
ರಾಮನಗರ (ನ.6): ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನ. 26ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ವಿಚಾರ ನನಗೆ ತಿಳಿದಿಲ್ಲ. ಹೈಕಮಾಂಡ್ ತೀರ್ಮಾನ ಮಾಡಿದರೆ ನಮಗೂ ಕರೆ ಮಾಡಿ ಹೇಳುತ್ತಾರೆ. ಪ್ರಮಾಣ ವಚನ ಸ್ವೀಕರಿಸುವಾಗ ನಾನೂ ಹೋಗುತ್ತೇನೆ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯೆ ನೀಡಿದರು.
ಮಾಗಡಿ ಕ್ಷೇತ್ರ ವ್ಯಾಪ್ತಿಯ ಜಾಲಮಂಗಲ, ಅಕ್ಕೂರು ಹಾಗೂ ದೊಡ್ಡ ಗಂಗವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ನೀಡುವ ಬಗ್ಗೆಯೂ ಹೈಕಮಾಂಡ್ ತೀರ್ಮಾನವೇ ಅಂತಿಮ. ಸಂಪುಟ ವಿಸ್ತರಣೆ ಯಾವಾಗ ಅಂತ ಮುಖ್ಯಮಂತ್ರಿಗಳಿಗೆ ಮಾತ್ರ ಗೊತ್ತು. ಬಹುಶಃ ಡಿಸೆಂಬರ್ ಗೆ ವಿಸ್ತರಣೆ ಆಗುತ್ತದೆ ಅಂತ ಊಹಾಪೋಹ ಇದೆ ಎಂದರು.
ಮುಖ್ಯಮಂತ್ರಿಗಳ ಹುದ್ದೆಗ ಆಕಾಂಕ್ಷಿಗಳ ಹೆಚ್ಚಳ ವಿಚಾರವಾಗಿ ಕೇಳಿದ ಪ್ರಶ್ನೆಗೆ ನಮ್ಮ ಪಕ್ಷದಲ್ಲಿ ಎಲ್ಲರೂ ಸಮರ್ಥರಿದ್ದಾರೆ. ಡಿ.ಕೆ.ಶಿವಕುಮಾರ್ , ಜಿ. ಪರಮೇಶ್ವರ್, ಜಾರಕಿಹೋಳಿ, ಎಂ.ಬಿ.ಪಾಟೀಲ್ ಎಲ್ಲರೂ ಸಮರ್ಥರಿದ್ದಾರೆ. ಅವಕಾಶ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಹೈಕಮಾಂಡ್ ನದೆ ಅಂತಿಮ ತೀರ್ಮಾನ. ಮಕ್ಕಳು ಅತ್ತರೆ ತಾನೆ ತಾಯಿ ಹಾಲು ಕುಡಿಸೋದು. ಹಾಗೆ ಕೆಲವರು ಅವರವರ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ರವರು ನೀರಾವರಿ ವಿಚಾರದಲ್ಲಿ ಸಭೆ ಮಾಡಲು ಹೋಗುತ್ತಿದ್ದಾರೆ. ಮೇಕೆದಾಟು ಬಗ್ಗೆ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಇದೆ. ಹಾಗಾಗಿ ವಕೀಲರು, ಅಧಿಕಾರಿಗಳ ಜೊತೆ ಚರ್ಚೆ ಮಾಡಲು ಹೋಗಿದ್ದಾರೆ. ಯಾವುದೇ ರಾಜಕೀಯ ಚರ್ಚೆಗೆ ಅವರು ಹೋಗಿಲ್ಲ ಎಂದು ತಿಳಿಸಿದರು.
ಎಲ್ಲ ಪಕ್ಷದಲ್ಲೂ ಬಣ ರಾಜಕೀಯ ಇದೆ:
ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ವಿಚಾರವಾಗಿ ಕೇಳಿದ ಪ್ರಶ್ನೆಗೆ ಎಲ್ಲಾ ಪಕ್ಷದಲ್ಲೂ ಬಣ ರಾಜಕೀಯ ಇದೆ. ಆದರೆ, ನಮ್ಮಲ್ಲಿ ಹೈಕಮಾಂಡ್ ಸ್ಟ್ರಾಂಗ್ ಆಗಿ ಇದೆ. ಎಲ್ಲಾ ಬಣಗಳು ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿರುತ್ತವೆ ಎಂದು ಹೇಳಿದರು.
ರಾಜ್ಯದಲ್ಲಿ ನವೆಂಬರ್ ಅಂತ್ಯಕ್ಕೆ ಅಹಿಂದ ಸಮಾವೇಶ ನಡೆಸುವ ಬಗ್ಗೆ ಎಲ್ಲರೂ ಅವರವರ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಹೈಕಮಾಂಡ್ ಪ್ರಬಲವಾಗಿದೆ. ಅಂತಿಮವಾಗಿ ಏನೇ ತೀರ್ಮಾನ ಇದ್ದರು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಬಾಲಕೃಷ್ಣ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ