ಕೆರೆಯಲ್ಲಿ ಮುಳುಗುತ್ತಿದ್ದ ಅಳಿಯನ ರಕ್ಷಿಸಲು ಹೋಗಿ ಮಾವ ಅಳಿಯ ಇಬ್ಬರೂ ನೀರುಪಾಲು

Published : Apr 20, 2026, 09:23 AM IST
hassan alia and sodara mava death

ಸಾರಾಂಶ

ಹಾಸನದಲ್ಲಿ ಕೆರೆಗೆ ಬಿದ್ದ ಅಳಿಯನನ್ನು ರಕ್ಷಿಸಲು ಹೋಗಿ ಮಾವ ಪ್ರಾಣ ಕಳೆದುಕೊಂಡರೆ, ರಬಕವಿ-ಬನಹಟ್ಟಿ ಹಾಗೂ ಕೊಪ್ಪಳದಲ್ಲಿ ಈಜಲು ಹೋದ ಬಾಲಕ ಮತ್ತು ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬೇಸಿಗೆ ರಜೆಯಲ್ಲಿ ನಡೆದ ಈ ಸರಣಿ ದುರಂತಗಳು ಹಲವು ಕುಟುಂಬಗಳಲ್ಲಿ ಶೋಕವನ್ನುಂಟು ಮಾಡಿವೆ.

ಮುಳುಗುತ್ತಿದ್ದ ಅಳಿಯನ ರಕ್ಷಿಸಲು ಹೋಗಿ ಮಾವನೂ ಸಾವು

ಹಾಸನ: ಕೆರೆಯಲ್ಲಿ ಮುಳುಗುತ್ತಿದ್ದ ಅಳಿಯನ ರಕ್ಷಿಸಲು ಹೋಗಿ ಮಾವನೂ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಮನಕಲುಕುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಎನ್‌.ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು 12 ವರ್ಷದ ಬಾಲಕ ಪ್ರತೀಕ್ ಹಾಗೂ ಬಾಲಕನ ಮಾವ 45 ವರ್ಷದ ಪ್ರಭಾಕರ್ ಎಂದು ಗುರುತಿಸಲಾಗಿದೆ.

ಆಗಿದ್ದೇನು?

ಬಾಲಕ ಪ್ರತೀಕ್ ಬೇಸಿಗೆ ರಜೆಯ ಹಿನ್ನೆಲೆ ಮಾವ ಪ್ರಭಾಕರ್ ಅವರ ಮನೆಗೆ ಬಂದಿದ್ದ. ಮಾವನ ಜೊತೆಗೆ ಕೆರೆಯ ಏರಿ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಪ್ರತೀಕ್ ಆಯತಪ್ಪಿ ಕೆರೆಗೆ ಬಿದ್ದಿದ್ದಾನೆ. ಕಾಲು ಜಾರಿ ಕೆರೆಗೆ ಬಿದ್ದ ಪ್ರತೀಕ್‌ನನ್ನು ರಕ್ಷಿಸಲು ಮಾವ ಪ್ರಭಾಕರ್‌ ಕೆರೆಗೆ ಹಾರಿದ್ದು,

ಈಜು ಬಾರದ ಕಾರಣ ಕೆರೆಯಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ. ಪ್ರತೀಕ್ ಪ್ರಭಾಕರ್ ಅವರ ಸೋದರಿಯ ಮಗನಾಗಿದ್ದು, ಬೇಸಿಗೆ ರಜೆ ಹಿನ್ನೆಲೆ ಸೋದರ ಮಾವನ ಮನೆಗೆ ಬಂದಿದ್ದಾಗ ಈ ದುರಂತ ಸಂಭವಿಸಿದೆ. ಇಬ್ಬರ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹೊರ ತೆಗೆದಿದ್ದು, ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಮಾವ ಅಳಿಯ ಇಬ್ಬರನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಕೃಷ್ಣಾ ನದಿಯಲ್ಲಿ ಮುಳುಗಿ ಬಾಲಕ ಸಾವು

ರಬಕವಿ-ಬನಹಟ್ಟಿ ತಾಲೂಕಿನ ಕೃಷ್ಣಾ ನದಿ ಜಾಕವೆಲ್ ಹತ್ತಿರ ಸ್ನಾನಕ್ಕೆ ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಹುಬ್ಬಳ್ಳಿಯ ರಾಹುಲ್ ಪ್ರಕಾಶ ಅಜ್ಜನವರ(11) ಮೃತ ಬಾಲಕ. ಶಾಲೆಗೆ ರಜೆಯ ಕಾರಣ ಬಾಲಕ ರಬಕವಿಯಲ್ಲಿ ಸಂಬಂಧಿಕರ ಮನೆಗೆ ಬಂದಿದ್ದ. ಬೆಳಗಿನ ಜಾವ ಸ್ನಾನಕ್ಕೆಂದು ತೆರಳಿದಾಗ ನೂರಾರು ಜನರ ಮಧ್ಯೆ ಬಾಲಕ ನೀರಿಗಿಳಿದು ಮುಳುಗಿರುವುದು ಯಾರ ಗಮನಕ್ಕೂ ಬಂದಿಲ್ಲ. ಬಾಲಕನ ಜೊತೆಗೆ ಬಂದಿದ್ದ ಸಂಬಂಧಿ ಹುಡುಕಾಟ ನಡೆಸಿದಾಗ ಬಾಲಕ ನೀರಿಗಿಳಿದ ವಿಚಾರ ತಿಳಿದಿದ್ದು,ಸ್ಥಳದಲ್ಲಿದ್ದ ಜನರು ಹುಡುಕಾಡಿದರೂ ಸಿಕ್ಕಿಲ್ಲ. ನಂತರ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನೀರಿನಿಂದ ಶವ ಹೊರಕ್ಕೆ ತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟರಲ್ಲಿ ಬಾಲಕ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈಜಲು ಹೋಗಿ ವಿದ್ಯಾರ್ಥಿ ಸಾವು

ಹಾಗೆಯೇ ಇದೇ ರೀತಿಯ ಮತ್ತೊಂದು ಘಟನೆ ಕೊಪ್ಪಳ ಜಿಲ್ಲೆಯಲ್ಲಿಯೂ ನಡೆದಿದೆ. ದದೇಗಲ್ ಬಳಿ ಇರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓದುತ್ತಿದ್ದ ಕುಕನೂರು ತಾಲೂಕಿನ ಮನ್ನಾಪುರ ಗ್ರಾಮದ ಆಕಾಶ ಹರಿಜನ(18) ಎಂಬ ವಿದ್ಯಾರ್ಥಿ ಕಾಲೇಜ್ ಬಳಿಯ ಕೆರೆಯೊಂದರಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾನೆ. ಬೆಳಗ್ಗೆ 11 ಗಂಟೆಗೆ ನಾಪತ್ತೆಯಾಗಿದ್ದ ವಿದ್ಯಾರ್ಥಿ ಮೃತದೇಹ ಮಧ್ಯಾಹ್ನ 3.30ಕ್ಕೆ ಪತ್ತೆಯಾಗಿದೆ. ಇಷ್ಟೆಲ್ಲ ಆದರೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಶವವಿಟ್ಟು ಪ್ರತಿಭಟನೆಗೆ ಮುಂದಾಗಿದರು.

ಇದನ್ನೂ ಓದಿ: ಪತಿಯ ಅಕ್ರಮ ಸಂಬಂಧ ಪತ್ತೆ ಮಾಡಿದ್ದ ಪತ್ನಿ ನಿಗೂಢ ಸಾವು: ಪೋಷಕರಿಂದ ಕೊಲೆ ಆರೋಪ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Bengaluru ಕೆಂಪೇಗೌಡ ಟೌನ್‌ ಪ್ಲಾನಿಂಗ್‌ ನಿರ್ಮಾಣಕ್ಕೆ 50 ಕೋಟಿ: ರಾಜ್ಯ ಸರ್ಕಾರ ಸೂಚನೆ
ಒಟಿ, ಒರಿಜಿನಲ್‌ ಚಾಯ್ಸ್‌, ಹಯ್ವಾರ್ಡ್ಸ್, ರಾಜಾ ವಿಸ್ಕಿ ಬೆಲೆಯಲ್ಲಿ ಭಾರೀ ಏರಿಕೆ ಮಾಡಿದ ರಾಜ್ಯ ಸರ್ಕಾರ