ಮುರುಘಾ ಶ್ರೀ ಪ್ರಕರಣದಲ್ಲಿ ಬಿಜೆಪಿ ಶಾಸಕ ಎಂಟ್ರಿ, ಹೈಕೋರ್ಟ್‌ ಜಡ್ಜ್‌ಗೆ ಪತ್ರ ಬರೆದ ಯತ್ನಾಳ್!

By Suvarna NewsFirst Published Sep 16, 2022, 10:50 PM IST
Highlights

ಚಿತ್ರದುರ್ಗದ ಮುರುಘಾ ಮಠ ಶ್ರೀಗಳ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಲ್ ಸಿಡಿದೆದ್ದಿದ್ದು, ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರು, (ಸೆಪ್ಟೆಂಬರ್.16): ಚಿತ್ರದುರ್ಗದ ಮುರುಘಾ ಮಠದ ಶರಣರು ಲೈಂಗಿಕ ಕಿರುಕುಳ ಆರೋಪದ ಮೇಲೆ ಜೈಲುಪಾಲಾಗಿದ್ದಾರೆ.  ಈ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದೆ. ಇನ್ನ ಈ ಕೇಸ್‌ನಲ್ಲಿ ಇದೀಗ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಂಟ್ರಿ ಕೊಟ್ಟಿದ್ದು, ಈ  ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿಗೆ ಪತ್ರ ಬರೆದಿದ್ದಾರೆ..

ಇಂದು(ಶುಕ್ರವಾರ) ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಚಿತ್ರದುರ್ಗದ ಮುರುಘಾ ಮಠ ಪ್ರಗತಿಪರರು, ನಕ್ಸಲರ  ಅಡ್ಡೆಯಾಗಿದೆ .  ಮಠದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ, ಮಠದ ಆಸ್ತಿ ಬಗ್ಗೆ ತನಿಖೆಯಾಗಬೇಕು ಎಂದು ಹೈಕೋರ್ಟ್​ ಮುಖ್ಯ ನ್ಯಾಮೂರ್ತಿ ಅವರಿಗೆ ಪತ್ರ ಬರೆಯುತ್ತೇನೆ. ಚಿತ್ರದುರ್ಗ ಮುರುಘಾ ಮಠದ ಬಗ್ಗೆ ಸಾರ್ವಜನಿಕರಿಗೆ ಗೊತ್ತಾಗಲಿ ಎಂದರು.

ಮುರುಘಾ ಶ್ರೀಗಳ ವಿರುದ್ಧದ ಪತ್ರ ವೈರಲ್:ಸ್ವಾಮೀಜಿ ಬಳಿ ಹೆಲಿಕಾಪ್ಟರ್ ಇದೆಯೇ?

ಶಿವಮೂರ್ತಿ ಮರುಘಾ ಶರಣರನ್ನು ಗದ್ದುಗೆಯಿಂದ ಕೆಳಗಿಳಿಸಬೇಕು. ಚಿತ್ರದುರ್ಗದ ಮುರುಘಾ ಮಠದ ಆಡಳಿತಾಧಿಕಾರಿ ಮಠವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಲಿ ಎಂದು ಆಗ್ರಹಿಸಿದರು.

ಅದು‌ ಲಿಂಗಾಯತರ ಶ್ರೀಮಂತ ಮಠವಾಗಿದೆ. ಮಠದ ಆಸ್ತಿ‌ ಹೇಗೆ ಉಳಿಸಬೇಕು? ಅಲ್ಲಿರುವ ಆಡಳಿತಾಧಿಕಾರಿ ದುರುಪಯೋಗ ಮಾಡಿಕೊಂಡಿದ್ದಾರೆ. ಮೊದಲು 10 ಸಾವಿರ ಎಕರೆ ಕಾಫಿ ಎಸ್ಟೇಟ್ ಇತ್ತು. ಈಗ 500 ಎಕರೆಗೆ ಇಳಿದಿದೆ. ಹೆಲಿಕಾಪ್ಟರ್ ಯಾರದ್ದು ಎಂದು ಗೊತ್ತಾಗಬೇಕು. ಬೇರೆ ಮಠದ ಮೇಲೆ ಇಂತಹ ಗಂಭೀರ ಆರೋಪ ಬಂದಿಲ್ಲ ಎಂದು ಹೇಳಿದರು.

ಬಾಲಕಿಯರ ಮೇಲಿನ ಆರೋಪ ಬಂದಿದೆ. ಜಾತ್ಯಾತೀತರು, ಪ್ರಗತಿಪರರಿಗೆ ಪ್ರಶಸ್ತಿ ಕೊಡಲಾಗಿದೆ.  ಮಠದಲ್ಲಿ ಟಿಪ್ಪು ಸುಲ್ತಾನ್ ಮೂರ್ತಿ ನಿಲ್ಲಿಸಿದ್ದಾರೆ.‌ ನಕ್ಸಲರಿಗೆ, ಪಾಕಿಸ್ತಾನದ ಮಲಾಲಗೆ ಬಸವ ಶ್ರೀ ಪ್ರಶಸ್ತಿ ಕೊಡುತ್ತಾರೆ. ಅದು ಲಿಂಗಾಯತ ಮಠದ ಸಂಪ್ರದಾಯ ಅಲ್ಲ. ಯಾವುದೇ ಮಠದ ಸ್ವಾಮಿಗಳು ಸಂಪ್ರದಾಯದಂತೆ ನಡೆಯಬೇಕು. ಲಿಂಗಾಯತ ಮಠ ಅಂದರೆ ಶಿಕ್ಷಣ ಕೊಡುವುದು. ಸಿದ್ದಗಂಗಾ ಮಠದಂತೆ ಇರಬೇಕು.  ಮಠ ಬಡವರಿಗೆ ಉಚಿತ ಶಿಕ್ಷಣ ನೀಡುವುದಾಗಿದೆ. ಸಮಾಜ ಸೇವೆ ಮಾಡಬೇಕು. ಮುರುಘಾ ಮಠದ ಬಗ್ಗೆ ತನಿಖೆಯಾಗಬೇಕು. ಅದಕ್ಕೆ ನಾವು ಹೈಕೋರ್ಟ್ ಮೇಲೆ ಒತ್ತಡ ತರುತ್ತೇವೆ ಎಂದು ತಿಳಿಸಿದರು.

ಶರಣರು ಮತ್ತೆ 14 ದಿನ ನ್ಯಾಯಾಂಗ ಬಂಧನಕ್ಕೆ
ಮುರುಘಾ ಮಠದ ಶಿವಮೂರ್ತಿ ಶಿವಾಚಾರ್ಯ ಶ್ರೀಗಳಿಗೆ  ಇಂದು ನ್ಯಾಯಾಂಗ ಬಂಧನ ಅಂತ್ಯವಾದ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದರು. ಆದ್ರೆ,  ನ್ಯಾಯಾಲಯ ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಏನಿದು ಪ್ರಕರಣ?:
ಕಳೆದ ವಾರ ಮುರುಘಾ ಶರಣರ ವಿರುದ್ಧ ಮೈಸೂರಿನ ನಜರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಮಠದ ಶಾಲೆಯಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿನಿಯಿರಿಂದ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣ ನೀಡಿ ಮೈಸೂರಿನಿಂದ ಚಿತ್ರದುರ್ಗಕ್ಕೆ ಪ್ರಕರಣದ ವಿಚಾರಣೆಯನ್ನು ಹಸ್ತಾಂತರಿಸಲಾಗಿತ್ತು. ಅದಾದ ನಂತರ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದ ಬಳಿಕ ಮುರುಘಾ ಶರಣರನ್ನು ಗುರುವಾರ ತಡರಾತ್ರಿ ಪೊಲೀಸರು ಬಂಧಿಸಿದ್ದರು. ಪ್ರಕರಣ ದಾಖಲಾಗಿ ವಾರ ಕಳೆದರೂ ಬಂಧನವಾಗದಿರುವುದಕ್ಕೆ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಸಹ ಶ್ರೀಗಳ ಪರ ಹೇಳಿಕೆ ನೀಡಿದ್ದರು. ಇದಕ್ಕೂ ಆಕ್ರೋಶ ಕೇಳಿ ಬಂದಿತ್ತು. ಸದ್ಯ ಆಸ್ಪತ್ರೆಯಲ್ಲಿರುವ ಶರಣರಿಗೆ 14 ದಿನಗಳ ನ್ಯಾಯಾಂಗ ಬಂಧನವಾಗಿದೆ. 

click me!