
ಮಂಡ್ಯ (ಮಾ.22): ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಡ್ಯದವರು ಛತ್ರಿಗಳು ಎಂಬ ಹೇಳಿಕೆಗೆ ಛತ್ರಿ ಮೂಲಕವೇ ತಿರುಗೇಟು ನೀಡಿರುವ ರೈತ ಹೋರಾಟಗಾರರು ಮಂಡ್ಯದವರು ಛತ್ರಿಗಳಲ್ಲ, ಛತ್ರಪತಿಗಳು ಎಂದರು.
ಡಿ.ಕೆ.ಶಿವಕುಮಾರ್ ಒಬ್ಬ ಅಂತಾರಾಜ್ಯ ಛತ್ರಿ. ಎಚ್ಚೆತ್ತುಕೊಳ್ಳದಿದ್ದರೇ ಅವರ ಹಿನ್ನೆಲೆಯನ್ನು ಜನರೆದುರು ಬಿಚ್ಚಿಡಬೇಕಾಗುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತಪರ ಹೋರಾಟಗಾರರ ಸಂಘದ ರಾಜ್ಯಾಧ್ಯಕ್ಷ ಎಚ್.ಎಸ್.ಚಂದ್ರಶೇಖರ್ ಅವರು ಡಿಕೆಶಿಗೆ ಮಂಡ್ಯ ಜನರ ಪರವಾಗಿ ಖಡಕ್ ವಾರ್ನಿಂಗ್ ನೀಡಿದರು.
ಉನ್ನತವಾದ ಸ್ಥಾನದಲ್ಲಿದ್ದುಕೊಂಡು ಮಂಡ್ಯ ಜನರ ಬಗ್ಗೆ ಇಂತಹ ಪದ ಪ್ರಯೋಗ ಮಾಡಿರುವುದು ನಿಮ್ಮ ಯೋಗ್ಯತೆ ಏನೆಂಬುದನ್ನು ತೋರಿಸುತ್ತದೆ. ಈ ವಿಷಯವಾಗಿ ಡಿ.ಕೆ.ಶಿವಕುಮಾರ್ ಕ್ಷಮೆ ಕೋರಲು ಸೋಮವಾರ ಸಂಜೆವರೆಗೆ ಅಂತಿಮ ಗಡುವು ನೀಡಲಾಗುವುದು. ಕ್ಷಮೆ ಕೇಳದಿದ್ದರೇ ಮಂಗಳವಾರ ಛತ್ರಿ ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಛತ್ರಿಗಳು ಎಂಬ ಡಿಕೆಶಿ ಹೇಳಿಕೆ ವಿರುದ್ಧ ಸಿಡಿದೆದ್ದ ಮಂಡ್ಯ ಜನ
ಮಂಗಳವಾರ ಮಂಡ್ಯದಲ್ಲಿ ನಡೆಯಲಿರುವ ಛತ್ರಿ ಚಳವಳಿಗೆ ರೈತ ಸಂಘಟನೆಗಳ ಏಕೀಕರಣದಿಂದ ಹೋರಾಟಕ್ಕೆ ಕರೆ ನೀಡಲಾಗುವುದು. ಚಳವಳಿಗೆ ಬರುವವರು ಮನೆಗೊಂದು ಛತ್ರಿ ತರುವಂತೆ ತಿಳಿಸಿದರು.
ಡಿ.ಕೆ.ಶಿವಕುಮಾರ್ ಆದಷ್ಟು ಬೇಗ ಮಂಡ್ಯಕ್ಕೆ ಬಂದು ಕ್ಷಮೆಯಾಚನೆ ಮಾಡದಿದ್ದರೆ ನಿಮ್ಮ ಮುಖಕ್ಕೆ ಬಸಿ ಬಳಿದು, ಕಪ್ಪುಬಟ್ಟೆ ಪ್ರದರ್ಶನ ಮಾಡಲಾಗುತ್ತದೆ. ಮಂಡ್ಯ ಜನರನ್ನು ಛತ್ರಿಗಳು ಎನ್ನುವ ನೀವು ಹಿಂದೆ ಏನಾಗಿದ್ದಿರಿ, ಯಾರ ಬಳಿ ಇದ್ದರೆಂಬುದು ಇಡೀ ಜಗತ್ತಿಗೇ ಗೊತ್ತಿರುವ ವಿಚಾರ ಎಂದು ಕಾಲೆಳೆದರು.
ಮಂಡ್ಯ ಜನ ಕಾಂಗ್ರೆಸ್ ಪಕ್ಷಕ್ಕೆ ೬ ಮಂದಿ ಶಾಸಕರನ್ನು ನೀಡಿದೆ. ಡಿಕೆಶಿ ಕ್ಷಮೆ ಕೋರದಿದ್ದರೆ ಮುಂದಿನ ಪರಿಣಾಮವನ್ನು ದೊಡ್ಡ ಮಟ್ಟದಲ್ಲಿ ಎದುರಿಸಬೇಕಾಗುತ್ತದೆ. ನೀವು ಕಾಂಗ್ರೆಸ್ ಬಾವುಟ ಹೀಡಿದು ಯಾವ ಕಾರಣಕ್ಕೂ ಮಂಡ್ಯಕ್ಕೆ ಬರಬೇಡಿ. ಜೊತೆಗೆ ಆರು ಜನ ಕಾಂಗ್ರೆಸ್ ಶಾಸಕರು ಈ ವಿಷಯವಾಗಿ ಮೌನ ವಹಿಸಿರುವುದು ವಿಷಾದನೀಯ. ಡಿಕೆಶಿ ಹೇಳಿಕೆ ಬಗ್ಗೆ ಶಾಸಕರು ಮಂಡ್ಯ ಜನರಿಗೆ ಉತ್ತರ ಕೊಡಬೇಕು. ಇಲ್ಲದಿದ್ದರೆ ಮುಂಬರುವ ಚುನಾವಣೆಯಲ್ಲಿ ಮಂಡ್ಯ ಜನರು ಏನೆನ್ನುವುದನ್ನು ತೋರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಎಂ.ಕೆ.ಸಂಜಯ್ ಕುಮಾರ್, ಬಿ.ರಮೇಶ್ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ