
ಮಂಡ್ಯ (ಡಿ.30): ಜಿಲ್ಲೆಯ ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದ ಸುಪ್ರಸಿದ್ಧ ಪುರಾಣ ಪ್ರಸಿದ್ಧ 'ತೋಪಿನ ತಿಮ್ಮಪ್ಪ' ದೇವಾಲಯವನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳುವ ಜಿಲ್ಲಾಡಳಿತದ ಕ್ರಮಕ್ಕೆ ಭಕ್ತರು ಹಾಗೂ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ವೇಳೆ ಅಧಿಕಾರಿಗಳು ಮತ್ತು ಭಕ್ತರ ನಡುವೆ ಭಾರಿ ವಾಗ್ವಾದ ನಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಆಬಲವಾಡಿ ಗ್ರಾಮದ ಈ ಪುರಾತನ ದೇವಾಲಯವನ್ನು ಈವರೆಗೆ 'ತೋಪಿನ ತಿಮ್ಮಪ್ಪ ಸೇವಾ ಟ್ರಸ್ಟ್' ವತಿಯಿಂದ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಾಗುತ್ತಿತ್ತು. ಈ ಹಿಂದೆ ಚಿಕ್ಕದಾಗಿದ್ದ ದೇಗುಲವನ್ನು ಗ್ರಾಮಸ್ಥರು ಹಾಗೂ ಟ್ರಸ್ಟ್ ಸದಸ್ಯರು ಸೇರಿ ದೇಣಿಗೆ ಸಂಗ್ರಹಿಸಿ ಜೀರ್ಣೋದ್ಧಾರ ಮಾಡಿದ್ದರು. ಆದರೆ, ದೇಗುಲವನ್ನು ಸರ್ಕಾರದ ಸುಪರ್ದಿಗೆ ವಹಿಸಬೇಕು ಎಂದು ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಲಯವು ದೇವಾಲಯವನ್ನು ಮುಜರಾಯಿ ಇಲಾಖೆಗೆ ಹಸ್ತಾಂತರಿಸುವಂತೆ ಆದೇಶ ನೀಡಿತ್ತು.
ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮದ್ದೂರು ತಹಶೀಲ್ದಾರ್ ಪರಶುರಾಮ್ ನೇತೃತ್ವದ ಅಧಿಕಾರಿಗಳ ತಂಡವು ದೇವಾಲಯವನ್ನು ಅಧಿಕೃತವಾಗಿ ಸುಪರ್ದಿಗೆ ತೆಗೆದುಕೊಳ್ಳಲು ಆಬಲವಾಡಿ ಗ್ರಾಮಕ್ಕೆ ಭೇಟಿ ನೀಡಿತ್ತು. ವಿಷಯ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಗ್ರಾಮಸ್ಥರು ಮತ್ತು ಭಕ್ತರು, ಅಧಿಕಾರಿಗಳ ನಡೆಯನ್ನು ತಡೆದರು. 'ಟ್ರಸ್ಟ್ ಮೂಲಕ ನಾವೇ ಚೆನ್ನಾಗಿ ನಿರ್ವಹಿಸುತ್ತಿರುವಾಗ ಸರ್ಕಾರದ ಹಸ್ತಕ್ಷೇಪವೇಕೆ?' ಎಂದು ಗ್ರಾಮಸ್ಥರು ಪ್ರಶ್ನಿಸಿ ಆಕ್ರೋಶ ಹೊರಹಾಕಿದರು.
ಗ್ರಾಮಸ್ಥರು ಮತ್ತು ಅಧಿಕಾರಿಗಳ ನಡುವೆ ಸುದೀರ್ಘ ವಾಗ್ವಾದ ನಡೆದರೂ, ಭಕ್ತರು ಪಟ್ಟು ಸಡಿಲಿಸಲಿಲ್ಲ. ಜನರ ಆಕ್ರೋಶ ಮತ್ತು ಭಾರಿ ವಿರೋಧವನ್ನು ಗಮನಿಸಿದ ಅಧಿಕಾರಿಗಳು, ಸದ್ಯಕ್ಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಗ್ರಾಮಸ್ಥರಿಗೆ ಎರಡು ದಿನಗಳ ಕಾಲಾವಕಾಶ ನೀಡಿ ಅಲ್ಲಿಂದ ತೆರಳಿದ್ದಾರೆ. ದಶಕಗಳಿಂದ ಭಕ್ತಿ ಮತ್ತು ನಂಬಿಕೆಯಿಂದ ಬೆಳೆಸಿಕೊಂಡು ಬಂದ ದೇಗುಲವು ಸರ್ಕಾರದ ಪಾಲಾಗಬಾರದು ಎನ್ನುವುದು ಗ್ರಾಮಸ್ಥರ ವಾದವಾಗಿದೆ. ಮುಂದಿನ ಎರಡು ದಿನಗಳಲ್ಲಿ ಗ್ರಾಮಸ್ಥರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ರಾಜ್ಯದಲ್ಲಿ ಈ ಅಬಲವಾಡಿ ತೋಪಿನ ತಿಮ್ಮಪ್ಪ ದೇವಸ್ಥಾನದಲ್ಲಿ ಪ್ರತಿವರ್ಷ ಜಾತ್ರೆಯ ವೇಳೆ ಭರ್ಜರಿಯಾಗಿ ಊಟದ ಸೇವೆಯನ್ನು ನೀಡಲಾಗುತ್ತದೆ. ಈ ವೇಳೆ ಸಾವಿರಾರು ಭಕ್ತಾದಿಗಳಿಗೆ ಪಂಕ್ತಿಯ ಆಧಾರದಲ್ಲಿ ತಾವರೆ ಎಲೆಯಲ್ಲಿ ಊಟವನ್ನು ಬಡಿಸಲಾಗುತ್ತದೆ. ಇಲ್ಲಿ ನಡೆಯುವ ಪಂಕ್ತಿ ಸೇವೆಯು ರಾಜ್ಯದಲ್ಲೇ ಅತಿದೊಡ್ಡದು ಎಂದು ಪ್ರಸಿದ್ಧವಾಗಿದೆ. ಇದೀಗ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಆದಾಯದ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವರು ದೇವಸ್ಥಾನವನ್ನು ಸರ್ಕಾರದ ವಶಕ್ಕೆ ಪಡೆಯುವಂತೆ ಕೋರ್ಟ್ ಮೊರೆ ಹೋಗಿದ್ದು, ಕೋರ್ಟ್‌ನಲ್ಲಿ ಮುಜರಾಯಿ ಇಲಾಖೆ ವಶಕ್ಕೆ ಪಡೆಯಲು ಆದೇಶ ನೀಡಲಾಗಿದೆ. ಇಂದು ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಅದ್ಧೂರಿ ಪೂಜಾ ಕೈಂಕರ್ಯಗಳು ನಡೆಯುವ ವೇಳೆ ಸರ್ಕಾರಿ ಅಧಿಕಾರಿಗಳು ದೇವಸ್ಥಾನವನ್ನು ಸರ್ಕಾರದ ವಶಕ್ಕೆ ಪಡೆಯಲು ಮುಂದಾದಾಗ ಹಿನ್ನಡೆಯುಂಟಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ