ಲೋಕಸಭಾ ಚುನಾವಣೆ : ‘ರಾಜ್ಯದಲ್ಲಿ ಬಿಜೆಪಿಗೆ 22 ಸೀಟುಗಳಲ್ಲಿ ಗೆಲುವು’

Published : Feb 11, 2019, 07:27 AM IST
ಲೋಕಸಭಾ ಚುನಾವಣೆ : ‘ರಾಜ್ಯದಲ್ಲಿ ಬಿಜೆಪಿಗೆ 22 ಸೀಟುಗಳಲ್ಲಿ ಗೆಲುವು’

ಸಾರಾಂಶ

ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಳೆ ವಿವಿಧ ಪಕ್ಷಗಳು ಗೆಲುವಿಗಾಗಿ ಕಸರತ್ತು ನಡೆಸುತ್ತಿವೆ. ಇದೇ ವೇಳೆ ಬಿಜೆಪಿ ರಾಜ್ಯದಲ್ಲಿ 22ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಯಡಿಯೂರಪ್ಪ ಭರವಸೆ ವ್ಯಕ್ತಪಡಿಸಿದ್ದಾರೆ. 

ಹುಬ್ಬಳ್ಳಿ :  ಕರ್ನಾಟಕದಲ್ಲಿ ಅಧಿಕಾರ ನಡೆಸುವಷ್ಟುಸ್ಥಾನಗಳನ್ನು ಗೆಲ್ಲದಿದ್ದರೂ ಅಪವಿತ್ರವಾಗಿ ಮೈತ್ರಿ ಮಾಡಿಕೊಂಡು ನಡೆಯುತ್ತಿರುವ ಸಮ್ಮಿಶ್ರ ಸರ್ಕಾರ ಬಹಳ ದಿನ ಬಾಳದು. ಶೀಘ್ರದಲ್ಲೇ ಪತನವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪುನರುಚ್ಚರಿಸಿದ್ದಾರೆ.

ನಗರದಲ್ಲಿ ಲೋಕಸಭೆ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲು ಬಿಜೆಪಿ ಆಯೋಜಿಸಿದ್ದ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂಥ ಕೆಟ್ಟಸರ್ಕಾರವನ್ನು ರಾಜ್ಯ ಹಿಂದೆಂದೂ ನೋಡಿರಲಿಲ್ಲ. ಅವರ ಮಂತ್ರಿ ಮಂಡಳದಲ್ಲಿ ಯಾರೊಬ್ಬರಿಗೂ ವಿಶ್ವಾಸವಿಲ್ಲ. ಬರೀ ಕಚ್ಚಾಟದಲ್ಲೇ ದಿನಗಳನ್ನು ಕಳೆಯುತ್ತಿದ್ದಾರೆ. ರಾಜ್ಯಾದ್ಯಂತ ಭೀಕರ ಬರ ಆವರಿಸಿದೆ. ಎಲ್ಲೂ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುತ್ತಿಲ್ಲ. ಮುಖ್ಯಮಂತ್ರಿಯಾಗಲಿ, ಯಾವೊಬ್ಬ ಸಚಿವರಾಗಲಿ ಬರ ಪೀಡಿತ ಪ್ರದೇಶಗಳಿಗೆ ಒಮ್ಮೆಯೂ ಭೇಟಿ ನೀಡುತ್ತಿಲ್ಲ ಎಂದು ಟೀಕಿಸಿದರು.

ಬಿಜೆಪಿಗೆ 22ಕ್ಕೂ ಹೆಚ್ಚು ಸ್ಥಾನ:  ರಾಜ್ಯದಲ್ಲಿ ಇಂತಹ ಕೆಟ್ಟಸರ್ಕಾರವಿದ್ದರೆ, ಕೇಂದ್ರದಲ್ಲಿ ಅತ್ಯಂತ ಸದೃಢ, ಸ್ಥಿರ ಸರ್ಕಾರವಿದೆ. 60 ವರ್ಷಗಳಲ್ಲಿ ಆಗದಂತಹ ಕೆಲಸಗಳು ಕೇವಲ 55 ತಿಂಗಳಲ್ಲಿ ಮೋದಿ ಸರ್ಕಾರ ಮಾಡಿ ತೋರಿಸಿದೆ. ದೇಶದ ಪ್ರಗತಿಗಾಗಿ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಬೇಕಿದೆ. ಕೇಂದ್ರದ ಬಜೆಟ್‌ ಅತ್ಯಂತ ಐತಿಹಾಸಿಕವಾಗಿದೆ. ರೈತರನ್ನು ಸದೃಢರನ್ನಾಗಿ ಮಾಡುವುದಕ್ಕಾಗಿ ಪ್ರತಿ ರೈತರಿಗೆ 6 ಸಾವಿರ ಜಮೆ ಮಾಡುವುದು, 5 ಲಕ್ಷವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಿರುವುದು, ಎಲ್ಲವೂ ಕ್ರಾಂತಿಕಾರಕಗಳಾಗಿವೆ. ಹಿಂದಿನ ಸರ್ಕಾರಗಳು ಈ ತರಹದ ಯೋಜನೆಗಳನ್ನು ನೀಡಲು ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದರು.

ಈ ಸಲ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ. ಕರ್ನಾಟಕದಲ್ಲಿ 22ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ನುಡಿದರು.

ಪಟೇಲರ ವ್ಯಕ್ತಿತ್ವ :  ದೇಶದ ಜನತೆ ಸರ್ದಾರ ವಲ್ಲಭಾಯಿ ಪಟೇಲರಲ್ಲಿ ಕಂಡಂತಹ ವ್ಯಕ್ತಿತ್ವವನ್ನು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಕಾಣುತ್ತಿದ್ದಾರೆ. ಅಂತಹ ದಿಟ್ಟನಿರ್ಧಾರಗಳನ್ನು ಮೋದಿ ಕೈಗೊಳ್ಳುತ್ತಿದ್ದಾರೆ. ಆರ್ಥಿಕ ನೀತಿ ಎಲ್ಲವೂ ಅತ್ಯಂತ ಪ್ರಭಾವಶಾಲಿಯಾಗಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ