22 ತಾಲೂಕು ಬಿಟ್ಟು ಇಡೀ ಕರ್ನಾಟಕದಲ್ಲಿ ಬರಗಾಲ, 239 ತಾಲೂಕುಗಳ ಪೈಕಿ 217ರಲ್ಲೀಗ ಕ್ಷಾಮ!

Gowthami K   | Kannada Prabha
Published : Oct 02, 2026, 09:08 AM IST
Drought

ಸಾರಾಂಶ

ರಾಜ್ಯ ಸರ್ಕಾರವು ವೈಜ್ಞಾನಿಕ ಮೌಲ್ಯಮಾಪನ ನಡೆಸಿ ಹೊಸದಾಗಿ 40 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಇದರೊಂದಿಗೆ ರಾಜ್ಯದ ಒಟ್ಟು 239 ತಾಲೂಕುಗಳ ಪೈಕಿ 217 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರಿವೆ. ಶಾಸಕರ ಒತ್ತಡದ ಮೇರೆಗೆ ಗದಗ ಮತ್ತು ಚಡಚಣ ತಾಲೂಕುಗಳನ್ನು ಸಹ ಈ ಪಟ್ಟಿಯಲ್ಲಿ ಸೇರಿಸಲಾಗಿದೆ.

ಬೆಂಗಳೂರು: ಬರ ಪರಿಸ್ಥಿತಿಯ ವೈಜ್ಞಾನಿಕ ಮೌಲ್ಯಮಾಪನದ (ಗ್ರೌಂಡ್‌ ಟ್ರೂಥಿಂಗ್‌) ನಂತರ ಹೊಸದಾಗಿ 40 ತಾಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದ್ದು, ಈ ಮೂಲಕ ಒಟ್ಟಾರೆ ಬರ ಪೀಡಿತ ತಾಲೂಕುಗಳ ಸಂಖ್ಯೆ 217ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ರಾಜ್ಯದ 239 ತಾಲೂಕುಗಳ ಪೈಕಿ 22 ತಾಲೂಕು ಹೊರತುಪಡಿಸಿ ಉಳಿದೆಲ್ಲ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದಂತಾಗಿದೆ.

ಒಟ್ಟು ನಾಲ್ಕು ಬಾರಿ ಮೌಲ್ಯಮಾಪನ ನಡೆಸಿ ಬರ ಪೀಡಿತ ತಾಲೂಕುಗಳ ಪಟ್ಟಿ ಮಾಡಲಾಗಿದೆ. ಆ. 27ರಂದು 101 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿತ್ತು. ನಂತರ ಹಂತಹಂತವಾಗಿ 23 ಮತ್ತು 53 ತಾಲೂಕುಗಳನ್ನು ಬರ ಪೀಡಿತ ಎಂದು ಪಟ್ಟಿ ಮಾಡಲಾಗಿತ್ತು. ಸೆ.21 ಮತ್ತು 23ರಂದು ಕ್ರಮವಾಗಿ 11 ಮತ್ತು 29 ತಾಲೂಕುಗಳ ವೈಜ್ಞಾನಿಕ ಮೌಲ್ಯಮಾಪನಕ್ಕೆ ಆದೇಶಿಸಲಾಗಿತ್ತು. ಇದೀಗ ಆ ಎರಡೂ ಪಟ್ಟಿಯಲ್ಲಿ ಮಲೆನಾಡು ಜಿಲ್ಲೆಯ ತಾಲೂಕುಗಳು ಸೇರಿ ಒಟ್ಟು 40 ತಾಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರ ಪ್ರಕಟಿಸಿದೆ.

217 ತಾಲೂಕುಗಳಲ್ಲಿ ಬರ:

ಸದ್ಯ ಬರ ಪೀಡಿತ ತಾಲೂಕುಗಳ ವೈಜ್ಞಾನಿಕ ಮೌಲ್ಯಮಾಪನಕ್ಕೆ ಯಾವುದೇ ಆದೇಶ ಹೊರಬೀಳದ ಕಾರಣ, ರಾಜ್ಯದ 22 ತಾಲೂಕುಗಳಲ್ಲಿ ಮಾತ್ರ ಮುಂಗಾರು ಕೊರತೆ ಅಷ್ಟಾಗಿ ಕಾಡದೆ ಬರ ಪರಿಸ್ಥಿತಿ ಉಂಟಾಗಿಲ್ಲ ಎಂದು ಸರ್ಕಾರ ತಿಳಿಸಿದಂತಾಗಿದೆ. ನಾಲ್ಕು ಹಂತದಲ್ಲಿ ಪ್ರಕಟಿಸಲಾಗಿರುವ ಬರ ಪೀಡಿತ ತಾಲೂಕುಗಳ ಪಟ್ಟಿಯಂತೆ 185 ತಾಲೂಕುಗಳಲ್ಲಿ ತೀವ್ರ ಬರ ಮತ್ತು 32 ತಾಲೂಕುಗಳಲ್ಲಿ ಸಾಧಾರಣ ಬರ ಪರಿಸ್ಥಿತಿಯಿದೆ ಎಂದು ತಿಳಿಸಲಾಗಿದೆ.

ಹೊಸ ಬರ ಪೀಡಿತ ತಾಲೂಕುಗಳ ವಿವರ:

ಚನ್ನಪಟ್ಟಣ, ಕನಕಪುರ, ಹಾರೋಹಳ್ಳಿ, ಜಗಳೂರು, ಪಿರಿಯಾಪಟ್ಟಣ, ಕುಷ್ಟಗಿ, ಔರಾದ್‌, ಗೋಕಾಕ್‌, ರಾಮದುರ್ಗ, ಸವದತ್ತಿ, ಕಾಗವಾಡ, ಇಂಡಿ, ಚಡಚಣ, ತಾಳಿಕೋಟೆ, ಗದಗ, ಮುಂಡರಗಿ, ರೋಣ, ಹಿರೇಕೆರೂರು, ಧಾರವಾಡ, ಕಲಘಟಗಿ, ಕುಂದಗೋಳ, ಅಳ್ನಾವರ, ಭದ್ರಾವತಿ, ಶಿಕಾರಿಪುರ, ಶಿವಮೊಗ್ಗ, ಸೊರಬ, ತೀರ್ಥಹಳ್ಳಿ, ಚಿಕ್ಕಮಗಳೂರು, ಕಳಸ, ಮಡಿಕೇರಿ, ಕುಶಾಲನಗರ, ಬೆಳ್ತಂಗಡಿ, ಬಂಟ್ವಾಳ, ಉಲ್ಲಾಳ, ಉಡುಪಿ, ಬೈಂದೂರು, ಅಂಕೋಲ, ಭಟ್ಕಳ, ಹಳಿಯಾಳ, ಶಿರಸಿ.

ಯಶವಂತರಾಯ, ಎಚ್ಕೆಪಿ ಕ್ಷೇತ್ರ ಬರ

ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ತಾವು ಪ್ರತಿನಿಧಿಸುವ ಕ್ಷೇತ್ರ ಮತ್ತು ಜಿಲ್ಲೆಗಳನ್ನು ಸೇರ್ಪಡೆ ಮಾಡಿಲ್ಲ ಎಂದು ಎಚ್‌.ಕೆ.ಪಾಟೀಲ್‌ ರಾಜೀನಾಮೆಯ ಬೆದರಿಯೊಡ್ಡಿದ್ದರೆ, ಯಶವಂತರಾಯಗೌಡ ಪಾಟೀಲ್‌ ರಾಜೀನಾಮೆಯನ್ನೇ ಸಲ್ಲಿಸಿದ್ದರು. ಈ ಬೆದರಿಕೆಗೆ ಮಣಿದ ಸರ್ಕಾರ ಇದೀಗ ನಾಲ್ಕನೇ ಪಟ್ಟಿಯಲ್ಲಿ ಎಚ್‌.ಕೆ.ಪಾಟೀಲ್‌ ಆಗ್ರಹದಂತೆ ಗದಗ ಮತ್ತು ಯಶವಂತರಾಯಗೌಡ ಪಾಟೀಲ್‌ ಅವರು ಪ್ರತಿನಿಧಿಸುವ ಚಡಚಣವನ್ನು ಬರ ಪೀಡಿತ ತಾಲೂಕುಗಳೆಂದು ಘೋಷಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

56 ವರ್ಷಗಳ ಬಳಿಕ ರಾಜ್ಯಕ್ಕೆ ಎದುರಾಯ್ತು ಆತಂಕ: ಮಳೆಗಾಲದಲ್ಲೇ ಉರಿಬಿಸಿಲು ನೀರಿಗೆ ಹಾಹಾಕಾರ! ತಜ್ಞರು ಹೇಳಿದ್ದೇನು?
RSS Case ಸಚಿವ ಪ್ರಿಯಾಂಕ್ ಖರ್ಗೆ, ಮೊಹಮ್ಮದ್ ನಲಪಾಡ್ ಅರ್ಜಿಗಳ ವಿಚಾರಣೆಗೆ ಹೈಕೋರ್ಟ್ ನಕಾರ