
ಚಿತ್ರದುರ್ಗ, (ಜುಲೈ 29): ಚಿತ್ರದುರ್ಗ ಜಿಲ್ಲೆಯಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ಆರೋಪದ ಮೇಲೆ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ಇಬ್ಬರು ಅಧಿಕಾರಿಗಳ ಮೇಲೆ ಏಕಕಾಲದ ದಾಳಿ ನಡೆಸಿದ್ದಾರೆ.
ಹಿರಿಯೂರು ಟಿಹೆಚ್‌ಒ ಡಾ.ವೆಂಕಟೇಶ್ ಮೇಲೆ ದಾಳಿ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಆರೋಗ್ಯಾಧಿಕಾರಿ (ಟಿಹೆಚ್‌ಒ) ಡಾ.ವೆಂಕಟೇಶ್ ಅವರ ಮೇಲೆ ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ಮತ್ತು ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆದಿದೆ. ಹಿರಿಯೂರು ಪಟ್ಟಣದ ಯರಗುಂಟೇಶ್ವರ ಬಡಾವಣೆಯಲ್ಲಿರುವ ಡಾ.ವೆಂಕಟೇಶ್ ಅವರ ಮನೆ ಹಾಗೂ ಆದಿವಾಲ ಗ್ರಾಮದ ಮನೆ ಮತ್ತು ಕ್ಲಿನಿಕ್‌ನಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಆದಾಯಕ್ಕಿಂತ ಅಧಿಕ ಆಸ್ತಿ ಮತ್ತು ಹಣ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಜೂ. ಇಂಜಿನಿಯರ್ ಅಂಜನ್ ಮೂರ್ತಿ ಮನೆಮೇಲೂ ಲೋಕಾ ದಾಳಿ:
ಇದೇ ಸಂದರ್ಭದಲ್ಲಿ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜೂನಿಯರ್ ಇಂಜಿನಿಯರ್ ಅಂಜನ್ ಮೂರ್ತಿ ಅವರಿಗೆ ಸಂಬಂಧಿಸಿದ ಏಳು ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಬೆಂಗಳೂರು, ಯಲಹಂಕ, ಗೌರಿಬಿದನೂರು, ಮತ್ತು ತುಮಕೂರಿನ ವಿವಿಧ ಸ್ಥಳಗಳಲ್ಲಿ ಏಕಕಾಲಕ್ಕೆ ಈ ಕಾರ್ಯಾಚರಣೆ ನಡೆದಿದೆ. ದಾಳಿಯ ವೇಳೆ ಬೆಂಗಳೂರಿನಲ್ಲಿ ಮೂರು ವಾಸದ ಮನೆಗಳು ಮತ್ತು ಒಂದು ಕಮರ್ಷಿಯಲ್ ಕಾಂಪ್ಲೆಕ್ಸ್‌ನ ದಾಖಲೆಗಳು ಪತ್ತೆಯಾಗಿವೆ. ಈ ಕಾರ್ಯಾಚರಣೆಯಲ್ಲಿ ಚಿಕ್ಕಬಳ್ಳಾಪುರ, ಬೆಂಗಳೂರು, ಮತ್ತು ತುಮಕೂರಿನ ಲೋಕಾಯುಕ್ತ ತಂಡಗಳು ಭಾಗವಹಿಸಿವೆ.
ತನಿಖೆ ಮುಂದುವರಿಕೆ
ಇಬ್ಬರು ಅಧಿಕಾರಿಗಳ ವಿರುದ್ಧ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ಲೋಕಾಯುಕ್ತ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ದಾಖಲೆಗಳ ಪರಿಶೀಲನೆ ಮುಂದುವರಿದಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ವರದಿ ಸಿದ್ಧಪಡಿಸಲಾಗುತ್ತಿದೆ. ಲೋಕಾಯುಕ್ತ ಈ ದಾಳಿಗಳು ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದೆ.
ಬಿಡಿಎ ಓಂಪ್ರಕಾಶ್ ಮೇಲೂ ಲೋಕಾಯುಕ್ತ ದಾಳಿ:
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಓಂಪ್ರಕಾಶ್‌ಗೆ ಸಂಬಂಧಿಸಿದಂತೆ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಡಿವೈಎಸ್‌ಪಿ ಶ್ರೀನಿವಾಸ್ ನೇತೃತ್ವದಲ್ಲಿ ನಾಲ್ವರು ಅಧಿಕಾರಿಗಳ ತಂಡವು ಓಂಪ್ರಕಾಶ್‌ರ ಕಚೇರಿ ಹಾಗೂ ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿರುವ ಆತನ ಮನೆಯ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿತು. ಸರ್ಚ್ ವಾರಂಟ್ ಪಡೆದು ನಡೆಸಿರುವ ಕಾರ್ಯಾಚರಣೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.
ಕಳೆದ 26 ವರ್ಷಗಳಿಂದ ಬಿಡಿಎ ತೋಟಗಾರಿಕಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಓಂಪ್ರಕಾಶ್ ಮೇಲೆ ಭ್ರಷ್ಟಾಚಾರ, ಆದಾಯ ಮೀರಿದ ಆಸ್ತಿ ಗಂಭೀರ ಆರೋಪಗಳು ಕೇಳಿಬಂದಿವೆ.
ಹಾಸನದಲ್ಲೂ ಲೋಕಾಯುಕ್ತ ದಾಳಿ:
ಇದೇ ವೇಳೆ, ಲೋಕಾಯುಕ್ತ ಅಧಿಕಾರಿಗಳು ಹಾಸನದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಕಾರ್ಯಪಾಲಕ ಇಂಜಿನಿಯರ್ ಜಯಣ್ಣ ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ದಾಳಿ ನಡೆಸಿದ್ದಾರೆ. ಜಯಣ್ಣ ಅವರ ಹಾಸನದ ಚನ್ನಪಟ್ಟಣ ಹೌಸಿಂಗ್ ಬೋರ್ಡ್‌ನ ಮನೆ, ಜಯನಗರದ ಮನೆ, ಕೊಡಗಿನ ಕುಶಾಲನಗರದ ಫಾರ್ಮ್‌ಹೌಸ್, ಮತ್ತು ಪೇಂಟ್ಸ್ ಅಂಗಡಿ ಸೇರಿದಂತೆ ಐದು ಕಡೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಆರೋಪದ ಮೇಲೆ ಈ ಕಾರ್ಯಾಚರಣೆ ನಡೆಸುವ ಮೂಲಕ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತರು ಸಮರ ಸಾರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ