್ ಸಿದ್ಧಪಡಿಸಲಾಗಿದೆ. ಮುಖ್ಯಮಂತ್ರಿ ಮತ್ತು ಸಂಪುಟ ಸಚಿವರು ಕುಳಿತುಕೊಳ್ಳಲು ಅನುವಾಗುವಂತೆ ಆಸನಗಳು, ಟೇಬಲ್ ಮತ್ತು ಸಂಪೂರ್ಣ ಹವಾನಿಯಂತ್ರಿತ ಹಾಲ್ ಸಿದ್ಧಗೊಳಿಸಲಾಗುತ್ತಿದೆ. ಸಂಪುಟ ಸಭೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಸುಮಾರು ಮೂರು ಗಂಟೆ ಅವಧಿಯ ಸಭೆಯಲ್ಲಿ (ಬೆಳಗ್ಗೆ 10.30- ಮಧ್ಯಾಹ್ನ 2 ಗಂಟೆ) ಸಂಪುಟ ದರ್ಜೆಯ ಸಚಿವರು ಮತ್ತು ಮುಖ್ಯಮಂತ್ರಿಯವರು ಕರಾವಳಿ ಜಿಲ್ಲೆಗಳ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಬೆಳವಣಿಗೆ ವಿಚಾರವಾಗಿ ಚರ್ಚೆ ನಡೆಸಲಿದ್ದಾರೆ. ಮಂಗಳೂರಿನ ಅಭಿವೃದ್ಧಿಗೆ ₹5 ಸಾವಿರ ಕೋಟಿಯ ಮೆಗಾ ಪ್ಯಾಕೇಜ್ ಘೋಷಣೆ, ಮಂಗಳೂರಲ್ಲಿ ‘ಮೆಡಿಕಲ್ ಟೂರಿಸಂ ಹಬ್’ ಸ್ಥಾಪನೆ, ಕರಾವಳಿಯಲ್ಲಿ ಐಟಿ ಪಾರ್ಕ್, ಮೀನುಗಾರಿಕೆ-ಬಂದರು ಅಭಿವೃದ್ಧಿ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ್ಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ, ಕರಾವಳಿಯಲ್ಲಿ ಟೆಂಪಲ್ ಟೂರಿಸಂ ಸರ್ಕಿಟ್ ಸೇರಿದಂತೆ ಹಲವು ಮಹತ್ವದ ಯೋಜನೆಗಳಿಗೆ ಸಂಪುಟ ಸಭೆಯಲ್ಲಿ ಹಸಿರು ನಿಶಾನೆ ದೊರೆಯುವ ನಿರೀಕ್ಷೆಯಿದೆ.
ಸಂಪುಟ ಸಭೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರು ತೆರೆದ ಡಬ್ಬಲ್ ಡೆಕ್ಕರ್ ಅಂಬಾರಿ ಬಸ್‌ನಲ್ಲಿ ಸುಮಾರು ಐದು ಕಿ.ಮೀ. ರೋಡ್ ಶೋ ನಡೆಸಿ, ಜಿಲ್ಲಾಧಿಕಾರಿ ಕಚೇರಿಗೆ ತೆರಳಲಿದ್ದಾರೆ. ಕದ್ರಿ ಅತಿಥಿಗೃಹದಿಂದ ಪಡೀಲ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿವರೆಗೆ ರೋಡ್ ಶೋ ನಡೆಯಲಿದೆ. ಮಾರ್ಗ ಮಧ್ಯೆ ಪಂಪ್‌ವೆಲ್‌ನಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಅದ್ಧೂರಿ ಸ್ವಾಗತ ನೀಡಲು ಕಾಂಗ್ರೆಸ್ ಕಾರ್ಯಕರ್ತರು ಸಿದ್ಧತೆ ನಡೆಸಿದ್ದಾರೆ.
ಮುಖ್ಯಮಂತ್ರಿ ಮತ್ತು ಸಚಿವರನ್ನು ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಸ್ವಾಗತಿಸುವುದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಒಳಭಾಗದಲ್ಲಿರುವ ವರಾಂಡದಲ್ಲಿ ಕಂಬಳದ ಕೋಣಗಳ ಬೃಹತ್ ಪೇಂಟಿಂಗ್ ಮಾಡಲಾಗಿದೆ. ರಂಗೋಲಿ ಹುಡಿಯಲ್ಲಿ ಕಲಾಕಾರರು ಕೋಣಗಳ ಚಿತ್ರ ಬಿಡಿಸಿದ್ದಾರೆ.
ನಗರದ ತುಂಬೆಲ್ಲಾ ಮುಖ್ಯಮಂತ್ರಿ ಮತ್ತು ಸಚಿವರಿಗೆ ಸ್ವಾಗತ ಕೋರುವ ಪೋಸ್ಟರ್‌ಗಳನ್ನು ಹಾಕಲಾಗಿದೆ. ರಾಜ್ಯ ಸರ್ಕಾರವೇ ಮಂಗಳೂರಿಗೆ ಆಗಮಿಸುತ್ತಿರುವುದರಿಂದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಹಬ್ಬದ ಕಳೆ ಏರ್ಪಟ್ಟಿದೆ. ಸಚಿವರು ಹಾಗೂ ಅಧಿಕಾರಿಗಳ ವಾಸ್ತವ್ಯಕ್ಕೆ ನಗರದ ಖಾಸಗಿ ಹೋಟೆಲ್‌ಗಳು ಮತ್ತು ಸರ್ಕಾರಿ ಅತಿಥಿಗೃಹಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿಯವರಿಗೆ ತಂಗಲು ನಗರದ ತಾಜ್ ವಿವಾಂತದಲ್ಲಿ ವ್ಯವಸ್ಥೆ ಮಾಡಿದರೂ ಅವರು ಸರ್ಕ್ಯೂಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅಧಿಕಾರಿಗಳು ಹಾಗೂ ಇತರ ಆಹ್ವಾನಿತರಿಗಾಗಿ ಕದ್ರಿ ಮತ್ತು ಮಲ್ಲಿಕಟ್ಟೆಯ ಸರ್ಕಾರಿ ವಸತಿಗೃಹಗಳನ್ನು ಸಿದ್ಧಪಡಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ