ಟಿಕೆಟ್ ಇಲ್ಲದೆ ಬಸ್‌ನಲ್ಲಿ ಪ್ರಯಾಣಿಸಿದ ಪಕ್ಷಿಗಳು, ಅಮಾನತುಗೊಂಡ ಕೆಸ್ಸಾರ್ಟಿಸಿ ಕಂಡಕ್ಟರ್!

By Santosh NaikFirst Published Jun 15, 2022, 11:00 PM IST
Highlights

ಪಂಜರದಲ್ಲಿ ಲವ್ ಬರ್ಡ್ಸ್‌ಗಳನ್ನು ಇಟ್ಟುಕೊಂಡಿದ್ದ ಪ್ರಯಾಣಿಕ, ಟಿಕೆಟ್ ಖರೀದಿಸಲು ನಿರಾಕರಿಸಿದ್ದ. ಆದರೆ, ತಪಾಸಣಾ ಸಿಬ್ಬಂದಿಗಳನ್ನು ಬಸ್ ಏರಿ ಪಕ್ಷಿಗಳ ಟಿಕೆಟ್ ಕೇಳಿದ್ದಾರೆ. ಟಿಕೆಟ್ ನೀಡದ ಕಂಡಕ್ಟರ್ ಅಶೋಕ್ ಹಿಲಾಲಪುರ ಅವರಿಎ ಅಮಾನತು ಶಿಕ್ಷೆ ನೀಡಲಾಗಿದೆ.
 

ಬೆಂಗಳೂರು (ಜೂನ್ 15): ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (Kalyana Karnataka Road Transport Corporation) ನಿರ್ವಾಹಕನ (Conductor ) ದುರಾದೃಷ್ಟಕ್ಕೆ ಏನೂ ಹೇಳಬೇಕು ಅನ್ನೋದೇ ತೋಚೋದಿಲ್ಲ. ಕೆಸ್ಸಾರ್ಟಿಸಿಯಲ್ಲಿ(KSRTC) ಟಿಕೆಟ್ ವಿಚಾರವಾಗಿ ಕಟ್ಟುನಿಟ್ಟಿನ ನಿಯಮವಿದೆ. ಆದರೆ, ಈ ನಿರ್ವಾಹಕನ ಬಸ್‌ನಲ್ಲಿ ಪಕ್ಷಿಗಳು (Birds) ಟಿಕೆಟ್ ಖರೀದಿ ಮಾಡದ ಕಾರಣಕ್ಕಾಗಿ ಕಂಡಕ್ಟರ್ ಅಶೋಕ್ ಹಿಲಾಲಪುರ (Ashok Hilalapura) ಅಮಾನತು ಶಿಕ್ಷೆ ಪಡೆದುಕೊಂಡಿದ್ದಾರೆ.

ಹೈದರಾಬಾದ್‌ನಿಂದ (hyderabad) ಬೀದರ್‌ (Bidar)ಜಿಲ್ಲೆಯ ಔರಾದ್‌ಗೆ (Aurad) ಪ್ರಯಾಣ ಮಾಡುತ್ತಿದ್ದ ಕೆಕೆಆರ್ಟಿಸಿ ಬಸ್ ನಲ್ಲಿ ಈ ಘಟನೆ ನಡೆದಿದೆ. ಹೈದರಾಬಾದ್‌ನಲ್ಲಿ ಬಸ್ ಏರಿದ್ದ ಪ್ರಯಾಣಿಕನೊಬ್ಬ ಪಂಜರದಲ್ಲಿ ಲವ್ ಬರ್ಡ್ಸ್‌ಗಳನ್ನು ಇರಿಸಿಕೊಂಡಿದ್ದ. ಕೆಸ್ಸಾರ್ಟಿಸಿ ನಿಯಮದ ಪ್ರಕಾರ, ಪ್ರಯಾಣಿಕರು ತಮ್ಮೊಂದಿಗೆ ಕರೆತರುವ ಪ್ರಾಣಿ, ಪಕ್ಷಿಗಳಿಗೆ ಅರ್ಧ ಟಿಕೆಟ್ ಖರೀದಿಸಬೇಕು ಎನ್ನುವ ನಿಯಮವಿದೆ. ಆ ಕಾರಣಕ್ಕಾಗಿ ಪಕ್ಷಿಗಳಿಗೆ ಟಿಕೆಟ್ ಖರೀದಿಸಬೇಕು ಎಂದು ಕಂಡಕ್ಟರ್, ಪ್ರಯಾಣಿಕನಿಗೆ ಹೇಳಿದ್ದರು. ಆದರೆ, ಪ್ರಯಾಣಿಕ ಮಾತ್ರ ಸಾಧ್ಯವೇ ಇಲ್ಲ ಎಂದು ಹೇಳಿದ್ದ.

ಅದಲ್ಲದೆ, ಬಸ್‌ನಲ್ಲಿದ್ದ ಸಹ ಪ್ರಯಾಣಿಕರಿಂದಲೂ ಆತನಿಗೆ ಬೆಂಬಲ ಸಿಕ್ಕಿತ್ತು. ಬಸ್‌ನಲ್ಲಿ ಈ ಪಕ್ಷಿಗಳು ಯಾರ ಸ್ಥಳವನ್ನು ಆಕ್ರಮಿಸಿಲ್ಲ, ಅದಲ್ಲದೆ, ಯಾವುದೇ ತೂಕವೂ ಇಲ್ಲ. ಇದಕ್ಕೆ ಟಿಕೆಟ್ ಕೇಳುವುದು ಮೂರ್ಖತನದ ನಿರ್ಧಾರ ಎಂದು ಕಂಡಕ್ಟರ್‌ನನ್ನು ತರಾಟೆಗೆ ತೆಗೆದುಕೊಂಡಿದ್ದರು. ಸಹ ಪ್ರಯಾಣಿಕರ ಒತ್ತಡದಿಂದ ಬಗ್ಗಿದ ಕಂಡಕ್ಟರ್ ಅಶೋಕ್ ಹಿಲಾಲಪುರ, ರೂಲ್ ಬುಕ್ ಅನ್ನು ಬದಿಗೆ ಸರಿಸಿ ಟಿಕೆಟ್ ಇಲ್ಲದೆ ಪಕ್ಷಿಗಳಿಗೆ ಪ್ರಯಾಣಿಸಲು ಅನುವು ಮಾಡಿಕೊಟ್ಟಿದ್ದರು. ಆದರೆ, ಅಶೋಕ್ ಹಿಲಾಲಪುರ ಪಾಲಿಗೆ ಅದೃಷ್ಟ ಆ ದಿನ ಸರಿ ಇರಲಿಲ್ಲ.

ಪ್ರಯಾಣದ ಮಧ್ಯದಾರಿಯಲ್ಲಿ ಇರುವಾಗಲೇ ಕೆಸ್ಸಾರ್ಟಿಸಿ ತಪಾಸಣಾ ಸಿಬ್ಬಂದಿಗಳು ಬಸ್ಅನ್ನು ಏರಿದ್ದಾರೆ. ಪಕ್ಷಿಗಳನ್ನು ತನ್ನೊಂದಿಗೆ ಕರೆತಂದಿದ್ದ ಪ್ರಯಾಣಿಕ ಅದಕ್ಕೆ ಅರ್ಧ ಟಿಕೆಟ್ ಖರೀದಿಸಿಲ್ಲ ಎನ್ನುವ ವಿಚಾರ ಈ ವೇಳೆ ಗೊತ್ತಾಗಿದೆ. ತಕ್ಷಣವೇ ಕಂಡಕ್ಟರ್‌ಅನ್ನು ಅವರು ತರಾಟೆಗೆ ತೆಗೆದುಕೊಂಡಿದ್ದು ಮಾತ್ರವಲ್ಲದೆ, ಉನ್ನತ ಅಧಿಕಾರಿಗಳಿಗೆ ಈ ವಿಚಾರದ ಕುರಿತು ವಿಸ್ತ್ರತ ವರದಿ ನೀಡಬೇಕು ಎನ್ನುವ ಟಾಸ್ಕ್ ಅನ್ನೂ ನೀಡಿದರು.

Prophet Row: ನೂಪುರ್ ಶರ್ಮಾ ಬಂಧನಕ್ಕೆ ಆಗ್ರಹಿಸಿ ಬೀದರ್‌ನಲ್ಲಿ ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ

ಈ ವರದಿ ಬಂದ ಬೆನ್ನಲ್ಲಿಯೇ ಬೀದರ್‌ನ ಕೆಕೆಆರ್ಟಿಸಿಯ ವಿಭಾಗೀಯ ಕಂಟ್ರೋಲರ್, ಅಶೋಕ್ ಹಿಲಾಲಪುರ ಅವರಿಗೆ ಕೆಲಸದಿಂದ ಅಮಾನತಿನ ಶಿಕ್ಷೆ ವಿಧಿಸಿದ್ದಾರೆ.
ಕಳೆದ 24 ವರ್ಷಗಳಿಂದ ಕೆಕೆಆರ್ಟಿಸಿಯಲ್ಲಿ ಕೆಲಸ ಮಾಡುತ್ತಿರುವ ಅಶೋಕ್ ಹಿಲಾಲಪುರ ಈ ಘಟನೆಯನ್ನು ವಿವರಿಸಿದ್ದಾರೆ. "ಆ ಎರಡೂ ಪಕ್ಷಿಗಳಿಗೆ ಸೇರಿ ಅರ್ಧ ಟಿಕೆಟ್‌ನ ಮೌಲ್ಯ 114 ರೂಪಾಯಿ ಆಗಿತ್ತು. ಇದನ್ನು ಪ್ರಯಾಣಿಕ ಖರೀದಿ ಮಾಡಬಹುದಿತ್ತು. ಆದರೆ, ನನ್ನ ಮೇಲೆ ಮುಗಿಬಿದ್ದಿದ್ದ ಸಹ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಲು ಅನುಮತಿ ನೀಡುವಂತೆ ಕೇಳಿದರು. ಅಷ್ಟೆಲ್ಲಾ ಜನ ಹೇಳಿದ ಮೇಲೆ ನಾನಾದರೂ ಹೇಗೆ ಸುಮ್ಮನಿರಲಿ. ಅದಕ್ಕೆ ಅನುವು ಮಾಡಿಕೊಟ್ಟಿದ್ದೆ. ಆದರೆ, ತಪಾಸಣಾ ಸಿಬ್ಬಂದಿಗಳು ಮಾತ್ರ ತಮ್ಮ ಕೆಲಸವನ್ನು ಮಾಡಿದರು. ಇದಕ್ಕಾಗಿ ಪ್ರಯಾಣಿಕನಿಗೆ ದಂಡ ಹಾಕಬೇಕಿತ್ತು. ಆದರೆ, ನನಗೆ ಶಿಕ್ಷೆ ವಿಧಿಸಲಾಗಿದೆ' ಎಂದು ಹೇಳಿದ್ದಾರೆ.

3 ದಿನದ ವಿಚಾರಣೆ ಬಳಿಕ ರಾಹುಲ್ ಗಾಂಧಿಗೆ ರೆಸ್ಟ್, ಜೂ.17ಕ್ಕೆ ಮತ್ತೆ ಹಾಜರಾಗಲು ಸಮನ್ಸ್!

ಕೆಸ್ಸಾರ್ಟಿಸಿಯಲ್ಲಿ ಇರುವ ನಿಯಮವೇ ಹಾಗೆ. ಪ್ರಯಾಣಿಕರು ತಮ್ಮೊಂದಿಗೆ ಕರೆತರುವ ಯಾವುದೇ ಪ್ರಾಣಿ, ಪಕ್ಷಿ, ನಾಯಿಮರಿಗಳಿಗೆ ಅರ್ಧ ಟಿಕೆಟ್ ಅನ್ನು ಖರೀದಿ ಮಾಡಲೇಬೇಕು. ಹಾಗೇನಾದರೂ ಟಿಕೆಟ್ ಖರೀದಿ ಮಾಡದೇ ಇದ್ದಲ್ಲಿ, ಪ್ರಯಾಣಿಕನಿಗೆ ಟಿಕೆಟ್ ಬೆಲೆಯ 10ರಷ್ಟು ದಂಡ ಹಾಗೂ ನಿರ್ವಾಹಕನಿಗೆ ಅಮಾನತು ಶಿಕ್ಷೆ ನೀಡಲಾಗುತ್ತದೆ ಎಂದು ಬೀದರ್ ವಿಭಾಗೀಯ ಕಂಟ್ರೋಲರ್ ನಾರಾಯಣ್ ಗೌಡಗೇರಿ ಹೇಳಿದ್ದಾರೆ. ಕೆಸ್ಸಾರ್ಟಿಸಿಯ ಹಣವನ್ನು ದುರುಪಯೋಗ ಪಡಿಸಿಕೊಂಡ ಕಾರಣದ ಮೇಲೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡುವ ಅವಕಾಶವಿದೆ. ಆದರೆ, ಇಲ್ಲಿ ಬರೀ ಅಮಾನತಿನ ಶಿಕ್ಷೆ ನೀಡಲಾಗಿದೆ ಎಂದಿದ್ದಾರೆ.

click me!