'ಈ ಬಾರಿ ನಿಮ್ಮನ್ನು ಪ್ರಧಾನಿ ಮಾಡ್ತೀವಿ ಸಾರ್..' ಎಂದ ವ್ಯಕ್ತಿಗೆ ಮಲ್ಲಿಕಾರ್ಜುನ ಖರ್ಗೆ ಕೊಟ್ಟ ತೀಕ್ಷ್ಣ ಪ್ರತಿಕ್ರಿಯೆ ಹೀಗಿದೆ!

By Kannadaprabha NewsFirst Published Jan 29, 2024, 5:59 AM IST
Highlights

ಬಿಜೆಪಿಯವರು ಏನು ಮಾಡುತ್ತಿದ್ದಾರೆ ಎಂಬುದರ ಕುರಿತು ತಲೆ ಕೆಡಿಸಿಕೊಳ್ಳದೆ ನಾವು ಈಗಾಗಲೇ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದೇವೆ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

 ಕಲಬುರಗಿ (ಜ.29) :  ಬಿಜೆಪಿಯವರು ಏನು ಮಾಡುತ್ತಿದ್ದಾರೆ ಎಂಬುದರ ಕುರಿತು ತಲೆ ಕೆಡಿಸಿಕೊಳ್ಳದೆ ನಾವು ಈಗಾಗಲೇ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದೇವೆ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಏನು ಮಾಡುತ್ತಿದೆ? ವಿಜಯೇಂದ್ರ ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡಿಕೊಂಡು ನಾವು ಏನು ಮಾಡಬೇಕು ಎಂದು ಯೋಚಿಸುವ ಅಗತ್ಯವಿಲ್ಲ. ನಮ್ಮ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.

ಇಂದು ಬಂದು ನಾಳೆ ವಾಪಸು ಹೋಗಬಾರದು: ಖರ್ಗೆ ಚಾಟಿ

ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್‍ಗಾಂಧಿ ಅವರು ಈಗಾಗಲೇ ಎರಡನೇ ಸುತ್ತಿನ ನ್ಯಾಯಯಾತ್ರೆ ನಡೆಸುತ್ತಿದ್ದಾರೆ. ನಾನು ತೆಲಂಗಾಣ, ಕೇರಳ, ದೆಹಲಿ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇನೆ, ನಮ್ಮ ಪಕ್ಷ ಏನು ಮಾಡಬೇಕು ಅದನ್ನ ಮಾಡುತ್ತದೆ ಎಂದರು.

‘ಇಂಡಿಯಾ’ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ಶುರು ಆಗಿದೆ. ಆಮ್ ಆದ್ಮಿ ಪಾರ್ಟಿ ಹಾಗೂ ಬಿಹಾರ ಸೇರಿದಂತೆ ಬೇರೆ ಬೇರೆ ಭಾಗಗಳಲ್ಲಿ ಈಗಾಗಲೇ ಮಾತುಕತೆ ನಡೆಸಲಾಗಿದೆ. ಕೆಲವು ಕಡೆ ಈಗಾಗಲೇ ಸೀಟು ಹಂಚಿಕೆ ಮುಗಿದಿದ್ದರೆ, ಕೆಲವೆಡೆ ಇನ್ನೂ ಮಾತುಕತೆ ಹಂತದಲ್ಲಿದೆ ಎಂದರು.

ನಿತೀಶ್ ನಿರ್ಧಾರ ಮೊದಲೇ ಗೊತ್ತಿತ್ತು:

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂಡಿಯಾ ಮೈತ್ರಿಕೂಟ ತ್ಯಜಿಸುವ ಕುರಿತು ತಮಗೆ ಐದು ದಿನಗಳ ಹಿಂದೆಯೇ ಗೊತ್ತಿತ್ತು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಹಿರಂಗಪಡಿಸಿದರು.

ನಿತೀಶ್ ಕುರಿತು ಲಾಲು ಪ್ರಸಾದ್ ಯಾದವ್ ಮೊದಲೇ ನನ್ನೊಂದಿಗೆ ಚರ್ಚಿಸಿ ಎಲ್ಲವನ್ನೂ ಹೇಳಿದ್ದರು. ಅಂತಿಮ ಹಂತದವರೆಗೆ ಇದನ್ನು ಬಹಿರಂಗಪಡಿಸಬಾರದು ಎಂದು ನಾವು ಸುಮ್ಮನಿದ್ದೆವು. ನಮ್ಮ ಮತ್ತು ಅವರ ಸಂಖ್ಯಾಬಲದ ಬಗ್ಗೆ ಆಗಲೇ ವಿಚಾರಿಸಿದ್ದೆ. ಈಗ ನಿತೀಶ್ ಹೋಗುತ್ತಿದ್ದಾರೆ ಎಂದರೆ ಹೋಗಲಿ. ದೇಶದಲ್ಲಿ ಇಂತಹ ಆಯಾರಾಂ ಗಯಾರಾಂ ಮನಸ್ಥಿತಿಯ ಮಂದಿ ಬಹಳಷ್ಟಿದ್ದಾರೆಂದು ನಿತೀಶ್‌ ಕುಮಾರ್‌ಗೆ ಟಾಂಗ್‌ ನೀಡಿದರು.

ಅವರು ಹೊದ್ರೆ ಹೊಗ್ಲಿ ಅಂತ ಲಾಲೂಗೆ ಹೇಳಿದ್ದೆನೆ, ನಾವು ಹೋರಾಟ ಮಾಡೋರು, ಮಾಡೋಣ. ಆ ಬಗ್ಗೆ ಏನ್ ಬೆಳವಣಿಗೆ ಆಗುತ್ತೆ ಕಾದು ನೋಡೋಣವೆಂದರು.

ಇಂಡಿಯಾ ಒಕ್ಕೂಟದಲ್ಲಿ ಸೀಟು ಹಂಚಿಕೆ ಪ್ರಕ್ರಿಯೇ ಶುರು ಮಾಡಿದ್ದೆವೆ, ಬಿಹಾರ ಮತ್ತು ಹಲವಡೆ ಮಾತುಕತೆ ಮಾಡಿದ್ದೇವೆ. ಕೆಲವು ಕಡೆ ಸೀಟು ಹಂಚಿಕೆ ಮುಗಿದಿದೆ. ಇನ್ನು ಕೆಲವು ಮಾತುಕತೆ ಹಂತದಲ್ಲಿದೆ ಎಂದರು.

ಎಂಪಿನೇ ಮಾಡಿಲ್ಲ ಇನ್ನು ಪಿಎಂ ಏನ್ ಮಾಡ್ತಿರೀ?:

ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆಯವರು ಇಂಡಿಯಾ (INDIA) ಒಕ್ಕೂಟದ ಅಧ್ಯಕ್ಷರಾಗಿ, ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿತರಾಗಿದ್ದಾರೆ. ಇಷ್ಟೆಲ್ಲಾ ಆದರೂ ಸಹ ಖುದ್ದು ಅವರಿಗೇ ತಾವು ಪ್ರಧಾನಿಯಾಗೋ ನಂಬಿಕೆ ಇಲ್ಲದಂತಾಗಿದೆ.

ಏಕೆಂದರೆ ಇಲ್ಲಿನ ಹೈಕಶಿ ಸಂಸ್ಥೆಯ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಡಾ. ಖರ್ಗೆಯವರನ್ನು ಕಂಡು ಸಭಿಕರಲ್ಲಿದ್ದ ವ್ಯಕ್ತಿಯೋರ್ವ ನಿಮ್ಮನ್ನ ಈ ಬಾರಿ ಪ್ರಧಾನಿ ಮಾಡ್ತಿವಿ ಎಂದಾಗ ತಕ್ಷಣಕ್ಕೆ ಖರ್ಗೆಯವರು, ನನ್ನ ಕಲಬುರಗಿಯಿಂದ ಎಂಪಿನೇ ಮಾಡಿಲ್ಲ, ಇನ್ನು ಪಿಎಂ ಏನ್ ಮಾಡ್ತಿರೀ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ಮನದಾಳದ ಅಸಮಾಧಾನ ಹೊರಹಾಕಿದ ಪ್ರಸಂಗ ನಡೆಯಿತು.

ಭಾಷಣ ಮುಗಿಸಿ ಖರ್ಗೆ ಬರುವಾಗ ಈ ಬಾರಿ ನಿಮ್ಮನ್ನ ಪಿಎಂ ಮಾಡ್ತಿವಿ ಎಂದ ವ್ಯಕ್ತಿಗೆ ಉದ್ದೇಶಿಸಿ ಡಾ. ಖರ್ಗೆಯವರು, ನನ್ನ ಎಂಪಿನೇ ಮಾಡಿಲ್ಲ ಪಿಎಂ ಏನ್ ಮಾಡ್ತಿರೀ ಎಂದು ಹೇಳುವ ಮೂಲಕ ಕಲಬುರಗಿ ಸಂಸತ್‌ ಕ್ಷೇತ್ರ ಜನತೆಯ ನಿಲುವಿನ ಬಗ್ಗೆಯೇ ಮುಂದೆ ತಮ್ಮ ಅಸಮಾಧಾನ ಹೊರಹಾಕಿದಂತಿತ್ತು.

ಲೋಕಸಭೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿ ಖರ್ಗೆ ಕೈ ಬಲಪಡಿಸೋಣ: ಶಾಸಕ ಎಂ.ವೈ.ಪಾಟೀಲ್‌

ಕಳೆದ ಲೋಕಸಭಾ ಚುನಾವಣೆಯಲ್ಲಿನ ಸೋಲಿನ ಕಹಿ ಘಟನೆಯಿಂದ ಇನ್ನೂ ಹೊರಬರದ ಮಲ್ಲಿಕಾರ್ಜುನ ಖರ್ಗೆ ಅವರ ಈ ಮನದ ಮಾತು‌ ಈ ಬಾರಿ ಕಲಬುರಗಿ ಸ್ಪರ್ದೆಯಿಂದ ದೂರ ಉಳಿಯುವ ಮುನ್ಸೂಚನೆಯೇ? ಹೌದು ಎನ್ನುತ್ತಿದ್ದಾರೆ ರಾಜಕೀಯ ವಿಶ್ಲೇಷಕರು.

ಕಳೆದ ಬಾರಿಯ ಸೋಲು ಅರಗಿಸಿಕೊಳ್ಳದ ಮಲ್ಲಿಕಾರ್ಜುನ ಖರ್ಗೆ ಮತ್ತೊಮ್ಮೆ ಪ್ರತಿಷ್ಟೆ ಪಣಕ್ಕಿಡಲು ಮುಂದಾಗುವರೇ ಎನ್ನುವುದೇ ಕುತೂಹಲ.

click me!