ಕಲಬುರಗಿ (ಅ.03): ಲೋಕಸಭೆ ಚುನಾವಣೆ (Loksabha Election) ಸೋಲಿನ ಬಳಿಕ ಕಲಬುರಗಿ ತೊರೆದಿದ್ದ ಹಿರಿಯ ಕಾಂಗ್ರೆಸ್ ಮುಖಂಡ, ರಾಜ್ಯಸಭಾ ವಿರೋಧ ಪಕ್ಷ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ (Dr.Mallikarjun Kharge) ಬರೋಬ್ಬರಿ 2 ವರ್ಷ 4 ತಿಂಗಳ ನಂತರ ಶನಿವಾರ ತವರೂರಿಗೆ ಆಗಮಿಸಿದರು. ಖರ್ಗೆಯವರಿಗೆ ಇಲ್ಲಿನ ಭವಾನಿ ಫಂಕ್ಷನ್ ಹಾಲ್‌ನಲ್ಲಿ ಕಾರ್ಯಕರ್ತರು, ಅಭಿಮಾನಿಗಳ ಅದ್ದೂರಿ ಸ್ವಾಗತ ನೀಡಿದರು.
ಸ್ವಾಗತ, ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜನರ ಬಳಿಯೇ ಇದ್ದು ಐದು ದಶಕಗಳ ಕಾಲ ಜನ ಸೇವೆ ಮಾಡಿಕೊಂಡಿದ್ದವನು ನಾನು. ಜನರಿಂದ ದೂರವಿದ್ದು ಜೀವನ ನಡೆಸುವುದು ಅಸಾಧ್ಯ. ಆದರೆ, ಕೋವಿಡ್‌ನಿಂದಾಗಿ (Covid) ಕಲಬುರಗಿಗೆ ಬರಲಾಗಲಿಲ್ಲ ಎಂದರು. ಸತತ 11 ಬಾರಿ ಚುನಾವಣೆ ಗೆದ್ದ ನನಗೆ 12ನೇ ಚುನಾವಣೆಯಲ್ಲಿ ಸೋಲಾಯ್ತು, ಈ ಸೋಲಿಗೆ ಕಲಬುರಗಿ (Kalaburagi) ಜನ ಕಾರಣರಲ್ಲ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಆರ್‌ಎಸ್‌ಎಸ್ ಕುತಂತ್ರ ಕಾರಣ ಎಂದು ಕಿಡಿ ಕಾರಿದರು.
ಮಲ್ಲಿಕಾರ್ಜುನ ಖರ್ಗೆ ವಿರುದ್ಧ 50 ಸಾವಿರ ಕೋಟಿ ರೂ ಅಕ್ರಮ ಆಸ್ತಿ ಆರೋಪ; ಲೋಕಾಯುಕ್ತಕ್ಕೆ ದೂರು!
ಡಾ.ಬಿ.ಆರ್.ಅಂಬೇಡ್ಕರ್ (Dr BR Ambedkar) ವಿಚಾರಧಾರೆ, ಸಮಾನತೆ ತತ್ವ, ಕಾಂಗ್ರೆಸ್ (Congress) ನಿಷ್ಠೆಯೊಂದಿಗೆ ಸತತ 55 ವರ್ಷದಿಂದ ರಾಜಕೀಯ ಬದುಕಿನಲ್ಲಿರೋದು ಅವರಿಗೆ ಸಹಿಸಲಾಗಲಿಲ್ಲ, ಅದಕ್ಕೆ ಕುತಂತ್ರದಿಂದ ನನ್ನನ್ನು ಸೋಲಿಸಿದರು. ಸಂಸತ್ತಿನಲ್ಲೇ ಮೋದಿ ಬಹಿರಂಗವಾಗಿ ನನ್ನ ಸೋಲಿನ ಬಗ್ಗೆ ಹೇಳಿದ್ದರು. ಅದರಂತೆ ನಡೆದುಕೊಂಡು ಸೋಲಿಸಿದರು. ಅವರು ಎಚ್ಚರಿಕೆ ನೀಡಿದ ನಂತರವಾದರೂ ನೀವೆಲ್ಲರು (ಕಲಬುರಗಿ ಜನತೆ) ಎಚ್ಚರಗೊಳ್ಳಬೇಕಿತ್ತು. ಆದರೆ, ಅವರ ಕುತಂತ್ರ ಅರಿಯಲು ನೀವು ವಿಫಲರಾದಿರಿ, ಮೋದಿ... ಮೋದಿ... ಎಂದು ಚಪ್ಪಾಳೆ ತಟ್ಟಿದಿರಿ. ಅದರ ಫಲ ನಾನು ಸೋಲುಂಡೆ, ಇಲ್ಲಿಗೆ ಬರಬೇಕಿದ್ದ ಅನೇಕ ಯೋಜನೆಗಳು ದೂರ ಹೋದವು ಎಂದು ತಮ್ಮ ಸೋಲಿನ ನಂತರದ ಬೆಳವಣಿಗೆಗಳನ್ನು ಪರಾಮರ್ಶಿಸಿದರು. ರಾಜಕೀಯ ಬದುಕಲ್ಲಿ ಸತತ 5 ದಶಕ ಗೆಲ್ಲುತ್ತಲೇ ಬಂದವರು ಯಾರೂ ಇಲ್ಲ. ನನಗೂ ಆ ದಾಖಲೆಯ ಭಾಗ್ಯ ದೊರಕಲಿಲ್ಲ. ಬಿಜೆಪಿ ಅಡ್ಡಗಾಲು ಹಾಕದೇ ಹೋಗಿದ್ದರೆ ಆ ದಾಖಲೆ ನನ್ನದಾಗಿರುತ್ತಿತ್ತೇನೋ? ಎಂದು ನೋವು ತೋಡಿಕೊಂಡರು.
ಲೋಕಸಭೆ ಚುನಾವಣೆ ಸೋಲಿನ ಬಳಿಕ ಕಲಬುರಗಿ ತೊರೆದಿದ್ದ ಡಾ. ಖರ್ಗೆ 2020ರಲ್ಲಿ ತಮ್ಮನ್ನು ರಾಜ್ಯಸಭೆಗೆ ನೇಮಕ ಮಾಡಿದಾಗ, 2021 ರ ಫೆ. 16 ರಿಂದ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿ ಜವಾಬ್ದಾರಿ ಹೊತ್ತ ಮೇಲೂ ಕಲಬುರಗಿಯತ್ತ ಸುಳಿದಿರಲಿಲ್ಲ.