
ಬೆಂಗಳೂರು(ಜು.09): ಹಂಪಿ ನಗರದಲ್ಲಿ ಮಂಗಳವಾರ ನಡೆದಿದ್ದ ಹನುಮೇಶ್‌ಗೌಡ ಕೊಲೆ ಪ್ರಕರಣ ಸಂಬಂಧ ಆರೋಪಿಯಾಗಿರುವ ಮೃತನ ಸ್ನೇಹಿತನನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಮನಗರ ತಾಲೂಕಿನ ಅಕ್ಕೂರು ಗ್ರಾಮದ ಅರುಣ್ (28) ಬಂಧಿತನಾಗಿದ್ದು, ಆರೋಪಿಯಿಂದ ಕೃತ್ಯಕ್ಕೆ ಬಳಸಲಾಗಿದ್ದ ಚಾಕು ಹಾಗೂ ಬೈಕ್ ಜಪ್ತಿ ಮಾಡಲಾಗಿದೆ. ತನ್ನ ತಾಯಿನ್ನು ನಿಂದಿಸಿದ ಕಾರಣಕ್ಕೆ ಗೆಳೆಯನನ್ನು ಕೊಂದಿದ್ದಾಗಿ ವಿಚಾರಣೆ ವೇಳೆ ಅರುಣ್ ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಯಿ ನಿಂದನೆ-ಗೆಳೆಯನ ಹತ್ಯೆ:
ಹಲವು ದಿನಗಳಿಂದ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯ ಹನುಮೇಶ್ ಗೌಡ ಹಾಗೂ ರಾಮನಗರದ ಅರುಣ್ ಸ್ನೇಹಿತರು. ಹಂಪಿ ನಗರದಲ್ಲಿ ಹನುಮೇಶ್ ಗೌಡ, ‘ಬೆಸ್ಟ್ ಆಫ್ ಫೆಟ್’ ಎಂಬ ಹೆಸರಿನಲ್ಲಿ ಪ್ರಾಣಿಗಳ ಆಹಾರ ಮಾರಾಟ ಮಳಿಗೆ ನಡೆಸುತ್ತಿದ್ದ. ಈ ಗೆಳೆಯರಿಗೆ ಕುಮಾರ್ ಎಂಬಾತ ಆತ್ಮೀಯ ಸ್ನೇಹಿತ ಇದ್ದ. ಕೆಲ ದಿನಗಳ ಹಿಂದೆ ಹನುಮೇಶ್‌ನಿಂದ 5 ಲಕ್ಷವನ್ನು ಅರುಣ್ ಸಾಲ ಪಡೆದರೆ, ಕುಮಾರ್‌ನಿಂದ ಹನುಮೇಶ 2 ಲಕ್ಷ ಸಾಲ ಪಡೆದಿದ್ದ. ಈ ಸಾಲದ ವಿಚಾರವು ಗೆಳೆಯರಲ್ಲಿ ಮನಸ್ತಾಪ ತಂದಿತು.
'ಕೊರೋನಾ ಸೋಂಕಿತ ಗರ್ಭಿಣಿಯರಿಗೆ ಪ್ರತ್ಯೇಕ ಆಸ್ಪತ್ರೆ'
ತನ್ನ ಹಣ ಕೊಡುವಂತೆ ಅರುಣ್‌ಗೆ ಹನುಮೇಶ್ ತಾಕೀತು ಮಾಡಿದ್ದ. ಹೀಗೆ ಜಗಳವಾಡುವಾಗ ಅರುಣ್‌ಗೆ ಆತನ ತಾಯಿ ಹೆಸರು ಪ್ರಸ್ತಾಪಿಸಿ ಹನುಮೇಶ್ ನಿಂದಿಸುತ್ತಿದ್ದ. ಅಂತೆಯೇ ಮಂಗಳವಾರ ಮಧ್ಯಾಹ್ನ ಸಹ ಅರುಣ್ ಮೊಬೈಲ್‌ಗೆ ಆತನ ತಾಯಿಯನ್ನು ಆಕ್ಷೇಪಾರ್ಹ ಪದ ಬಳಸಿ ನಿಂದಿಸಿ ಹನುಮೇಶ್ ಮೆಸೇಜ್ ಮಾಡಿದ್ದ. ಇದರಿಂದ ಕೆರಳಿದ ಆತ, ಗೆಳೆಯನ ಹತ್ಯೆಗೆ ಮುಂದಾದ. ಮನೆಯಿಂದ ಹೊರಡುವಾಗಲೇ ಚಾಕು ತೆಗೆದುಕೊಂಡು ಆರೋಪಿ ಬಂದಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
ಹಂಪಿನಗರದ ತನ್ನ ಮಳಿಗೆಯಲ್ಲಿ ಮಂಗಳವಾರ ಮಧ್ಯಾಹ್ನ 1.30ರಲ್ಲಿ ಹನುಮೇಶ್ ಇದ್ದ. ಅದೇ ಹೊತ್ತಿಗೆ ಅರುಣ್ ಬಂದಿದ್ದಾನೆ. ಆಗ ಊಟಕ್ಕಾಗಿ ಹನುಮೇಶ್ ಮಳಿಗೆ ಸಹಾಯಕ ಹೊರಹೋಗಿದ್ದಾನೆ. ಆಗ ಮೊಬೈಲ್ ಮೆಸೇಜ್ ವಿಚಾರ ಪ್ರಸ್ತಾಪಿಸಿ ಅರುಣ್ ಜಗಳ ತೆಗೆದಿದ್ದಾನೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಕೊರೋನಾ ಆರ್ಭಟ: ಹೋಟೆಲ್ ಬಂದ್ ಮಾಡಲು ನಿರ್ಧಾರ
ಈ ಹಂತದಲ್ಲಿ ಗೆಳೆಯನಿಗೆ ಚಾಕುವಿನಿಂದ ಇರಿದು ಅರುಣ್ ಹತ್ಯೆಗೈದು ಪರಾರಿಯಾಗಿದ್ದ. ಊಟ ಮುಗಿಸಿ ಮಳಿಗೆ ಸಹಾಯಕ ಮರಳಿದಾಗ ಕೃತ್ಯ ಬೆಳಕಿಗೆ ಬಂದಿತ್ತು. ಬಳಿಕ ಆತ ನೀಡಿದ ಮಾಹಿತಿ ಮೇರೆಗೆ ವಿಜಯನಗರ ಉಪ ವಿಭಾಗದ ಎಸಿಪಿ ಎಚ್.ಎಂ.ಧರ್ಮೇಂದ್ರಯ್ಯ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ