ತಾಯಿಯ ಅಂತ್ಯಸಂಸ್ಕಾರಕ್ಕೆ ಹೋಗಿದ್ದ ಪುತ್ರಗೆ ಸೋಂಕು!

By Kannadaprabha NewsFirst Published May 28, 2020, 2:19 PM IST
Highlights

ತಾಯಿಯ ಅಂತ್ಯಸಂಸ್ಕಾರಕ್ಕೆ ಹೋಗಿದ್ದ ಪುತ್ರಗೆ ಸೋಂಕು| ತಮಿಳುನಾಡಿಗೆ ಹೋಗಿದ್ದ ಕನ್ನಡ ವಾಹಿನಿಯ ಸಿಬ್ಬಂದಿ

ಬೆಂಗಳೂರು(ಮೇ.28): ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ವಾಹಿನಿಯೊಂದರ ಕ್ಯಾಮೆರಾಮನ್‌, ಅವರ ಮಗ, ವಿದೇಶದಿಂದ ಬಂದ ಇಬ್ಬರು ಸೇರಿದಂತೆ ಒಟ್ಟು ಆರು ಜನರಿಗೆ ಬುಧವಾರ ಕೊರೋನಾ ಸೋಂಕು ದೃಢಪಟ್ಟಿದೆ. ಇದರಿಂದ ನಗರದ ಒಟ್ಟು ಸೋಂಕಿತರ ಸಂಖ್ಯೆ 282ಕ್ಕೇರಿದೆ.

ಕನ್ನಡ ವಾಹಿನಿಯಲ್ಲಿ ಕ್ಯಾಮೆರಾಮನ್‌ ಆಗಿ ಕಾರ‍್ಯನಿರ್ವಹಿಸುತ್ತಿದ್ದ 60 ವರ್ಷದ ವ್ಯಕ್ತಿಯು ತಮ್ಮ ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಮೇ 12ರಂದು ತಮ್ಮ 32 ವರ್ಷದ ಪುತ್ರನೊಂದಿಗೆ ತಮಿಳುನಾಡಿಗೆ ಹೋಗಿ ಮೇ 13ರಂದು ವಾಪಸ್ಸಾಗಿದ್ದರು. ರಾಮಮೂರ್ತಿ ನಗರ ವಾರ್ಡ್‌ ವ್ಯಾಪ್ತಿಯ ಕಲ್ಕೆರೆ ನಿವಾಸಿಗಳಾದ ಈ ಇಬ್ಬರೂ ನಂತರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ ನಿಗದಿತ ಆಸ್ಪತ್ರೆಯಲ್ಲಿ ಕೊರೋನಾ ಪರೀಕ್ಷೆಗೊಳಗಾಗಿದ್ದರು. ಇದೀಗ ಇಬ್ಬರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕು ಪತ್ತೆಯಾದ ಕಲ್ಕೆರೆ ಪ್ರದೇಶವನ್ನು ಸೀಲ್‌ಡೌನ್‌ ಮಾಡಿ, ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಕೊರಿಯಾದಲ್ಲಿಲ್ಲ ಒಂದೇ ಒಂದು ಕೊರೋನಾ ಕೇಸ್: ಸೀಕ್ರೇಟ್ ಬಿಚ್ಚಿಟ್ಟ ಕಿಮ್

ವಿದೇಶದ ಇಬ್ಬರಿಗೆ ಸೋಂಕು: ಮತ್ತೊಂದೆಡೆ ನೇಪಾಳದಿಂದ ಬಂದ 22 ವರ್ಷದ ಯುವತಿ ಹಾಗೂ ಅರಬ್‌ ಸಂಯುಕ್ತ ಸಂಸ್ಥಾನಗಳಿಂದ ಬಂದ 28 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಅಲ್ಲದೆ, ಮಹಾರಾಷ್ಟ್ರದಿಂದ ಬಂದಿದ್ದ 25 ವರ್ಷದ ಮತ್ತೊಬ್ಬ ಯುವತಿಗೂ ಬುಧವಾರ ಸೋಂಕು ದೃಢಪಟ್ಟಿದೆ. ಇವರು ನಗರಕ್ಕೆ ಬಂದ ಬಳಿಕ ಹೋಟೆಲ್‌ ಕ್ವಾರಂಟೈನ್‌ನಲ್ಲಿದ್ದರು. ಹಾಗಾಗಿ ಯಾವುದೇ ವ್ಯಕ್ತಿಗಳು ಇರುವ ಸಂಪರ್ಕಕ್ಕೆ ಬಂದಿಲ್ಲ ಎಂದು ಪಾಲಿಕೆ ಆರೋಗ್ಯ ಮುಖ್ಯ ಅಧಿಕಾರಿ ವಿಜಯೇಂದ್ರ ತಿಳಿಸಿದ್ದಾರೆ.

ಕಳ್ಳನಿಂದ ಪೊಲೀಸ್‌ಗೆ ಹರಡಿದ ಸೋಂಕು

ಹೆಬ್ಬಗೋಡಿಯಲ್ಲಿ ಕಬ್ಬಿಣ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ ಪಿ.1396 ಸಂಖ್ಯೆಯ ಸೋಂಕಿತನಿಂದ ಮತ್ತೊಬ್ಬ ವ್ಯಕ್ತಿಗೆ ಸೋಂಕು ಹರಡಿದೆ. ಕಳ್ಳತನ ಮಾಡಿ ಸಿಕ್ಕಿಬಿದ್ದವನನ್ನು ಪರೀಕ್ಷೆಗೊಳಪಡಿಸಿದಾಗ ಸೋಂಕು ದೃಢಪಟ್ಟಿತ್ತು. ನಂತರ ಆ ಕಳ್ಳನನ್ನು ಹಿಡಿದಿದ್ದ ಹೆಬ್ಬಗೋಡಿ ಠಾಣೆಯ ಒಬ್ಬ ಪೊಲೀಸ್‌ ಕಾನ್‌ಸ್ಟೇಬಲ್‌ಗೂ ಕೊರೋನಾ ತಗುಲಿತ್ತು. ಈಗ ಮತ್ತೊಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.

ಇನ್ನು, ಬುಧವಾರ ಸೋಂಕಿನಿಂದ ಗುಣಮುಖರಾದ ನಗರದ ಇಬ್ಬರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 151 ಆಗಿದೆ. 120 ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಉಳಿದ 11 ಜನ ಮೃತಪಟ್ಟಿದ್ದಾರೆ.

ಕೊರೋನಾ ರೋಗಿಗಳಿಗೆ ಮನೆಯಲ್ಲಿಯೇ ಚಿಕಿತ್ಸೆ ಕೊಡಿಸೋದು ಹೇಗೆ?

25 ಪ್ರದೇಶ ಸೀಲ್‌

ರಾಮಮೂರ್ತಿ ನಗರ ವಾರ್ಡ್‌ ವ್ಯಾಪ್ತಿಯ ಕಲ್ಕೆರೆಯಲ್ಲಿ ಇಬ್ಬರಿಗೆ ಹೊಸದಾಗಿ ಸೋಂಕು ದೃಢಪಟ್ಟಿದ್ದರಿಂದ ಈ ವಾರ್ಡ್‌ಅನ್ನು ಕಂಟೈನ್ಮೆಂಟ್‌ ವಾರ್ಡ್‌ಗಳ ಪಟ್ಟಿಗೆ ಸೇರಿಸಲಾಗಿದೆ. ಮತ್ತೊಂದೆಡೆ 28 ದಿನಗಳಿಂದ ಯಾವುದೇ ಹೊಸ ಪ್ರಕರಣ ಕಂಡುಬರದ ಹಿನ್ನೆಲೆಯಲ್ಲಿ ದೀಪಾಂಜಲಿ ನಗರ ವಾರ್ಡ್‌ಅನ್ನು ಕಂಟೈನ್ಮೆಂಟ್‌ ಪಟ್ಟಿಯಿಂದ ಕೈಬಿಡಲಾಗಿದೆ.

ಇದರಿಂದ ನಗರದ ಒಟ್ಟು ಕಂಪೈನ್ಮೆಂಟ್‌ ವಾರ್ಡುಗಳ ಸಂಖ್ಯೆ 24ರಷ್ಟಾಗಿದ್ದು, ಈ ವಾರ್ಡ್‌ಗಳ ವ್ಯಾಪ್ತಿಯ 25 ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

click me!