ರಂಭಾಪುರಿ ಶ್ರೀ ವಿರುದ್ಧ ದಲಿತ ಮಠಾಧೀಶರ ಕಿಡಿ

Kannadaprabha News   | Kannada Prabha
Published : Jul 29, 2025, 07:01 AM IST
Rambhapuri Swamiji

ಸಾರಾಂಶ

ಜಾತಿ ಮಠಗಳಿಂದ ಸಮಾಜ ಕಲುಷಿತಗೊಂಡಿದೆ ಎಂದು ಹೇಳಿಕೆ ನೀಡಿದ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ ಕಿಡಿ ಕಾರಿದೆ.

 ದಾವಣಗೆರೆ :  ಜಾತಿ ಮಠಗಳಿಂದ ಸಮಾಜ ಕಲುಷಿತಗೊಂಡಿದೆ ಎಂದು ಹೇಳಿಕೆ ನೀಡಿದ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ ಕಿಡಿ ಕಾರಿದೆ. ಹಿರಿಯರು, ವಯೋವೃದ್ಧರೂ ಆಗಿರುವ ಶ್ರೀಗಳು ತಮ್ಮ ಹೇಳಿಕೆ ಹಿಂಪಡೆಯಬೇಕು. ಜೊತೆಗೆ ಸಂಕುಚಿತ ಮನೋಭಾವ ಬಿಟ್ಟು, ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹಿತವಚನ ಬೋಧಿಸಿವೆ. ಶ್ರೀಗಳ ಹೇಳಿಕೆಗೆ ಅಚ್ಚರಿ ವ್ಯಕ್ತಪಡಿಸಿರುವ ಒಕ್ಕೂಟವು, ಶ್ರೀಗಳ ಹೇಳಿಕೆ ಇದೇ ರೀತಿ ಮುಂದುವರಿದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿವೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ, ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ರಂಭಾಪುರಿ ಶ್ರೀಗಳ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಜಾತಿ ಮಠಗಳಿಂದ ಸಮಾಜದ ಕೆಲಸ:

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ಶ್ರೇಣೀಕೃತ, ಜಾತಿ ವ್ಯವಸ್ಥೆ ದೇಶದಲ್ಲಿದೆ. ಜಾತಿ ಕಾರಣಕ್ಕೆ ಸಮಾಜದಿಂದ ದೂರ ಉಳಿದ ಸಮುದಾಯಗಳು ಸಾಂಸ್ಕೃತಿಕ ನಾಯಕರ ಹೆಸರಿನಲ್ಲಿ ಮಠ ಕಟ್ಟಿಕೊಂಡು, ಸಮಾಜ ಸಂಘಟನೆ ಜೊತೆ ಸನ್ಮಾರ್ಗ ತೋರುತ್ತಿವೆ. ಸಾಮರಸ್ಯದ, ಸೌಹಾರ್ದತೆಯ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿವೆ. ಹೀಗಿದ್ದರೂ ರಂಭಾಪುರಿ ಶ್ರೀಗಳ ಹೇಳಿಕೆ ನೀಡಿದ್ದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ತಿಳಿಸಿದರು.

ಮನಸಿಗೆ ನೋವು ತಂದಿದೆ:

ಮಾದಾರ ಚನ್ನಯ್ಯ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ, ರಂಭಾಪುರಿ ಪೀಠಕ್ಕೆ ಧ್ಯೇಯವಿದೆ. ಮಾನವ ದರ್ಮಕ್ಕೆ ಜಯವಾಗಲಿ ಎನ್ನುವ ಪೀಠ ಅದು. ನಾವೆಲ್ಲಾ ಜಾತಿ, ಧರ್ಮದವರೂ ಇದ್ದೇವೆ. ಎಲ್ಲ ಜಾತಿ, ವರ್ಗ, ಸಮುದಾಯಗಳಿಗೆ ಗೌರವಿಸುವ ಕೆಲಸ ಮಾಡಿದರೆ ರಂಭಾಪುರಿ ಪೀಠಾಧ್ಯಕ್ಷರಿಗೂ ಗೌರವ. ಮಾನವ ಧರ್ಮಕ್ಕೆ ತದ್ವಿರುದ್ಧವಾಗಿ ರಂಭಾಪುರಿ ಶ್ರೀಗಳು ಹೇಳಿಕೆ ನೀಡಿರುವುದು ನಮ್ಮ ಮನಸ್ಸಿಗೆ ನೋವುಂಟು ಮಾಡಿದೆ ಎಂದು ಹೇಳಿದರು.

ಶಿಕ್ಷಣ, ಸಂಸ್ಕಾರ ನೀಡುವ ಮಠಗಳು:

ಭಗೀರಥ ಉಪ್ಪಾರ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಪೀಠ ಸ್ಥಾಪಿಸಿ, ಶಿಕ್ಷಣ, ಸಂಸ್ಕಾರ ನೀಡುವ ಕೆಲಸವನ್ನು ಜಾತಿ ಮಠಗಳು ಮಾಡುತ್ತಿವೆ. ಈ ಹಿಂದಿನಿಂದಲೂ ಮೇಲ್ವರ್ಗದ ಸ್ವಾಮಿಗಳು ಶಿಕ್ಷಣ, ಸಂಸ್ಕಾರ ಎಲ್ಲರಿಗೂ ನೀಡಿದ್ದರೆ ಇಂದು ಜಾತಿ ಮಠಗಳೇ ಇರುತ್ತಿರಲಿಲ್ಲ. ರಂಭಾಪುರಿ ಸೇರಿದಂತೆ ಪೀಠಾಧೀಶರು ಹಿಂದುಳಿದ, ಶೋಷಿತ, ದಲಿತ ಸಮುದಾಯದವರನ್ನು ಪಕ್ಕಕ್ಕೂ ಕೂಡಿಸುವುದಿಲ್ಲ. ಇದೇ ವರ್ಗದ ಎಷ್ಟು ಜನರನ್ನು ತಮ್ಮ ಮಠ, ಕಚೇರಿ, ಸಂಸ್ಥೆಗಳಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದಾರೆ ಎಂದು ಪ್ರಶ್ನಿಸಿದರು.

ಅನುದಾನ ವಾಪಸ್‌ ಕೊಡ್ತೀರಾ:

ರಂಭಾಪುರಿ ಪೀಠದ ಲಾಂಛನಕ್ಕೆ ಗೌರವಪೂರ್ವಕ ಶರಣು. ಶ್ರೀಪೀಠ ಜಾತ್ಯತೀತವೇ? ಸ್ವಜಾತಿಯವರನ್ನು ಹೊರತುಪಡಿಸಿ ಎಷ್ಟು ಜನರಿಗೆ ದೀಕ್ಷೆ ಕೊಟ್ಟು, ಪೀಠಾಧ್ಯಕ್ಷರಾಗಿ ಮಾಡಿದ್ದೀರಿ ಎಂದು ರಂಭಾಪುರಿ ಶ್ರೀಗಳಿಗೆ ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಪ್ರಶ್ನಿಸಿದರು.

ಶ್ರೀಪೀಠದ ಅನ್ನ, ಅಕ್ಷರ ದಾಸೋಹವನ್ನು ಸರ್ವ ಸಮುದಾಯಗಳಿಗೂ ಮಾಡುತ್ತಿದ್ದೀರಾ? ಶ್ರೀ ಪೀಠದ ಸಂಸ್ಥೆಗಳಲ್ಲಿ ರೋಸ್ಟರ್ ಹೊರತುಪಡಿಸಿ, ಎಷ್ಟು ಜನ ಇತರೆ ಸಮುದಾಯದವರಿಗೆ ಉದ್ಯೋಗ ನೀಡಿದ್ದೀರಿ. ನಮ್ಮ ಮಠಗಳಿಗೆ ಕೊಟ್ಟ ಅನುದಾನ ಸಮಾಜಕ್ಕೆ ಸದ್ಬಳಕೆ ಮಾಡಿದ್ದೇವೆ. ನೀವು ಬೇಡ ಜಂಗಮ ಹೆಸರಿನಲ್ಲಿ ಪಡೆದ ಅನುದಾನ ಸರ್ಕಾರಕ್ಕೆ ವಾಪಸ್‌ ಕೊಡುತ್ತೀರಾ ಎಂದು ಸವಾಲು ಹಾಕಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!