
ಕಲಬುರಗಿ (ಸೆ.7): ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಕರ್ನಾಟಕದ ಕಲಬುರಗಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ವಿಧಿಸಿರುವ ಭಾರೀ ಸುಂಕ ಏರಿಕೆ ವಿಚಾರವಾಗಿ ಮಾತನಾಡಿದ ಖರ್ಗೆ, 'ಪ್ರಧಾನಿ ಮೋದಿ ದೇಶದ ಶತ್ರು' ಎಂದು ಆರೋಪಿಸಿ, ಅವರ ಟ್ರಂಪ್ ಜೊತೆಗಿನ ಮೈತ್ರಿಯು ಭಾರತದ ಹಿತಾಸಕ್ತಿಗಳಿಗೆ ಧಕ್ಕೆ ತಂದಿದೆ ಎಂದು ಕಿಡಿಕಾರಿದರು.
ಮೋದಿ-ಟ್ರಂಪ್ ಮೈತ್ರಿ ದೇಶವನ್ನು ಹಾಳು ಮಾಡಿದೆ:
ಪ್ರಧಾನಿ ಮೋದಿ ಮತ್ತು ಟ್ರಂಪ್ ಸ್ನೇಹಿತರಾಗಿರಬಹುದು, ಆದರೆ ಈ ಸ್ನೇಹ ಭಾರತದ ನಷ್ಟಕ್ಕೆ ಕಾರಣವಾಗಿದೆ. ಅವರು(ಮೋದಿ) ದೇಶದ ವಾತಾವರಣವನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಾರೆ. ಅಮೆರಿಕದ 50% ಸುಂಕವು ಭಾರತೀಯ ಜನತೆಯನ್ನು ಕಂಗೆಡಿಸಿದೆ. ದೇಶದ ನಾಗರಿಕರನ್ನು ರಕ್ಷಿಸುವುದು ಮೊದಲ ಆದ್ಯತೆಯಾಗಿರಬೇಕು, ಸ್ನೇಹಕ್ಕಿಂತ ರಾಷ್ಟ್ರ ಮೊದಲು ಎಂದು ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಭಾರತದ ತಟಸ್ಥತೆಯ ನೀತಿ ಮುಂದುವರಿಸಲು ಆಗ್ರಹ:
ಭಾರತದ ದೀರ್ಘಕಾಲದ ತಟಸ್ಥತೆ ಮತ್ತು ಅಲಿಪ್ತತೆಯ ವಿದೇಶಾಂಗ ನೀತಿಯನ್ನು ಗೌರವಿಸಬೇಕೆಂದು ಪ್ರಧಾನಿ ಮೋದಿಯವರನ್ನು ಒತ್ತಾಯಿಸಿದರು. ಟ್ರಂಪ್‌ರನ್ನು ಸ್ನೇಹಿತ ಎಂದು ಬಹಿರಂಗವಾಗಿ ಕರೆಯುವ ಮೂಲಕ ಮೋದಿ ಭಾರತದ ಅಂತರರಾಷ್ಟ್ರೀಯ ಖ್ಯಾತಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು.
ಜಿಎಸ್‌ಟಿ ದರ ಬದಲಾವಣೆಗೆ ಸ್ವಾಗತ:
ಜಿಎಸ್‌ಟಿ ದರಗಳ ಬದಲಾವಣೆ ಸ್ವಾಗತಿಸಿದ ಖರ್ಗೆ ಅವರು, ಬಡವರಿಗೆ ಪ್ರಯೋಜನವಾಗುವ ಕ್ರಮಗಳನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ ಎಂದು ಹೇಳಿದರು. ಬಿಜೆಪಿ ಸರ್ಕಾರವು ಜನರನ್ನು ವರ್ಷಗಳಿಂದ ಕಿರುಕುಳಗೊಳಿಸಿದೆ. ನಾವು ಎಂಟು ವರ್ಷಗಳ ಹಿಂದೆಯೇ ಎರಡು ಸ್ಲ್ಯಾಬ್‌ಗಳ ಜಿಎಸ್‌ಟಿಯನ್ನು ಸೂಚಿಸಿದ್ದೆವು. ಆದರೆ, ಬಿಜೆಪಿ ನಾಲ್ಕೈದು ಸ್ಲ್ಯಾಬ್‌ಗಳನ್ನು ಜಾರಿಗೊಳಿಸಿ ಜನರನ್ನು ಲೂಟಿ ಮಾಡಿತು ಎಂದು ಆರೋಪಿಸಿದರು.
ರಾಷ್ಟ್ರೀಯ ಹಿತಾಸಕ್ತಿಗಾಗಿ ಒಗ್ಗಟ್ಟು:
ಚೀನಾದಿಂದ ಯಾರೂ ಭಾರತಕ್ಕೆ ಪ್ರವೇಶಿಸಿಲ್ಲ ಎಂಬ ಮೋದಿಯವರ ಹಿಂದಿನ ಹೇಳಿಕೆಯನ್ನು ಉಲ್ಲೇಖಿಸಿದ ಖರ್ಗೆಯವರು, ಈಗ ಮೋದಿಯವರೇ ಚೀನಾಕ್ಕೆ ಪ್ರವೇಶಿಸಿದ್ದಾರೆ ಎಂದು ವ್ಯಂಗ್ಯವಾಡಿದರು. ರಾಷ್ಟ್ರೀಯ ಹಿತಾಸಕ್ತಿಯಲ್ಲಿ ನಾವು ಒಗ್ಗಟ್ಟಾಗಿದ್ದೇವೆ, ಆದರೆ ಮೋದಿಯವರ ನಿರಂಕುಶ ವರ್ತನೆಯನ್ನು ಸಹಿಸುವುದಿಲ್ಲ ಎಂದರು.
ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಾರ್ಯಸೂಚಿ:
ಮುಂಬರುವ ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಕೇಂದ್ರೀಕರಿಸಲಿರುವ ವಿಷಯಗಳ ಬಗ್ಗೆ ಉಲ್ಲೇಖಿಸಿದ ಖರ್ಗೆ ಅವರು, ನಿರುದ್ಯೋಗ, ಕಾನೂನು-ಸುವ್ಯವಸ್ಥೆ, ಮಹಿಳೆಯರ ಮೇಲಿನ ಕಿರುಕುಳ, ದಲಿತರಿಗೆ ವಿದ್ಯಾರ್ಥಿವೇತನ ಕೊರತೆ, ರೈತರಿಗೆ ರಸಗೊಬ್ಬರ ಸಮಸ್ಯೆ ಮತ್ತು ಮತ ಕಳ್ಳತನ ತಡೆಗಟ್ಟುವುದು ನಮ್ಮ ಮುಖ್ಯ ಆದ್ಯತೆಗಳಾಗಿವೆ ಎಂದರು.
ಮಲ್ಲಿಕಾರ್ಜುನ ಖರ್ಗೆಯವರ ಈ ತೀವ್ರ ಟೀಕೆಯು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಮೆರಿಕದ ಸುಂಕಗಳು ಮತ್ತು ಮೋದಿ-ಟ್ರಂಪ್ ಸ್ನೇಹದ ಪರಿಣಾಮಗಳ ಬಗ್ಗೆ ಖರ್ಗೆಯವರ ಹೇಳಿಕೆಗಳು ಭಾರತದ ರಾಜಕೀಯ ವಾತಾವರಣವನ್ನು ಇನ್ನಷ್ಟು ಉದ್ವಿಗ್ನಗೊಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ