
ವೆಂಕಟೇಶ್ ಕಲಿಪಿ
ಬೆಂಗಳೂರು (ಜು.13): ಭ್ರಷ್ಟಾಚಾರ ಪ್ರಕರಣಗಳಲ್ಲಿ ಲೋಕಾಯುಕ್ತ ಸಂಸ್ಥೆ ತಪ್ಪು ಮಾಡಿದ ದೊಡ್ಡ ಮೀನುಗಳನ್ನು ಬಿಟ್ಟು, ಸಣ್ಣ ಮೀನುಗಳನ್ನು ಹಿಡಿದರೆ ಪ್ರಯೋಜನವಿಲ್ಲ ಎಂದಿರುವ ಹೈಕೋರ್ಟ್ ದೊಡ್ಡ ಮೀನುಗಳನ್ನು ಕೈಬಿಟ್ಟರೆ, ಸಣ್ಣ ಮೀನುಗಳು ನರಳುವುದಕ್ಕೆ ಹೈಕೋರ್ಟ್ ಅನುಮತಿಸುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದೆ.
60ರ ದಶಕದಲ್ಲಿ ಸರ್ಕಾರ ಕೆಲ ವ್ಯಕ್ತಿಗಳಿಗೆ ಮಂಜೂರು ಮಾಡಿದ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ತಿದ್ದಿದ ಆರೋಪದ ಮೇಲೆ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ 2017ರಿಂದ ತಮ್ಮ ವಿರುದ್ಧ ನಡೆಯುತ್ತಿರುವ ವಿಚಾರಣೆ ರದ್ದುಪಡಿಸುವಂತೆ ಕೋರಿ ಮಾಗಡಿಯ ಕೇಸ್ ವರ್ಕರ್‌ಗಳಾದ ರಮೇಶ್ ಮತ್ತು ಸುಮಿತ್ರಾ ಎಂಬುವವರು ಹೈಕೋರ್ಟ್‌ಗೆ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಹೀಗೆ ನುಡಿದಿದೆ.
ಪ್ರಕರಣದಲ್ಲಿ ದೊಡ್ಡ ಮೀನುಗಳಾದ ತಹಸೀಲ್ದಾರ್, ಡಿಡಿಎಲ್ಆರ್ ಮತ್ತು ಸರ್ವೇಯರ್ ವಿರುದ್ಧ ಪ್ರತ್ಯೇಕ ಎಫ್ಐಆರ್ ದಾಖಲಿಸುವ ಬಗ್ಗೆ ಲೋಕಾಯುಕ್ತ ಸಂಸ್ಥೆಯಿಂದ ಸೂಚನೆಗಳನ್ನು ಪಡೆದು ತಿಳಿಸಿ ಎಂದು ಸೂಚಿಸಿ, ವಿಚಾರಣೆಯನ್ನು ಜು.15ಕ್ಕೆ ವಿಚಾರಣೆ ಮುಂದೂಡಿತು.
ಹಾಗೆಯೇ, ಅರ್ಜಿದಾರರ ವಿರುದ್ಧದ ಲೋಕಾಯುಕ್ತ ಕೋರ್ಟ್ ವಿಚಾರಣಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಈ ಹಿಂದೆ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಮುಂದಿನ ವಿಚಾರಣೆವರೆಗೆ ವಿಸ್ತರಿಸಿದೆ.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ಹಾಜರಾಗಿ ಲೋಕಾಯುಕ್ತ ಪೊಲೀಸರು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 1987ರ ಸೆಕ್ಷನ್ 13ರಡಿ ಅರ್ಜಿದಾರರ ವಿರುದ್ಧ ದಾಖಲಿಸಿರುವ ದೂರು ರದ್ದುಪಡಿಸುವಂತೆ ಕೋರಿ ಆರೋಪಿಗಳು ಈ ಅರ್ಜಿ ಸಲ್ಲಿಸಿದ್ದಾರೆ ಎಂದು ವಿವರಿಸಿದರು. ಅದಕ್ಕೆ ಲೋಕಾಯುಕ್ತ ಪರ ವಕೀಲರು, ಕರಡು ದೋಷಾರೋಪ ಪಟ್ಟಿ ಸಿದ್ಧವಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಆಗ ಅರ್ಜಿದಾರರ ಪರ ವಕೀಲರು, ಕಂದಾಯ ತಿದ್ದುಪಡಿಗಳನ್ನು ರದ್ದುಪಡಿಸಲು ಸರ್ಕಾರ ಆದೇಶಿಸಿತ್ತು. ಆ ಆದೇಶವನ್ನು ನ್ಯಾಯಾಲಯ ರದ್ದುಪಡಿಸಿದ್ದು, ಮೂಲ ಮಂಜೂರುದಾರರ ಹೆಸರಿಗೆ ಭೂಮಿ ಮಂಜೂರು ಮಾಡಿದ ಆದೇಶ ಎತ್ತಿಹಿಡಿಯಲಾಗಿದೆ. ಪ್ರಕರಣದಲ್ಲಿ ಆರೋಪಿಗಳಾಗಿದ್ದ ಅಧಿಕಾರಿಗಳ ವಿರುದ್ಧದ ಪ್ರಕರಣವನ್ನು ಸರ್ಕಾರವೇ ಹಿಂಪಡೆದಿದೆ. ಈ ಇಬ್ಬರು ಅರ್ಜಿದಾರರು ಕೇವಲ ಕೇಸ್ ವರ್ಕರ್. ಇತರೆ ತಹಸೀಲ್ದಾರ್, ಡಿಡಿಎಲ್ಆರ್ ಇತರೆ ದೊಡ್ಡ ಅಧಿಕಾರಿಗಳ ಮೇಲಿನ ಪ್ರಕರಣ ಹಿಂಪಡೆಯಲಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಈ ಎಲ್ಲ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಿಸುತ್ತೀರಾ ಎಂದು ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ ಲೋಕಾಯುಕ್ತ ಪರ ವಕೀಲರು ತನಿಖಾಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸುತ್ತಾರೆ. ಹೆಚ್ಚಿನ ತನಿಖೆ ಅಗತ್ಯವಿದ್ದರೆ ಮಾಡುತ್ತಾರೆ ಎಂದು ಸಮಜಾಯಿಷಿ ನೀಡಿದರು. ಆಗ ನ್ಯಾಯಪೀಠ, ನೀವು ಬಯಸಿದರೆ ತಹಸೀಲ್ದಾರ್, ಡಿಡಿಎಲ್ಆರ್ ಮತ್ತು ಸರ್ವೇಯರ್ ಮೇಲೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ಎಂದು ಹೇಳಿತು.
ನ್ಯಾಯಾಲಯ ಈ ಅರ್ಜಿದಾರರನ್ನು (ಕೇಸ್ ವರ್ಕರ್ಗಳನ್ನು) ಬಿಡಬಾರದು. ತಹಸೀಲ್ದಾರ್, ಡಿಡಿಎಲ್ಆರ್ ಮತ್ತು ಸರ್ವೇಯರ್ ಮೇಲೆ ಪ್ರತ್ಯೇಕ ಎಫ್ಐಆರ್ ದಾಖಲಿಸುತ್ತೇವೆ ಎಂಬುದಾಗಿ ತಿಳಿಸಿ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿ ಎಂದು ಲೋಕಾಯುಕ್ತ ಪೊಲೀಸರಿಗೆ ಮೌಖಿಕವಾಗಿ ಸೂಚಿಸಿತು.
ಮೊದಲಿಗೆ ನಾವು ಯಾವ ಮೀನು ತಪ್ಪು ಮಾಡಿರುವುದಾಗಿ ತಿಳಿಯಬೇಕಿದೆ, ಯಾವೆಲ್ಲಾ ದೊಡ್ಡ ಮೀನು ತಪ್ಪು ಮಾಡಿವೆ ಎಂಬುದಾಗಿ ದಾಖಲೆಗಳು ಇದೆಯಲ್ಲವೇ? ಅದು ನ್ಯಾಯಾಲಯ ಆದೇಶದಲ್ಲೇ ಉಲ್ಲೇಖವಾಗಿದೆಯಲ್ಲವೇ? ದೊಡ್ಡ ಮೀನು ಯಾರು ಎಂಬುದು ನಿಮಗೆ ಗೊತ್ತಿದೆ. ತಹಸೀಲ್ದಾರ್, ಡಿಡಿಎಲ್ಆರ್ ಮತ್ತು ಸರ್ವೇಯರ್ ದೊಡ್ಡ ಮೀನುಗಳು. ಅವರನ್ನು ಪ್ರಕರಣದಿಂದ ಕೈ ಬಿಟ್ಟೀದ್ದೀರಿ. ಕೇಸ್ ವರ್ಕರ್ (ಸಣ್ಣ ಮೀನು) ಅವರನ್ನು ಹಿಡಿದುಕೊಂಡು ಕೊಂಡು ಆಟವಾಡಿಸುತ್ತಿದ್ದೀರಿ ಎಂದು ಪೀಠ ಮಾರ್ಮಿಕವಾಗಿ ನುಡಿಯಿತು.
ಅದಕ್ಕೆ ಲೋಕಾಯುಕ್ತ ಪರ ವಕೀಲರು, ನ್ಯಾಯಪೀಠದ ಅಭಿಪ್ರಾಯದ ಬಗ್ಗೆ ಲೋಕಾಯುಕ್ತ ತನಿಖಾಧಿಕಾರಿಗಳಿಂದ ಅಗತ್ಯ ಸಲಹೆ-ಸೂಚನೆ ಪಡೆದು ನ್ಯಾಯಾಲಯಕ್ಕೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು.
ಅಂತಿಮವಾಗಿ ನ್ಯಾಯಪೀಠ, ಅರ್ಜಿಯನ್ನು ಮುಂದಿನ ವಿಚಾರಣೆ ವೇಳೆ ಮುಕ್ತಾಯಗೊಳಿಸೋಣ ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ