ಆ.31ರೊಳಗೆ ಗ್ರಾಪಂ ಮತದಾರರ ಅಂತಿಮ ಪಟ್ಟಿ

By Kannadaprabha NewsFirst Published Aug 28, 2020, 7:01 AM IST
Highlights

ಇಷ್ಟರಲ್ಲೇ ನಡೆಯಬೇಕಿದ್ದ ಗ್ರಾಮ ಪಂಚಾಯತ್ ಚುನಾವಣೆ ಕೊರೋನಾ ಹಿನ್ನೆಲೆಯಲ್ಲಿ ಮುಂದೆ ಹೋಗುತ್ತಿದ್ದು, ಇದೀಗ ಮತದಾರರ ಅಂತಿಮ ಪಟ್ಟಿ ಸಲ್ಲಿಸಲು ಕೊನೆಯ ದಿನಾಂಕವನ್ನು ಪ್ರಕಟಿಸಲಾಗಿದೆ.

ಬೆಂಗಳೂರು(ಆ.28): ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಗೆ ಸಿದ್ದತೆಗಳು ಪ್ರಗತಿಯಲ್ಲಿದ್ದು, ಕೊಡಗು, ಮೈಸೂರು ಹಾಗೂ ರಾಯಚೂರು ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ 27 ಜಿಲ್ಲೆಗಳ ಗ್ರಾಮ ಪಂಚಾಯಿತಿಗಳ ಮೀಸಲಾತಿಯ ಅಂತಿಮ ಗೆಜೆಟ್‌ ಹೊರಡಿಸಲಾಗಿದೆ. ಆ.31ರೊಳಗೆ ಮತದಾರರ ಅಂತಿಮ ಪಟ್ಟಿಪ್ರಕಟಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ಗೆ ಗುರುವಾರ ಮಾಹಿತಿ ನೀಡಿದೆ.

ಕಾಂಗ್ರೆಸ್‌ನ ವಿಧಾನಪರಿಷತ್‌ ಸದಸ್ಯ ಕೆ.ಸಿ ಕೊಂಡಯ್ಯ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ಚುನಾವಣಾ ಆಯೋಗ ಈ ಮಾಹಿತಿ ನೀಡಿದೆ.

ಆಯೋಗದ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ.ಎನ್‌. ಫಣೀಂದ್ರ, ಹೆಚ್ಚುವರಿ ಲಿಖಿತ ಹೇಳಿಕೆ ಸಲ್ಲಿಸಿ,ಎಲ್ಲ ಗ್ರಾಮ ಪಂಚಾಯಿತಿಗಳ ಮತದಾರರ ಪಟ್ಟಿಯ ಕರಡು ಪೂರ್ಣಗೊಂಡಿದ್ದು, ಆ.31ರೊಳಗೆ ಮತದಾರರ ಅಂತಿಮ ಪಟ್ಟಿಪ್ರಕಟಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಅಧ್ಯಕ್ಷರ ಆಯ್ಕೆಗೆ ಈ ಬಾರಿ ಕಾಂಗ್ರೆಸ್‌ನಲ್ಲಿ ಚುನಾವಣೆ!..

ಕೊರೋನಾ ಹಿನ್ನೆಲೆಯಲ್ಲಿ ಪ್ರತ್ಯೇಕ ‘ಪ್ರಮಾಣಿತ ಕಾರ್ಯಾಚರಣಾ ವಿಧಾನಗಳು’ (ಎಸ್‌ಒಪಿ) ರೂಪಿಸುವ ಕಾರ್ಯಪ್ರಗತಿಯಲ್ಲಿದೆ. ಜಿ.ಪಂ. ತಾ.ಪಂ ಹಾಗೂ ಗಾ.ಪಂ ಚುನಾವಣೆಗಳನ್ನು ನಡೆಸಲು ಆಯೋಗಕ್ಕೆ 225 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಇದರಲ್ಲಿ ಕೇವಲ ಗ್ರಾ.ಪಂ ಚುನಾವಣೆಗಳಿಗೆ 185 ಕೋಟಿ ರು.ಬೇಕಾಗಿದೆ. ಹೆಚ್ಚು ಅನುದಾನ ನೀಡುವ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ.

ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ, ಅನುದಾನಕ್ಕೆ ಸಂಬಂಧಿಸಿದಂತೆ ಆಯೋಗ ಸಲ್ಲಿಸಿರುವ ಪ್ರಸ್ತಾವನೆಯನ್ನು ಆದ್ಯತೆ ಮೇಲೆ ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಅಲ್ಲದೇ ಮೀಸಲಾತಿ, ಮತದಾರರ ಅಂತಿಮ ಪಟ್ಟಿಹಾಗೂ ವೇಳಾಪಟ್ಟಿಪ್ರಕಟಕ್ಕೆ ಸಂಬಂಧಿಸಿದಂತೆ ಪ್ರಗತಿ ವರದಿ ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿ ವಿಚಾರಣೆಯನ್ನು ಸೆ.15ಕ್ಕೆ ಮುಂದೂಡಿತು

click me!