
ಬೆಂಗಳೂರು: ಆಂಧ್ರಪ್ರದೇಶದ ತಿರುಮಲದಲ್ಲಿರುವ ಕರ್ನಾಟಕ ಪ್ರವಾಸಿ ಸೌಧದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ (ಕೆಎಸ್‌ಟಿಡಿಸಿ) ವಹಿಸುವ ಒಪ್ಪಂದಕ್ಕೆ ಮುಜರಾಯಿ ಇಲಾಖೆ ಮತ್ತು ಕೆಎಸ್‌ಟಿಡಿಸಿ ಅಧಿಕಾರಿಗಳು ಗುರುವಾರ ಸಹಿ ಹಾಕಿದ್ದಾರೆ.
ಒಪ್ಪಂದದಡಿ ಪ್ರವಾಸಿ ಸೌಧದಲ್ಲಿರುವ ಐದು ಪ್ರಮುಖ ಬ್ಲಾಕ್‌ಗಳ ಒಟ್ಟು 364 ಕೊಠಡಿಗಳು, 12 ಡಾರ್ಮಿಟರಿಗಳು, ಕಲ್ಯಾಣ ಮಂಟಪ ಸೇರಿ ಪ್ರಮುಖ ಆತಿಥ್ಯ ಸೌಲಭ್ಯಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು 10 ವರ್ಷಗಳ ಅವಧಿಗೆ ಕೆಎಸ್‌ಟಿಡಿಸಿಗೆ ವಹಿಸಿಕೊಳ್ಳಲಿದೆ. ಸೌಲಭ್ಯಗಳನ್ನು ಹಂತ ಹಂತವಾಗಿ ನವೀಕರಿಸಿ ಕನಿಷ್ಠ 3-ಸ್ಟಾರ್ ಹೋಟೆಲ್ ಮಟ್ಟದ ಗುಣಮಟ್ಟದಲ್ಲಿ ನಿರ್ವಹಿಸಲು ಒತ್ತು ನೀಡಲಾಗಿದೆ.
ತಿರುಪತಿಗೆ ತೆರಳುವ ಕರ್ನಾಟಕದ ಯಾತ್ರಿಕರಿಗೆ ಸ್ವಚ್ಛ, ಸುರಕ್ಷಿತ, ಗುಣಮಟ್ಟದ ಮತ್ತು ಕೈಗೆಟುಕುವ ವಸತಿ ಒದಗಿಸುವ ಜೊತೆ, ಸರ್ಕಾರಿ ಪ್ರವಾಸಿ ಆಸ್ತಿಗಳನ್ನು ವೃತ್ತಿಪರವಾಗಿ ನಿರ್ವಹಿಸಿ ಯಾತ್ರಾ ಪ್ರವಾಸೋದ್ಯಮಕ್ಕೆ ಸಮಗ್ರ ಮಾದರಿಯನ್ನು ರೂಪಿಸುವುದು ಈ ಕ್ರಮದ ಉದ್ದೇಶ.
ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಜರಾಯಿ ಹಾಗೂ ಮೀನುಗಾರಿಕೆ ಸಚಿವ ಕೆ.ಎಸ್.ಬಸವಂತಪ್ಪ ಹಾಗೂ ಕೆಎಸ್‌ಟಿಡಿಸಿ ಅಧ್ಯಕ್ಷ ಎಂ.ಶ್ರೀನಿವಾಸ್ ಉಪಸ್ಥಿತರಿದ್ದರು.
ಈವೇಳೆ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್, ತಿರುಪತಿ-ತಿರುಮಲಕ್ಕೆ ಕರ್ನಾಟಕದಿಂದ ದೊಡ್ಡ ಸಂಖ್ಯೆಯಲ್ಲಿ ಯಾತ್ರಿಕರು ತೆರಳುತ್ತಾರೆ. ಅವರಿಗೆ ಉತ್ತಮ ಮತ್ತು ಕೈಗೆಟಕುವ ದರದಲ್ಲಿ ವಸತಿ ಕಲ್ಪಿಸುವುದು ಮೊದಲ ಆದ್ಯತೆ. ಯಾತ್ರಿಕರಿಗೆ ಕೇವಲ ವಸತಿ ಕಲ್ಪಿಸುವುದಕ್ಕೆ ಈ ಯೋಜನೆ ಸೀಮಿತವಾಗಬಾರದು. ಯಾತ್ರಾ ಪ್ರವಾಸವನ್ನು ಸಮಗ್ರ ಪ್ರವಾಸಿ ಅನುಭವವಾಗಿ ರೂಪಿಸುವ ನಿಟ್ಟಿನಲ್ಲಿ ಮುಂದುವರಿಯಬೇಕು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ