
ಬೆಂಗಳೂರು (ಅ.1): ರಾಜ್ಯದಲ್ಲಿ ಕಳೆದ 56 ವರ್ಷಗಳಲ್ಲಿ ಕಾಣದಂಥ ಶೇ.34ರಷ್ಟು ಕೊರತೆಯ ಮುಂಗಾರು ನಿರ್ಗಮನವಾಗಿದೆ. ಇದರ ಜೊತೆ ಈ ಬಾರಿ ಹಿಂಗಾರು ಶೇ.30ರಷ್ಟು ಕೊರತೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಆಹಾರ ಧಾನ್ಯಗಳ ಉತ್ಪಾದನೆ ಶೇ 30-ರಿಂದ 40 ರಷ್ಟು ಕುಸಿಯುವ ಆತಂಕ ಎದುರಾಗಿದೆ.
ರಾಜ್ಯದ ಶೇ.90ರಷ್ಟು ತಾಲೂಕುಗಳಲ್ಲಿ ಬರ ಘೋಷಿಸಲಾಗಿದೆ. ರಾಜ್ಯದ 15 ಲಕ್ಷ ಹೆಕ್ಟರ್ ಹೊಲಗಳಲ್ಲಿ ಬಿತ್ತನೆ ಆಗಿಲ್ಲ. 69 ಲಕ್ಷ ಹೆಕ್ಟೆರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಮಳೆ ಕೊರತೆಯಿಂದ ಶೇ.30ರಿಂದ ಶೇ.40ರಷ್ಟು ಬೆಳೆ ಕೈಕೊಡುತ್ತಿದೆ. ಹೀಗಾಗಿ, ಈ ಬಾರಿ ಕೃಷಿ ಉತ್ಪನ್ನಗಳ ಉತ್ಪಾದನೆ ಶೇ.30ರಿಂದ 40ರಷ್ಟು ಕುಸಿಯಲಿದೆ. ಇದರ ಪರಿಣಾಮ ಆಹಾರ ಉತ್ಪನ್ನಗಳ ಬೆಲೆಯು ಮುಂಬರುವ ದಿನಗಳಲ್ಲಿ ಹೆಚ್ಚಳವಾಗಲಿದೆ ಎಂದು ಹವಾಮಾನ ತಜ್ಞ ಶ್ರೀನಿವಾಸ ರೆಡ್ಡಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಮುಂಗಾರು ಅಲ್ಪ ಪ್ರಮಾಣದಲ್ಲಿ ಕೊರತೆಯಾದಾಗ ಹಿಂಗಾರು ಮಳೆಯು ಆ ಕೊರತೆ ನೀಗಿಸುತ್ತದೆ. ಈ ಮೂಲಕ ಬೆಳೆ ಹಾನಿ ಪ್ರಮಾಣ ಕಡಿಮೆ ಮಾಡುತ್ತಿತ್ತು. ಆದರೆ, ಸೆಪ್ಟೆಂಬರ್ ತಿಂಗಳಲ್ಲೇ ಸರಾಸರಿಗಿಂತ ಶೇ.54ರಷ್ಟು ಮಳೆ ಕೊರತೆಯಾಗಿದೆ. ಅದರ ಜೊತೆ ಹಿಂಗಾರು ಕೂಡ ಕೊರತೆಯಾಗುತ್ತಿರುವುದರಿಂದ ಕುಡಿಯುವ ನೀರು, ಕಾಲುವೆಗಳಿಗೆ ನೀರು ಬಿಡುಗಡೆ ಮೇಲೂ ಪರಿಣಾಮ ಬೀರುತ್ತದೆ. ರೈತರು ಹೊಸ ಬೆಳೆಗಳನ್ನು ಬೆಳೆಯುವ ಪ್ರಯತ್ನ ಮಾಡದೆ ಇರುವ ಬೆಳೆಗಳನ್ನು ಉಳಿಸಿಕೊಂಡು ಹೋಗುವುದು ಉತ್ತಮ ಎಂದು ರೆಡ್ಡಿ ಹೇಳಿದರು.
ಎಲ್ ನೀನೋ ಪರಿಣಾಮವಾಗಿ ಈ ಬಾರಿ ಬೇಸಿಗೆ ಹೆಚ್ಚು ತೀವ್ರವಾಗಿರುತ್ತದೆ. ತಾಪಮಾನ ಸರಾಸರಿಗಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿರುತ್ತದೆ. ಹೀಗಾಗಿ, ಫ್ಯಾನ್, ಎಸಿ ಬಳಕೆ ಹೆಚ್ಚಾಗಿ ವಿದ್ಯುತ್ ಬಳಕೆಯೂ ಏರಿಕೆಯಾಗಲಿದೆ. ಆದರೆ, ಜಲಾಶಯಗಳಲ್ಲಿ ಕಡಿಮೆ ನೀರು ಇರುವುದರಿಂದ ಜಲವಿದ್ಯುತ್ ಉತ್ಪಾದನೆ ಪ್ರಮಾಣ ಕುಸಿತವಾಗಲಿದೆ. ಹೀಗಾಗಿ, ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಸಮಯ ಕೂಡ ಹೆಚ್ಚಾಗುವ ಸಂಭವವಿದೆ.
ಮಳೆಯಿಲ್ಲದೆ ನದಿಗಳು, ಜಲಾಶಯಗಳು, ಕೆರೆಗಳಲ್ಲಿ ನೀರಿನ ಸಂಗ್ರಹ ತೀವ್ರವಾಗಿ ಕುಸಿದಿದೆ. ಹೀಗಾಗಿ, ಅಂತರ್ಜಲ ಕಡಿಮೆಯಾಗಲಿದೆ. ಕಡಿಮೆ ನೀರಿನ ಕೊಳವೆಬಾವಿಗಳು ಬತ್ತುವ ಆತಂಕವಿದೆ. ಅಲ್ಲದೇ, ಹೊಸದಾಗಿ ಕೊರೆಯುವ ಕೊಳವೆಬಾವಿಗಳಲ್ಲಿ ನೀರು ಸಿಗುವ ಸಾಧ್ಯತೆಯು ಕಡಿಮೆಯಾಗಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.
ಈ ಬಾರಿಯ ಹಿಂಗಾರು ಶೇ.30ರಷ್ಟು ಕೊರತೆಯಾಗಲಿದೆ. ಇದರಿಂದ ಹಿಂಗಾರು ಬೆಳೆಗಳಿಗೆ ಸಮಸ್ಯೆಯಾಗುವ ಜೊತೆಗೆ ಕುಡಿಯುವ ನೀರು ಮತ್ತು ಅಂತರ್ಜಲ ಮಟ್ಟ ಸಹ ಕುಸಿಯಲಿದೆ. ಜನರು ನೀರನ್ನು ಅತ್ಯಂತ ಎಚ್ಚರಿಕೆಯಿಂದ ಬಳಕೆ ಮಾಡಬೇಕು.
ಶ್ರೀನಿವಾಸ ರೆಡ್ಡಿ, ಹವಾಮಾನ ತಜ್ಞ
ಐತಿಹಾಸಿಕ ಕೊರತೆ\
2012ರಲ್ಲಿ ಶೇ.33ರಷ್ಟು ಮುಂಗಾರು ಕೊರತೆಯಾಗಿತ್ತು. ಆದರೆ, ಈ ಬಾರಿ ಶೇ.34ರಷ್ಟು ಕೊರತೆಯಾಗಿರುವುದು ಹೊಸ ದಾಖಲೆಯಾಗಿದೆ. ಜಲವಿದ್ಯುತ್ ಉತ್ಪಾದಿಸುವ ಜಲಾಶಯಗಳಲ್ಲಿ ಶೇ.46ರಷ್ಟು ನೀರಿನ ಕೊರತೆಯಿದೆ. ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಶೇ.48ರಷ್ಟು ನೀರಿನ ಕೊರತೆಯಿದೆ. ಕೃಷ್ಣ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಶೇ.20ರಷ್ಟು ನೀರಿನ ಕೊರತೆಯಿದೆ.
ಒಟ್ಟಾರೆ ರಾಜ್ಯದ ಜಲಾಶಯಗಳಲ್ಲಿ ಮುಂಗಾರು ಹಂಗಾಮಿನ ಕಡೆಯ ದಿನವಾದ ಸೆ.30ರಂದು ಶೇ.33ರಷ್ಟು ನೀರಿನ ಕೊರತೆಯಿದೆ. ಜಲಾಶಯಗಳ ಒಟ್ಟು ಸಾಮರ್ಥ್ಯ 895 ಟಿಎಂಸಿ ಆಗಿದ್ದು, 600 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಕಳೆದ ವರ್ಷ ಸೆ.30ರಂದು 828 ಟಿಎಂಸಿ ನೀರು ಶೇಖರಣೆಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ