
ಆದಾಯವೇ ಇಲ್ಲದೆ ಇದ್ದರೂ ದಾನ!
-----
ಕೈ ಬಿಚ್ಚಿ ಮಾಡಿದ ದಾನ, ಧರ್ಮದ ಫೋಟೋಗಳನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದು ಹಾಗೂ ನೆರವು ಪಡೆದವರ ಬಗ್ಗೆ ನೋಂದಣಿ ಪುಸಕ್ತಗಳಲ್ಲಿ ಬರೆದಿಟ್ಟಿದ್ದು ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರಿಗೆ ಈಗ ಮುಳುವಾಗಿವೆ ಎಂಬ ಕುತೂಹಲಕಾರಿ ಸಂಗತಿ ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಮಾಜಿ ಸಚಿವರ ವಿರುದ್ಧ ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಫೋಟೋಗಳೇ ಪ್ರಬಲ ಸಾಕ್ಷ್ಯಗಳಾಗಿವೆ. ಅಲ್ಲದೆ, ಚಾಮರಾಜಪೇಟೆಯ ಗೃಹ ಕಚೇರಿಯಲ್ಲಿ ಸಿಕ್ಕಿದ ನೋಂದಣಿ ಪುಸಕ್ತಗಳಲ್ಲಿ ನೆರವು ಪಡೆದವರ ಹೆಸರು ಒಳಗೊಂಡಂತೆ ಇದ್ದ ಸ್ವವಿವರವು ಜಮೀರ್ ಅವರಿಗೆ ಕಾನೂನಿನ ಕುಣಿಕೆ ಬಿಗಿಗೊಳಿಸಿವೆ. ಮಾಜಿ ಸಚಿವರ ಆದಾಯ ಹಾಗೂ ಅವರ ದಾನ-ಧರ್ಮದ ವಿವರವನ್ನು ಪೊಲೀಸರು ತಾಳೆ ಹಾಕಿದಾಗ ಅಕ್ರಮ ಸಂಪತ್ತಿನ ಗಳಿಕೆ ಗೊತ್ತಾಯಿತು ಎಂದು ತಿಳಿದು ಬಂದಿದೆ.
ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ಸಂಬಂಧ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಕೆಗೆ ಪ್ರಾಸಿಕ್ಯೂಷನ್ ಅನುಮತಿ ಕೋರಿ ರಾಜ್ಯಪಾಲರಿಗೆ ಲೋಕಾಯುಕ್ತ ಪೊಲೀಸರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಪ್ರಕರಣದ ತನಿಖೆ ವೇಳೆ ಮಾಜಿ ಸಚಿವರ ಸಂಪತ್ತು ಶೋಧನಾ ಕಾರ್ಯ ಕುರಿತು ಕುತೂಹಲಕಾರಿ ಸಂಗತಿಗಳು ಬಯಲಾಗಿವೆ.
ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ಸಾರಿಗೆ (ಟ್ರಾವೆಲ್ಸ್ ಬಸ್‌ಗಳು) ಉದ್ಯಮದ ಬಗ್ಗೆ ಜಮೀರ್ ಉಲ್ಲೇಖಿಸಿದ್ದಾರೆ. ಇನ್ನು ಶಾಸಕ ಹಾಗೂ ಸಚಿವರಾಗಿ ಪಡೆದಿರುವ ಸಂಬಳ ಹೊರತುಪಡಿಸಿ ತಮ್ಮ ಆದಾಯದ ಮೂಲ ಟ್ರಾವೆಲ್ಸ್ ವ್ಯವಹಾರ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಂತೆಯೇ ಅವರ ವಾರ್ಷಿಕ 15 ಲಕ್ಷ ರು. ಆದಾಯ. ಆದರೆ, ಅವರ ಖರ್ಚು-ವೆಚ್ಚಗಳು ವಾರ್ಷಿಕ ಆದಾಯಕ್ಕಿಂತ ಹೆಚ್ಚಾಗಿದೆ. ಆದಾಯಕ್ಕಿಂತ ಒಟ್ಟಾರೆ 26 ಕೋಟಿ ರು.ಗಳನ್ನು ಕಾನೂನುಬಾಹಿರವಾಗಿ ಮಾಜಿ ಸಚಿವರು ಸಂಪಾದಿಸಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿರುವುದಾಗಿ ಸರ್ಕಾರದ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.
ಆರ್ಥಿಕ ಸಂಕಷ್ಟಕ್ಕೆ ತುತ್ತಾದ ಹಲವು ಜನರಿಗೆ ಜಮೀರ್ ಧಾರಾಳಿಯಾಗಿ ನೆರವು ನೀಡಿದ್ದಾರೆ. ತಾವು ಆರ್ಥಿಕ ಸಹಾಯ ಮಾಡಿದ ಜನರ ಜತೆ ಫೋಟೋ ತೆಗೆಸಿಕೊಂಡು ಅವುಗಳನ್ನು ಫೇಸ್‌ಬುಕ್‌ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ನೆರವು ಪಡೆದವರ ಸ್ವವಿವರನ್ನು ಮಾಜಿ ಸಚಿವರ ಸಿಬ್ಬಂದಿ ಪುಸ್ತಕದಲ್ಲಿ ಬರೆದಿಟ್ಟಿದ್ದರು. ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಮಾಜಿ ಸಚಿವರ ಫೇಸ್‌ಬುಕ್ ಖಾತೆಯಲ್ಲಿನ ಫೋಟೋಗಳನ್ನೂ ಲೋಕಾಯುಕ್ತ ಪೊಲೀಸರು ಜಾಲಾಡಿದ್ದಾರೆ. ಅದೇ ರೀತಿ ಜಮೀರ್ ಅವರ ಕಚೇರಿ ಮೇಲೆ ದಾಳಿ ನಡೆಸಿದಾಗ ಸಿಕ್ಕಿದ್ದ ನೋಂದಣಿ ಪುಸಕ್ತಗಳನ್ನು ಶೋಧಿಸಿದ ವೇಳೆ ದಾನ-ಧರ್ಮದ ಸುಮಾರು 2 ಕೋಟಿ ರು. ‘ಲೆಕ್ಕ’ ಲಭಿಸಿದೆ ಎಂದು ತಿಳಿದು ಬಂದಿದೆ.
ಕೊರೋನಾ ದುರಿತ ಕಾಲದಲ್ಲಿ ಮೂರು ವರ್ಷಗಳ ಕಾಲ ಸಾರಿಗೆ ಉದ್ಯಮ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿತ್ತು. ತಮ್ಮ ಆದಾಯದ ಮೂಲವಾಗಿದ್ದ ಉದ್ಯಮವೇ ಭಾರೀ ಆರ್ಥಿಕ ಸಂಕಷ್ಟಕ್ಕೀಡಾದ ಸಂದರ್ಭದಲ್ಲೂ ಜಮೀರ್ ಅವರು ‘ದಾನಿ’ ಆಗಿದ್ದರು. ಇದು ಲೋಕಾಯುಕ್ತ ಪೊಲೀಸರಿಗೆ ಮಾಜಿ ಸಚಿವರ ಹಿಂದಿರುವ ಆರ್ಥಿಕ ‘ಶಕ್ತಿ’ ಬಗ್ಗೆ ಪ್ರಶ್ನೆ ಮೂಡಿಸಿತ್ತು. ಆಗ ಅವರ ಹಣಕಾಸು ವಿವರ ಪರಿಶೀಲಿಸಿದಾಗ ಆದಾಯಕ್ಕೂ ಮೀರಿದ ಸಂಪತ್ತು ಗಳಿಕೆಗೆ ಪುರಾವೆಗಳು ಸಿಕ್ಕಿವೆ ಎಂದು ಮೂಲಗಳು ಹೇಳಿವೆ.
ಶಾಸಕರಾಗುವ ಮುನ್ನ ಬೆಂಗಳೂರಿನ ಸದಾಶಿವನಗರದ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್, ಮೈಸೂರಿನಲ್ಲಿ ನಿವೇಶನ ಹಾಗೂ ಲಕ್ಷದ ಲೆಕ್ಕದಲ್ಲಿ ಖಾತೆಯಲ್ಲಿ ಹಣವಿತ್ತು. ಶಾಸಕರಾದ ನಂತರ ಶಿವಾಜಿನಗರದಲ್ಲಿ 20 ಕೋಟಿ ರು.ಗೂ ಅಧಿಕ ಮೌಲ್ಯದ ವೈಭೋಪೇತ ಬಂಗಲೆ ಕಟ್ಟಿದ್ದಾರೆ. ಅದೇ ರೀತಿ ಸುಮಾರು 4 ಕೋಟಿ ರು. ವಿನಿಯೋಗಿಸಿ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದಾರೆ. ವಿದೇಶ ಪ್ರವಾಸಕ್ಕೆ ಕೋಟ್ಯಂತರ ರು. ಖರ್ಚು ಮಾಡಿದ್ದಾರೆ. ಈ ಎಲ್ಲವುಗಳ ಗುಣಕಾರ-ಭಾಗಾಕಾರ ಮಾಡಿದಾಗ ಆದಾಯಕ್ಕೂ ಮೀರಿದ ಖರ್ಚು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಆದಾಯಕ್ಕಿಂತ ಆಸ್ತಿ ಸಂಪಾದನೆ ಸಂಬಂಧ ಸುಮಾರು 10,000ಕ್ಕೂ ಹೆಚ್ಚಿನ ಬ್ಯಾಂಕ್ ಖಾತೆಗಳನ್ನು ಪೊಲೀಸರು ಜಾಲಾಡಿದ್ದಾರೆ. ಮಾಜಿ ಸಚಿವರ ಖಾತೆಗಳಿಂದ ಹಣ ವರ್ಗಾವಣೆ ಹಾಗೂ ಅವರಿಂದ ಆರ್ಥಿಕ ನೆರವು ಪಡೆದವರ ವಿವರ ಕಲೆ ಹಾಕಲು ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ