ರಾಜ್ಯದ ಒಂಬತ್ತು ಚೆಕ್‌ಪೋಸ್ಟ್‌ಗಳ ಮೇಲೆ ದಾಳಿ ನಡೆಸಿ 10 ಲಕ್ಷ ರು. ಗಿಂತ ಹೆಚ್ಚಿನ ಮೊತ್ತ ಜಪ್ತಿ
ಬೆಂಗಳೂರು(ಅ.01): ಸಾರಿಗೆ ಇಲಾಖೆಯ ಚೆಕ್‌ಪೋಸ್ಟ್‌ಗಳಿಗೆ ನಸುಕಿನ ವೇಳೆ ಲೋಕಾಯುಕ್ತ ಪೋಲಿಸರು ಶಾಕ್ ನೀಡಿದ್ದು, ರಾಜ್ಯದ ಒಂಬತ್ತು ಚೆಕ್‌ಪೋಸ್ಟ್‌ಗಳ ಮೇಲೆ ದಾಳಿ ನಡೆಸಿ 10 ಲಕ್ಷ ರು. ಗಿಂತ ಹೆಚ್ಚಿನ ಮೊತ್ತವನ್ನು ಜಪ್ತಿ ಮಾಡಿಕೊಂಡಿದ್ದಾರೆ. ಶುಕ್ರವಾರ ಮುಂಜಾನೆ 4.30ರ ಹೊತ್ತಿಗೆ ಶೋಧನೆ ಕಾರ್ಯ ಪ್ರಾರಂಭಿಸಿ ಅಕ್ರಮ ಹಣ ಪತ್ತೆ ಹಚ್ಚಲಾಗಿದೆ. ಬೆಂಗಳೂರಿನ ಅತ್ತಿಬೆಲೆ ಚೆಕ್‌ಪೋಸ್ಟ್, ವಿಜಯಪುರದ ಧೂಳ್‌ಖೇಡ್ ಚೆಕ್‌ಪೋಸ್ಟ್, ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಂಗನಹಳ್ಳಿ ಚೆಕ್‌ಪೋಸ್ಟ್, ಬೀದರ್ ಜಿಲ್ಲೆ ಹುಮ್ನಾಬಾದ್ ತಾಲೂಕಿನ ಬೋಲ್ಕೆರೆ ಚೆಕ್‌ಪೋಸ್ಟ್, ಬಳ್ಳಾರಿಯ ಗೋದಾಳ್ ಚೆಕ್‌ಪೋಸ್ಟ್, ವಿಜಯನಗರದ ಹೊಸಪೇಟೆ ಚೆಕ್‌ಪೋಸ್ಟ್, ಕೊಪ್ಪಳದ ಬೂದಗಂಬ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಚೆಕ್‌ಪೋಸ್ಟ್, ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗ್ಲಿ ಚೆಕ್‌ಪೋಸ್ಟ್‌ಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಲಾಗಿದೆ.
ಕಿಟಕಿಯಿಂದ ಹಣ ಎಸೆದ ಅಧಿಕಾರಿ
ಬೆಂಗಳೂರಿನ ಅತ್ತಿಬೆಲೆ ಚೆಕ್‌ಪೋಸ್ಟ್ ಮೇಲೆ ದಾಳಿ ನಡೆಸಿ 62,227 ರು. ಅಕ್ರಮ ಹಣವನ್ನು ಜಪ್ತಿ ಮಾಡಲಾಗಿದೆ. ಶೋಧನೆಯ ವೇಳೆಯಲ್ಲಿ ಹಿರಿಯ ಮೋಟಾರು ವಾಹನ ನಿರೀಕ್ಷಕಿ ಲಕ್ಷ್ಮಿ ಅವರು ಚೆಕ್‌ಪೋಸ್ಟ್‌ನ ಕಿಟಕಿಯಿಂದ ಹೊರಗಡೆ 14 ಸಾವಿರ ರು. ಅಕ್ರಮ ಹಣವನ್ನು ಎಸೆದರು. ತಕ್ಷಣ ಪೊಲೀಸರು ಹಣ ವಶಪಡಿಸಿಕೊಂಡಿದ್ದಾರೆ.
ಒತ್ತುವರಿ ತೆರವು ತಡೆದ ಲೋಕಾಯುಕ್ತ ಬಗ್ಗೆ ಹೈಕೋರ್ಟ್ ಅತೃಪ್ತಿ
ವಿಜಯಪುರದ ಧೂಳ್‌ಖೇಡ್ ಚೆಕ್‌ಪೋಸ್ಟ್‌ನಲ್ಲಿ 4.53 ಲಕ್ಷ ರು., ಬೆಳಗಾವಿಯ ಕೊಂಗನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ 3.62 ಲಕ್ಷ ರು., ಬೀದರ್‌ನ ಬೋಲ್ಕೆರೆ ಚೆಕ್‌ಪೋಸ್ಟ್‌ನಲ್ಲಿ 1,54 ಲಕ್ಷ ರು.,ಬಳ್ಳಾರಿಯ ಗೋದಾಳ್ ಚಿಕ್‌ಪೋಸ್ಟ್‌ನಲ್ಲಿ 54,900 ರು.,ಚಾಮರಾಜನಗರದ ಗುಂಡ್ಲುಪೇಟೆ ಚೆಕ್‌ಪೋಸ್ಟ್‌ನಲ್ಲಿ 9,779 ರು. ಮತ್ತು ಕೋಲಾರದ ನಂಗ್ಲಿ ಚೆಕ್‌ಪೋಸ್ಟ್‌ನಲ್ಲಿ 6,584 ರು. ನಗದು ಪತ್ತೆಯಾಗಿದೆ. ಒಟ್ಟಾರೆ ಲೋಕಾಯುಕ್ತ ಪೊಲೀಸರು 10,87,274 ರು. ಜಪ್ತಿ ಮಾಡಿದ್ದಾರೆ.
ವಿಜಯನಗರದ ಹೊಸಪೇಟೆ ಚೆಕ್‌ಪೋಸ್ಟ್, ಕೊಪ್ಪಳದ ಬೂದಗುಂಬ ಚೆಕ್‌ಪೋಸ್ಟ್ ಮತ್ತು ಕೋಲಾರ ಜಿಲ್ಲೆ ನಂಗ್ಲಿ ಚೆಕ್‌ಪೋಸ್ಟ್ ಮೇಲೆ ಕಾರ್ಯಾಚರಣೆ ಕೈಗೊಂಡಿದ್ದ ವೇಳೆ ಚೆಕ್‌ಪೋಸ್ಟ್ ನಲ್ಲಿ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಇರಲಿಲ್ಲ. ಈ ಬಗ್ಗೆ ಮುಂದಿನ ಕ್ರಮ ಜರುಗಿಸಲಾಗಿದೆ.
ಖಚಿತ ಮಾಹಿತಿ ಮೇಲೆ ದಾಳಿ:
ಕಳೆದ ಜೂನ್ ತಿಂಗಳಲ್ಲಿ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ವಿಜಯಪುರಕ್ಕೆ ಭೇಟಿ ನೀಡಿದ ವೇಳೆ ಸಾರ್ವಜನಿಕರು ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ಸಾರಿಗೆ ಇಲಾಖೆಯ ಚೆಕ್‌ಪೋಸ್ಟ್‌ನಲ್ಲಿ ನಡೆಯುತ್ತಿರುವ ಅವ್ಯವಹಾರ ಮತ್ತು ಅಕ್ರಮಗಳ ಬಗ್ಗೆ ಮೌಖಿಕವಾಗಿ ದೂರು ನೀಡಿದ್ದರು. ಈ ಬಗ್ಗೆ ಲೋಕಾಯುಕ್ತರು ಸ್ವಯಂಪ್ರೇರಿತ ದೂರನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡ ಅಧಿಕಾರಿಗಳಿಂದ ವರದಿ ತರಿಸಿಕೊಂಡಿದ್ದರು. ವರದಿಯಲ್ಲಿ ಸಾರಿಗೆ ಇಲಾಖೆ ಚೆಕ್‌ಪೋಸ್ಟ್‌ಗಳಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ತಿಳಿಸಲಾಗಿತ್ತು. ವರದಿ ಆಧರಿಸಿ ಲೋಕಾಯುಕ್ತರು ಪೊಲೀಸ್ ವಿಭಾಗಕ್ಕೆ ಸೂಚನೆ ನೀಡಿದ್ದರಿಂದ ಶೋಧ ಕಾರ್ಯ ನಡೆಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.