ಮಲೆ ಮಹದೇಶ್ವರ ವನ್ಯಧಾಮಕ್ಕೆ ಹುಲಿ ಸಂರಕ್ಷಿತ ಪ್ರದೇಶ ಘೋಷಣೆ: ಕೇಂದ್ರ ಸಮಿತಿ ಶಿಫಾರಸು

Published : Sep 27, 2025, 07:29 PM IST
Tiger

ಸಾರಾಂಶ

ಬಂಡೀಪುರ, ಬಿ.ಆರ್,ಟಿ. ಹಾಗು ಕಾವೇರಿ ವನ್ಯಧಾಮದಿಂದ ವಲಸೆ ಬರುವ ವನ್ಯಜೀವಿಗಳು ಮಲೆ ಮಹದೇಶ್ವರ ವನ್ಯಧಾಮದಲ್ಲಿ ಬೀಡು ಬಿಡುತ್ತಿವೆ. ಹೀಗಾಗಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ.

ವರದಿ: ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ಸೆ.27): ಜಿಲ್ಲೆಯ ಮಲೆಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಕೇಂದ್ರ ಉನ್ನತಾಧಿಕಾರ ಸಮಿತಿಯೇನೋ ಶಿಫಾರಸು ಮಾಡಿದೆ. ಆದರೆ ಶಾಸಕರು ಸೇರಿದಂತೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಹುಲಿ ಸಂರಕ್ಷಿತ ಪ್ರದೇಶ ಘೋಷಣೆ ಅನುಮಾನವಾಗಿದೆ. ಬಂಡೀಪುರ ಹಾಗು ಬಿ.ಆರ್.ಟಿ ಸೇರಿದಂತೆ ಎರಡು ಹುಲಿ ಸಂರಕ್ಷಿತ ಪ್ರದೇಶ ಹೊಂದಿರುವ ದೇಶದ ಏಕೈಕ ಜಿಲ್ಲೆ ಎಂಬ ಖ್ಯಾತಿ ಪಡೆದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಮಲೆಮಹದೇಶ್ವರ ವನ್ಯಧಾಮವೂ ಹುಲಿ ಸಂರಕ್ಷಿತ ಪ್ರದೇಶ ಆಗಬೇಕು ಎಂಬುದು ಪರಿಸರ ಹಾಗು ವನ್ಯಜೀವಿ ತಜ್ಞರ ಆಶಯವಾಗಿದೆ.

ಬಂಡೀಪುರ, ಬಿ.ಆರ್,ಟಿ. ಹಾಗು ಕಾವೇರಿ ವನ್ಯಧಾಮದಿಂದ ವಲಸೆ ಬರುವ ವನ್ಯಜೀವಿಗಳು ಮಲೆ ಮಹದೇಶ್ವರ ವನ್ಯಧಾಮದಲ್ಲಿ ಬೀಡು ಬಿಡುತ್ತಿವೆ. ಹೀಗಾಗಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಇತ್ತೀಚೇಗೆ ನಡೆದ ಹುಲಿ ಅಂದಾಜು ಗಣತಿಯಲ್ಲಿ 18ಕ್ಕೂ ಹೆಚ್ಚು ಹುಲಿಗಳು ಇರುವುದು ಪತ್ತೆಯಾಗಿದೆ. ಸುಮಾರು 906 ಚದರ ಕಿಲೋಮೀಟರ್ ವಿಸ್ತಾರದ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಅಳವಡಿಸಿರುವ ಕ್ಯಾಮ್ಯರಾ ಟ್ರಾಪ್ ಮೂಲಕ ವೇಳೆ ಹುಲಿ, ಕಡವೆ, ಆನೆ, ಚಿರತೆ ಸೇರಿದಂತೆ ವಿವಿಧ ರೀತಿಯ ವನ್ಯಜೀವಿಗಳು ಇರುವುದು ಪತ್ತೆಯಾಗಿದೆ. ಕಾಡುಗಳ್ಳ ವೀರಪ್ಪನ್ ಹತನಾದ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ, ಕಳ್ಳಭೇಟೆ ಕಡಿಮೆಯಾಗಿದೆ.

ಜೊತೆಗೆ ಅರಣ್ಯ ಇಲಾಖೆಯ ಕಟ್ಟು ನಿಟ್ಟಿನ ಕ್ರಮದಿಂದಾಗಿ ಹುಲಿ ಸೇರಿದಂತೆ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ 150ಕ್ಕೂ ಹೆಚ್ಚು ಕೆರೆಗಳ ನಿರ್ಮಾಣ ಮಾಡಲಾಗಿದೆ. 600 ಕಿಲೋಮೀಟರ್ ಗೇಮ್ ರೋಡ್ ನಿರ್ಮಾಣ ಮಾಡಲಾಗಿದೆ. ಬೇಟೆಗಾರರು ಮತ್ತು ದನಗಾಹಿಗಳು ಅರಣ್ಯ ಪ್ರವೇಶ ಮಾಡದಂತೆ ಸೋಲಾರ್ ಫೆನ್ಸ್ ಮತ್ತು ಕಂದಕಗಳ ನಿರ್ಮಾಣ ಮಾಡಲಾಗಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಮಹದೇಶ್ವರ ವನ್ಯಧಾಮದಲ್ಲಿ ಎವರ್ ಗ್ರೀನ್ ಮತ್ತು ಸೋಲಾ ಫಾರೆಸ್ಟ್ ಇರುವುದು ವನ್ಯಜೀವಿಗಳಿಗೆ ಹೇಳಿ ಮಾಡಿಸಿದಂತೆ ಇದೆ.

ತಮ್ಮ ಸಂತತಿ ಹೆಚ್ಚಿಸಿ ಕೊಳ್ಳುತ್ತಿರುವ ಹುಲಿಗಳ ಸಂರಕ್ಷಣೆಗೆ ಹೆಚ್ಚಿನ ಆಧ್ಯತೆ ನೀಡ ಬೇಕಾದ ಅವಶ್ಯಕತೆ ಇರುವುದರಿಂದ ಇಲ್ಲಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಮಲೆಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲು 2019 ರಲ್ಲೇ ವರದಿ ನೀಡಿದ್ದರು. ರಾಷ್ಟ್ರಿಯ ಹುಲಿ ಸಂರಕ್ಷಿತ ಪ್ರಾಧಿಕಾರವು ಸಹ ಹಸಿರಿನಿಶಾನೆ ತೋರಿಸಿತ್ತು. ರಾಜ್ಯ ಸಚಿವ ಸಂಪುಟ ಸಭೆಯಲ್ಲು ಚರ್ಚೆಯಾಗಿ ಮುಖ್ಯಮಂತ್ರಿಗಳ ಅಂಕಿತವಷ್ಟೇ ಬಾಕಿ ಇತ್ತು. ಆದರೆ ಆ ಕಡತ ಈವರೆಗು ನೆನಗುದಿಗೆ ಬಿದ್ದಿದೆ.

ಈ ನಡುವೆ ಮಹದೇಶ್ವರ ವನ್ಯಧಾಮದಲ್ಲಿ ಇತ್ತೀಚೆಗೆ ಸಂಭವಿಸಿದ ಐದು ಹುಲಿಗಳ ಸಾವಿನ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಕೇಂದ್ರ ಉನ್ನತಾಧಿಕಾರ ಸಮಿತಿ ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಿದ್ದು ಮಲೆ ಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಶಿಫಾರಸು ಮಾಡಿದೆ. ಪಶ್ಚಿಮ ಘಟ್ಟಗಳಲ್ಲಿ ಪದೇಪದೇ ಸಂಭವಿಸುತ್ತಿರುವ ಹುಲಿಗಳ ಸಾವಿನ ಹಿನ್ನೆಲೆಯಲ್ಲಿ ಹುಲಿಗಳ ಸಂರಕ್ಷಣೆಗೆ ಗಂಭೀರ ಯೋಜನೆಗಳನ್ನು ರೂಪಸಬೇಕಿದೆ ಎಂದು ಸಲಹೆ ನೀಡಿದೆ ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯಲ್ಲಿ ಹಲವಾರು ಗ್ರಾಮಗಳಿವೆ. ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟ ಇದೆ.

ಹುಲಿ ಸಂರಕ್ಷಿತ ಪ್ರದೇಶ ಘೋಷಣೆಯಾದರೆ ಈ ಭಾಗದಲ್ಲಿ ಹತ್ತಾರು ನಿರ್ಬಂಧ ಹೇರಲಾಗುತ್ತದೆ ಎಂಬ ಆತಂಕ ಸ್ಥಳೀಯರನ್ನು ಕಾಡುತ್ತಿದೆ. ಇಂತಹ ನಿರ್ಬಂಧಗಳಿಂದ ಸ್ಥಳೀಯ ಜನಜೀವನದ ಮೇಲೆ ಪರಿಣಾಮ ಬೀರಲಿದೆ, ಬೆಟ್ಟಕ್ಕೆ ಬರುವ ಭಕ್ತರಿಗೊ ತೊಂದರೆಯಾಗಲಿದೆ, ಪ್ರವಾಸೋದ್ಯಮಕ್ಕು ತೊಡಕು ಉಂಟಾಗಲಿದೆ ಎಂಬ ವಾದಗಳು ಕೇಳಿಬರುತ್ತಿದ್ದು ಹುಲಿ ಸಂರಕ್ಷಿತ ಪ್ರದೇಶ ಘೋಷಣೆ ಮಾಡುವುದಕ್ಕೆ ಶಾಸಕರು ಸೇರಿದಂತೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ರಾಜ್ಯ ಸರ್ಕಾರವು ಸಹ ಸ್ಥಳೀಯರು ಹಾಗು ಜನಪ್ರತಿನಿಧಿಗಳ ಭಾವನೆಗೆ ಸ್ಪಂಧಿಸುವ ಸಾಧ್ಯತೆಯೇ ಹೆಚ್ಚಾಗಿದೆ. ಹಾಗಾಗಿ ಮಲೆಮಹದೇಶ್ವರ ವನ್ಯಧಾಮ ಹುಲಿಸಂರಕ್ಷಿತ ಪ್ರದೇಶ ಘೋಷಣೆಯಾಗುವುದು ಅನುಮಾನವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್
ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!