
ಬೆಂಗಳೂರು (ಜು.17): ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದ ಹಿನ್ನಲೆಯಲ್ಲಿ ಅಮಾನತು ಮಾಡಲಾಗಿದ್ದ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ವಿಕಾಸ್ ಸಂಬಂಧಿಸಿದಂತೆ ಇದೀಗ ಕಾನೂನು ಹೋರಾಟ ತೀವ್ರಗೊಳ್ಳುತ್ತಿದೆ. ಐಪಿಎಸ್ ಅಧಿಕಾರಿಯ ಅಮಾನತು ರದ್ದುಗೊಳಿಸಿದ ಸಿಎಟಿ (Administrative Tribunal) ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ ವಿಭಾಗೀಯ ಪೀಠದ ಮೊರೆ ಹೋಗಿದ್ದು, ವಾದ ವಿವಾದಗಳನ್ನು ಆಲಿಸಿದ ಕೋರ್ಟ್ ನಾಳೆಗೆ ಬಾಕಿ ವಿಚಾರಣೆ ಮುಂದೂಡಿಕೆ ಮಾಡಿದೆ.
ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ.ಎಸ್. ರಾಜಗೋಪಾಲ್ ಅವರು, ವಿಕಾಸ್ ಕುಮಾರ್ ವಿರುದ್ಧ ಸರ್ಕಾರ ಕೈಗೊಂಡ ಕ್ರಮ ಸರಿಯೆಂಬ ನಿಲುವು ವಾದಿಸಿದರು. 'ಅನುಮತಿ ನಿರಾಕರಿಸಬೇಕಾದ ದಿನವೇ ಪೊಲೀಸರು ಕ್ರಮ ಕೈಗೊಳ್ಳಬೇಕಿತ್ತು. ಆದರೆ ಅನುಮತಿ ಇಲ್ಲದ ಕಾರ್ಯಕ್ರಮಕ್ಕೆ ಬಂದೋಬಸ್ತ್ ನೀಡುವುದು ಸರಿ ಅಲ್ಲ' ಎಂದು ಅವರು ವಾದಿಸಿದರು. ಆರ್‌ಸಿಬಿ (RCB) ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಅನುಮತಿ ನೀಡದೆ ಇದ್ದರೂ, ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದು, ಇದರಿಂದ ಉಂಟಾದ ಅನೇಕ ದೋಷಗಳು ಮತ್ತು ಮುಜುಗರ ಸರ್ಕಾರದ ಮೇಲೆ ಬಿದ್ದಿದೆ. 'ಅನುವಮತಿ ನಿರಾಕರಿಸಿದ್ದರೆ ನಿರ್ಬಂಧಾಜ್ಞೆ ಜಾರಿಗೊಳಿಸಬಹುದಿತ್ತು. ಪೊಲೀಸರು ನಿರಾಕರಿಸಲು ವಿಫಲರಾದ್ದರಿಂದಲೇ ಈ ಘಟನೆ ಸಂಭವಿಸಿದೆ' ಎಂಬುದನ್ನು ಸರ್ಕಾರದ ಪರವಾಗಿ ವಾದಿಸಲಾಯಿತು.
ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯಲ್ಲಿ, ವಿಕಾಸ್ ಕುಮಾರ್ ಕೂಡಾ ಬಂದೋಬಸ್ತ್ ಪ್ರಕ್ರಿಯೆಯಲ್ಲಿ ಭಾಗಿ ಆಗಿದ್ದಾರೆ ಎಂಬುದನ್ನೂ ಉಲ್ಲೇಖಿಸಲಾಗಿದೆ. ಸರ್ಕಾರದ ಹಿರಿಯ ವಕೀಲರು, 'ನಾವು ಸಲ್ಲಿಸಿದ್ದ ಹೆಚ್ಚುವರಿ ದಾಖಲೆಗಳನ್ನು ಸಿಎಟಿ ಪರಿಗಣಿಸಿಲ್ಲ. ಆದ್ದರಿಂದ, ಅವರ ಆದೇಶ ದೋಷಪೂರಿತವಾಗಿದೆ' ಎಂದು ಹೈಕೋರ್ಟ್ ಮುಂದೆ ಸ್ಪಷ್ಟಪಡಿಸಿದರು.
ಗುಪ್ತಚರ ವರದಿ ಆಧಾರ:
ದುರ್ಘಟನೆಗೆ ಮುನ್ನ ಗುಪ್ತಚರ ಇಲಾಖೆ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ್ದರೆನ್ನಲಾಗಿದ್ದು, ಅದನ್ನು ಆಧಾರವನ್ನಾಗಿ ಮಾಡಿಕೊಂಡು ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಇದರ ಕುರಿತು ಪೂರಕ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ. ಈ ಮಧ್ಯೆ, ವಿಚಾರಣೆ ಮಧ್ಯಾಹ್ನ 2.30ಕ್ಕೆ ಮುಂದೂಡಲಾಗಿದ್ದು, ಕೋರ್ಟ್‌ನ ತೀರ್ಮಾನ ರಾಜ್ಯ ಸರ್ಕಾರಿ ನಿಲುವಿಗೆ ಮಹತ್ವಪೂರ್ಣವಾದ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ತಿಳಿದುಬಂದಿತು.
ಮತ್ತೆ ವಿಚಾರಣೆ ಆರಂಭಿಸಿದ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಸರ್ಕಾರದ ಪರ ವಕೀಲ ರಾಜಗೋಪಾಲ್ ವಾದ ಆರಂಭಿಸಿ, ಕೆಲ ಸುಪ್ರೀಂ ಕೋರ್ಟ್ ಆದೇಶಗಳ ಉಲ್ಲೇಖಿಸಿದರು. ಆರ್ ಸಿಬಿ ಕಾರ್ಯಕ್ರಮಕ್ಕೆ ಅನುಮತಿ ನೀಡದಿದ್ದರೂ ಬಂದೋಬಸ್ತ್ ಕೊಡಲಾಗಿತ್ತು. ಪೊಲೀಸರ ಬಂದೋಬಸ್ತ್ ಪ್ರಕ್ರಿಯೆಯಲ್ಲಿ ವಿಕಾಸ್ ಕುಮಾರ್ ಕೂಡಾ ಭಾಗಿ ಆಗಿದ್ದರು. ನಾವು ಸಲ್ಲಿಸಿದ್ದ ಹೆಚ್ವುವರಿ ದಾಖಲೆಗಳನ್ನು ಸಿಎಟಿ ಪರಿಗಣಿಸಿಲ್ಲ. ಹೀಗಾಗಿ ಸಿಎಟಿ ಆದೇಶ ದೋಷಪೂರಿತವೆಂದು ವಾದ ಮಂಡಿಸಿದರು.
ಆರ್ ಸಿಬಿ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿ, ಆರ್ ಸಿಬಿ ಪ್ರತಿವಾದಿ ಅಲ್ಲದಿದ್ದರೂ ಜನದಟ್ಟಣೆಗೆ ಆರ್ ಸಿಬಿ ಕಾರಣವೆಂದು ಹೇಳಿದ್ದಾರೆ. ಆರ್ ಸಿಬಿ ವಿರುದ್ಧದ ಸಿಎಟಿ ಅಭಿಪ್ರಾಯ ರದ್ದುಪಡಿಸಲು ಮನವಿ ಮಾಡಿದರು.
ವಿಕಾಸ್ ಕುಮಾರ್ ಪರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ವಾದ ಮಂಡಿಸಿ, ಪೊಲೀಸರು ಜನರನ್ನು ನಿಯಂತ್ರಿಸಲು ಎಲ್ಲ ಪ್ರಯತ್ನ ಮಾಡಿದ್ದಾರೆ. ಒಂದು ಆರ್ ಸಿಬಿ ಗೆಲುವು ಇಷ್ಟೆಲ್ಲಾ ದಾವೆಗೆ ಕಾರಣವಾಗುತ್ತದೆಂದು ಯಾರೂ ನಿರೀಕ್ಷಿಸಿರಲಿಲ್ಲ ಎಂದು ನ್ಯಾಯಮೂರ್ತಿ ಎಸ್. ಜಿ. ಪಂಡಿತ್ ಹಾಗೂ ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರಿದ್ದ ಪೀಠದ ಮುಂದೆ ಅಭಿಪ್ರಾಯ ವ್ಯಕ್ತಪಡಿಸಿದರು. ಈ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠವು ನಾಳೆಗೆ ಮುಂದೂಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ