ರಾಜ್ಯದಲ್ಲಿ ಲವ್‌ಜಿಹಾದ್ ನಿಷೇಧ ಕಾಯ್ದೆ ಜಾರಿ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಬಳ್ಳಾರಿ (ಜ.05): ರಾಜ್ಯದಲ್ಲಿ ಲವ್‌ಜಿಹಾದ್ ನಿಷೇಧ ಕಾಯ್ದೆ ಜಾರಿ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಲವ್‌ಜಿಹಾದ್ ನಿಷೇಧ ಕುರಿತಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು ನೀಡಿದ ಹೇಳಿಕೆ ಕುರಿತು ಬುಧವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಲವ್ ಜಿಹಾದ್ ಕಾಯ್ದೆ ಜಾರಿಗೊಳಿಸಬೇಕೋ, ಬೇಡವೋ ಎಂಬ ವಿಚಾರದ ಬಗ್ಗೆ ಇನ್ನೂ ಯಾವುದೇ ನಿಲುವನ್ನು ಸರ್ಕಾರ ತೆಗೆದುಕೊಂಡಿಲ್ಲ.
ಈ ವಿಚಾರ ಪಕ್ಷದ ಹಂತದಲ್ಲಿ ಚರ್ಚೆಯಾಗುತ್ತಿದೆ. ಈ ಕುರಿತು ಪಕ್ಷದ ರಾಜ್ಯಾಧ್ಯಕ್ಷರ ಬಳಿ ಚರ್ಚಿಸಿ, ಸರ್ಕಾರ ನಿಲುವು ಪ್ರಕಟಿಸುತ್ತೇವೆ ಎಂದು ತಿಳಿಸಿದರು. ಬಳ್ಳಾರಿ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ನೆಪದಲ್ಲಿ ಕೆಆರ್‌ಡಿಬಿಯಿಂದ ವಶಪಡಿಸಿಕೊಂಡಿರುವ ಭೂಮಿಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಅವರಿಗೆ ನೊಟೀಸ್ ನೀಡಲಾಗಿದೆ. ಆದಷ್ಟುಬೇಗ ಕಂಪನಿಗಳಿಂದ ಜಮೀನು ವಾಪಸ್ ಪಡೆದು ಬೇರೆ ಕೈಗಾರಿಕೆಗಳಿಗೆ ನೀಡಲು ಸರ್ಕಾರ ನಿರ್ಧರಿಸಿದೆ.
ಮೋದಿ ಎದುರಿಗೆ ಸಿಎಂ ಬೊಮ್ಮಾಯಿ ನಾಯಿಮರಿ: ಸಿದ್ದು ಹೇಳಿಕೆ, ಬಿಜೆಪಿ ಕಿಡಿ
ಲ್ಯಾಂಡ್, ವಾಟರ್ ಆಡಿಟ್‌ಗೆ ಸೂಚನೆ: ಕೈಗಾರಿಕೆಗಳ ನೆಪದಲ್ಲಿ ಅನೇಕ ಕಂಪನಿಗಳು ಜಮೀನುಗಳನ್ನು ವಶಪಡಿಸಿಕೊಂಡು ಕೈಗಾರಿಕೆ ಶುರು ಮಾಡಿಲ್ಲ. ಇನ್ನು ಕೈಗಾರಿಕೆ ಶುರು ಮಾಡಿರುವವರು ಪೂರ್ಣ ಪ್ರಮಾಣದಲ್ಲಿ ಜಮೀನು ಹಾಗೂ ನೀರನ್ನೂ ಸಹ ಬಳಸಿಕೊಳ್ಳುತ್ತಿಲ್ಲ ಎಂದು ನಮ್ಮ ಗಮನಕ್ಕೆ ಬಂದಿದ್ದು, ಲ್ಯಾಂಡ್ ಹಾಗೂ ವಾಟರ್ ಆಡಿಟ್ ಮಾಡಲು ಪ್ರಧಾನ ಕಾರ್ಯದರ್ಶಿ (ಕೈಗಾರಿಕೆ) ಅವರಿಗೆ ಆದೇಶ ನೀಡಿರುವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸ್ಟೀಲ್ ಹಾಗೂ ವಿದ್ಯುತ್ ಘಟಕಗಳಿಗೆ ನೀರು ಬ್ಲಾಕ್ ಮಾಡಿದ್ದಾರೆ. ಹೀಗಾಗಿ ಲ್ಯಾಂಡ್ ಮತ್ತು ವಾಟರ್ ಆಡಿಟ್ ಮಾಡಲು ಸೂಚಿಸಲಾಗಿದೆ. ಎರಡು ಹಂತಗಳಲ್ಲಿ ಆಡಿಟ್ ಆಗಲಿದೆ. ಜನವರಿ ಅಂತ್ಯದೊಳಗೆ ಆಡಿಟ್ ಕಾರ್ಯ ಮುಗಿಯಲಿದ್ದು, ಮುಂದಿನ ಹಂತದ ಕ್ರಮಕ್ಕೆ ನಾವು ಮುಂದಾಗುತ್ತೇವೆ ಎಂದು ಬೊಮ್ಮಾಯಿ ತಿಳಿಸಿದರು.
ಈ ಬಾರಿ ರಾಜ್ಯ ಬಜೆಟ್ ಗಾತ್ರ ಹೆಚ್ಚಳ: ಫೆಬ್ರವರಿಯಲ್ಲಿ ಮಂಡನೆಯಾಗಲಿರುವ ಈ ಸರ್ಕಾರದ ಕೊನೆಯ ಬಜೆಟ್ ಗಾತ್ರ ಕಳೆದ ಬಾರಿಗಿಂತ ಹೆಚ್ಚಿರಲಿದೆ. ಈ ವಿಚಾರವನ್ನು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಖಚಿತಪಡಿಸಿದ್ದಾರೆ. 2022ರ ಬಜೆಟ್ ಗಾತ್ರ 2.64 ಲಕ್ಷ ಕೋಟಿ ರು. ಇತ್ತು. 2023ರಲ್ಲಿ ಇದಕ್ಕಿಂತಲೂ ಹೆಚ್ಚಿರಲಿದೆ. ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಜರುಗಿದ ವಿವಿಧ ಅಭಿವೃದ್ಧಿಗಳ ಕಾಮಗಾರಿ ಚಾಲನೆ ಹಾಗೂ ಶಂಕುಸ್ಥಾಪನೆ ಸಮಾರಂಭ ಹಾಗೂ ಸುದ್ದಿಗಾರರ ಜತೆಗೆ ಮಾತನಾಡಿದರು.
ಪಠ್ಯದಲ್ಲಿ ಸಿದ್ದೇಶ್ವರ ಶ್ರೀಗಳ ಜೀವನಗಾಥೆ?: ವಿವೇಕಾನಂದರ ನಂತ್ರ ಹೆಚ್ಚು ಪ್ರಭಾವಿಸಿದವರು ಶ್ರೀಗಳು
ಈ ಬಾರಿಯ ಬಜೆಟ್‌ನ ಗಾತ್ರ ಹೆಚ್ಚಾಗಲಿದ್ದು ಅದರಲ್ಲಿ ಬಳ್ಳಾರಿಗೂ ಹೆಚ್ಚಿನ ಪಾಲು ಸಿಗಲಿದೆ ಎಂದು ತಿಳಿಸಿದರು. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಈ ಹಿಂದೆ ಐದುನೂರು ಕೋಟಿ ಸಹ ಬಿಡುಗಡೆಯಾಗುತ್ತಿರಲಿಲ್ಲ. ಕಳೆದ ವರ್ಷ ನಾವು 3 ಸಾವಿರ ಕೋಟಿ ಬಿಡುಗಡೆ ಮಾಡಿದ್ದೇವೆ. 2023-24ನೇ ಸಾಲಿಗೆ ಕೆಕೆಆರ್‌ಡಿಬಿಗೆ 5 ಸಾವಿರ ಕೋಟಿ ಅನುದಾನ ನಿಗದಿಗೊಳಿಸಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು.