ಬೆಂಗಳೂರು ಗಲಭೆ ಕೇಸ್‌: ಮ್ಯಾಜಿಸ್ಪ್ರೇಟ್‌ ತನಿಖೆ ಶುರು

By Kannadaprabha News  |  First Published Aug 28, 2020, 7:19 AM IST

ಗಲಭೆ ಪೀಡಿತ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಗೆ ಭೇಟಿ| ಘಟನಾ ಸ್ಥಳಗಳ ಪರಿಶೀಲನೆ| ಆ.11 ರಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೋದರ ಸಂಬಂಧಿ ನವೀನ್‌ ವಿವಾದಾತ್ಮಕ ಪೋಸ್ಟ್‌ ವಿರೋಧಿಸಿ ಗಲಭೆ ನಡೆದಿತ್ತು| ಹಿಂಸಾಚಾರ ಕುರಿತು ಬೆಂಗಳೂರು ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮ್ಯಾಜಿಸ್ಪ್ರೇಟರ್‌ ತನಿಖೆಗೆ ಸರ್ಕಾರ ಆದೇಶಿಸಿತ್ತು| 


ಬೆಂಗಳೂರು(ಆ.28): ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ನೇತೃತ್ವದ ಮ್ಯಾಜಿಸ್ಪ್ರೇಟ್‌ ತನಿಖೆ ಆರಂಭವಾಗಿದ್ದು, ಗುರುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಗಲಭೆ ಪೀಡಿತ ಪ್ರದೇಶಗಳಿಗೆ ತೆರಳಿದ್ದ ಜಿಲ್ಲಾಧಿಕಾರಿ ಜಿ.ಎನ್‌.ಶಿವಮೂರ್ತಿ, ದೊಂಬಿಕೋರರಿಂದ ಹಾನಿಯಾಗಿದ್ದ ಠಾಣೆಗಳು, ಶಾಸಕರ ಮನೆ ಹಾಗೂ ಕಚೇರಿಯಲ್ಲಿ ಪರಾಮರ್ಶೆ ನಡೆಸಿದರು.

ಈ ವೇಳೆ ಪ್ರಕರಣ ಕುರಿತು ಪೂರ್ವ ವಿಭಾಗದ ಡಿಸಿಪಿ ಡಾ.ಎಸ್‌.ಡಿ.ಶರಣಪ್ಪ, ಬಾಣಸವಾಡಿ ಎಸಿಪಿ ರವಿಪ್ರಸಾದ್‌, ಡಿ.ಜೆ.ಹಳ್ಳಿ ಠಾಣೆ ಇನ್ಸ್‌ಪೆಕ್ಟರ್‌ ಕೇಶವಮೂರ್ತಿ ಹಾಗೂ ಕೆ.ಜಿ.ಹಳ್ಳಿ ಠಾಣೆ ಇನ್ಸ್‌ಪೆಕ್ಟರ್‌ ಅಜಯ್‌ ಸಾರಥಿ ಅವರಿಂದ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದರು.

Tap to resize

Latest Videos

'ದೊಂಬಿ ಮಾಡಿ ಗುಂಡಿಗೆ ಬಲಿಯಾದವರು ಹುತಾತ್ಮರಾದರೆ ಸೈನಿಕರನ್ನು ಏನೆಂದು ಕರೆಯುತ್ತೀರಿ?

ಸೆ.2ರಿಂದ ಸಾಕ್ಷಿಗಳ ಹೇಳಿಕೆ ದಾಖಲು:

ಘಟನಾ ಸ್ಥಳ ಪರಿಸ್ಥಿತಿ ಅವಲೋಕಿಸಿದ್ದೇನೆ. ಗಲಭೆ ಸಂಬಂಧ 380 ಆರೋಪಿಗಳ ಬಂಧನವಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಸಾರ್ವಜನಿಕ ಹಾಗೂ ಸರ್ಕಾರಿ ಆಸ್ತಿ ಪಾಸ್ತಿ ಹಾನಿ ಬಗ್ಗೆ ಸಹ ಮಾಹಿತಿ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಮೂರ್ತಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಪ್ರಕರಣ ಸಂಬಂಧ ಸೆ.2ರಿಂದ ಸಾರ್ವಜನಿಕರಿಂದ ಸಾಕ್ಷಿ ಹೇಳಿಕೆಗಳನ್ನು ಪಡೆಯಲಾಗುತ್ತದೆ. ಘಟನೆ ಕುರಿತು ಜನರು ಮುಕ್ತವಾಗಿ ಹೇಳಿಕೆ ನೀಡಬಹುದು. ಸಾಕ್ಷಿದಾರರಿಗೆ ಸೂಕ್ತ ರಕ್ಷಣೆ ಸಹ ಕಲ್ಪಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ.

ಫೇಸ್‌ಬುಕ್‌ನಲ್ಲಿ ಇಸ್ಲಾಂ ಧರ್ಮಗುರು ಮಹಮ್ಮದ್‌ ಪೈಗಂಬರ್‌ ಕುರಿತು ಆ.11 ರಂದು ಮಂಗಳವಾರ ರಾತ್ರಿ ಪುಲಿಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೋದರ ಸಂಬಂಧಿ ನವೀನ್‌ ವಿವಾದಾತ್ಮಕ ಪೋಸ್ಟ್‌ ವಿರೋಧಿಸಿ ಗಲಭೆ ನಡೆದಿತ್ತು. ಈ ಹಿಂಸಾಚಾರ ಕುರಿತು ಬೆಂಗಳೂರು ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮ್ಯಾಜಿಸ್ಪ್ರೇಟರ್‌ ತನಿಖೆಗೆ ಸರ್ಕಾರ ಆದೇಶಿಸಿತ್ತು.
 

click me!