
ಉಡುಪಿ (ಡಿ.30): ಸೈಬರ್ ವಂಚಕರ ಹಾವಳಿ ಈಗ ಜನಪ್ರತಿನಿಧಿಗಳಿಗೂ ಬಿಟ್ಟಿಲ್ಲ. ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್‌ಪಾಲ್ ಸುವರ್ಣ ಅವರ ಅಧಿಕೃತ ವಾಟ್ಸಾಪ್ ಸಂಖ್ಯೆಯನ್ನೇ ಹ್ಯಾಕ್ ಮಾಡಲಾಗಿದ್ದು, ಶಾಸಕರ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಲೂಟಿ ಮಾಡಲು ಸಂಚು ರೂಪಿಸಿದ ಘಟನೆ ಬಯಲಾಗಿದೆ.
ಶಾಸಕ ಯಶ್‌ಪಾಲ್ ಸುವರ್ಣ ಅವರ ವಾಟ್ಸಾಪ್ ಖಾತೆಯನ್ನು ಹ್ಯಾಕ್ ಮಾಡಿರುವ ಹ್ಯಾಕರ್ಸ್‌ಗಳು, ಶಾಸಕರ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿರುವ ಹಲವು ವ್ಯಕ್ತಿಗಳಿಗೆ ಗೂಗಲ್ ಪೇ (Google Pay) ಮೂಲಕ ತುರ್ತಾಗಿ ಹಣ ಕಳುಹಿಸುವಂತೆ ಸಂದೇಶ ರವಾನಿಸುತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಶಾಸಕರು, 'ಯಾರೂ ಇಂತಹ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ ಮತ್ತು ಹಣ ನೀಡಬೇಡಿ' ಎಂದು ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ.
ಈ ಹಿಂದೆ ವಂಚಕರು ಫೇಸ್‌ಬುಕ್‌ನಲ್ಲಿ ಗಣ್ಯರ ಡಿಪಿ (DP) ಕಾಪಿ ಮಾಡಿ ನಕಲಿ ಪ್ರೊಫೈಲ್ ಮೂಲಕ ಹಣ ಕೇಳುತ್ತಿದ್ದರು. ಆದರೆ ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಹ್ಯಾಕರ್ಸ್‌ಗಳು, ನೇರವಾಗಿ ಬಳಕೆದಾರರ ವಾಟ್ಸಾಪ್ ಖಾತೆಯನ್ನೇ ಹ್ಯಾಕ್ ಇದು ಕೇವಲ ಹಣವಷ್ಟೇ ಅಲ್ಲದೆ, ವ್ಯಕ್ತಿಯ ಖಾಸಗಿ ಮಾಹಿತಿ ಮತ್ತು ಗೌಪ್ಯತೆಗೂ ದೊಡ್ಡ ಅಪಾಯವನ್ನು ತಂದೊಡ್ಡಿದೆ.
ವಾಟ್ಸಾಪ್ ಹ್ಯಾಕ್ ಆಗುವುದು ಹೇಗೆ?
ಹ್ಯಾಕರ್ಸ್‌ಗಳು ಸಾಮಾನ್ಯವಾಗಿ 'ಫಿಶಿಂಗ್' (Phishing) ತಂತ್ರದ ಮೊರೆ ಹೋಗುತ್ತಿದ್ದಾರೆ. ಬಳಕೆದಾರರಿಗೆ ಅಪರಿಚಿತ ಸಂಖ್ಯೆಯಿಂದ ಲಿಂಕ್ ಕಳುಹಿಸಿ ಅಥವಾ "ವಾಟ್ಸಾಪ್ ಅಪ್‌ಡೇಟ್ ಮಾಡಿ" ಎಂಬ ಆಮಿಷದ ಸಂದೇಶ ಕಳುಹಿಸುತ್ತಾರೆ. ಅಪ್ಪಿತಪ್ಪಿ ಆ ಲಿಂಕ್ ಕ್ಲಿಕ್ ಮಾಡಿದರೆ ಅಥವಾ ಮೊಬೈಲ್‌ಗೆ ಬರುವ OTP ನೀಡಿದರೆ, ನಿಮ್ಮ ಖಾತೆ ಹ್ಯಾಕರ್ ಪಾಲಾಗುತ್ತದೆ. ಒಮ್ಮೆ ಅವರು ಲಾಗಿನ್ ಆದರೆ, ನಿಮ್ಮ ಫೋನ್‌ನಿಂದ ವಾಟ್ಸಾಪ್ ಲಾಗ್ ಔಟ್ ಆಗಿ ಅತಂತ್ರ ಸ್ಥಿತಿಗೆ ತಲುಪುತ್ತದೆ.
ಎಮರ್ಜೆನ್ಸಿ ನಾಟಕ; ಸ್ನೇಹಿತರಿಗೆ ವಂಚನೆ:
ವಾಟ್ಸಾಪ್ ಖಾತೆ ಹ್ಯಾಕ್ ಆದ ತಕ್ಷಣ, ಹ್ಯಾಕರ್ಸ್‌ಗಳು ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ 'ನಾನು ಆಸ್ಪತ್ರೆಯಲ್ಲಿದ್ದೇನೆ ಎಂದೋ ಅಥವಾ ಅಪಘಾತವಾಗಿದೆ ತುರ್ತು ಹಣದ ಅವಶ್ಯಕತೆಯಿದೆ ಎಂದೋ ಸಂದೇಶ ಕಳುಹಿಸುತ್ತಾರೆ. ಪ್ರೊಫೈಲ್ ಚಿತ್ರ ನಿಮ್ಮದೇ ಇರುವುದರಿಂದ ಜನರು ಅದನ್ನು ನಂಬಿ ಹಣ ಕಳುಹಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇಷ್ಟೇ ಅಲ್ಲದೆ, ವೈಯಕ್ತಿಕ ಫೋಟೋಗಳನ್ನು ಕದ್ದು ಅಥವಾ ಅಶ್ಲೀಲ ವೀಡಿಯೋ ಕಾಲ್ ಮಾಡಿ ಬ್ಲ್ಯಾಕ್‌ಮೇಲ್ ಮಾಡುವ ಸಾಧ್ಯತೆಗಳೂ ಇವೆ.
ಬಚಾವ್ ಆಗುವುದು ಹೇಗೆ? 'ಟೂ ಸ್ಟೆಪ್ ವೆರಿಫಿಕೇಶನ್' ಮರೆಯದಿರಿ!
ಸೈಬರ್ ವಂಚನೆಯಿಂದ ಪಾರಾಗಲು ವಾಟ್ಸಾಪ್‌ನಲ್ಲಿ ಕೂಡಲೇ 'Two-Step Verification' ಆನ್ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಇದರಿಂದ ಹ್ಯಾಕರ್ ಬಳಿ ನಿಮ್ಮ OTP ಇದ್ದರೂ, ಆರು ಅಂಕಿಯ ಭದ್ರತಾ ಪಿನ್ ಇಲ್ಲದೆ ಅವರು ಲಾಗಿನ್ ಆಗಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಅಪರಿಚಿತ ಲಿಂಕ್ ಕ್ಲಿಕ್ ಮಾಡಬೇಡಿ ಮತ್ತು ಯಾರೊಂದಿಗೂ OTP ಹಂಚಿಕೊಳ್ಳಬೇಡಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ