ಲಂಚ ಪ್ರಕರಣ: ಬಿಜೆಪಿ ಶಾಸಕ ಮಾಡಾಳು ಬಂಧನಕ್ಕೆ ಲೋಕಾಯುಕ್ತ ಸಿದ್ಧತೆ

Published : Mar 04, 2023, 06:25 AM IST
ಲಂಚ ಪ್ರಕರಣ: ಬಿಜೆಪಿ ಶಾಸಕ ಮಾಡಾಳು ಬಂಧನಕ್ಕೆ ಲೋಕಾಯುಕ್ತ ಸಿದ್ಧತೆ

ಸಾರಾಂಶ

ಸರ್ಕಾರಿ ಸ್ವಾಮ್ಯದ ಕೆಎಸ್‌ಡಿಎಲ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಾಡಾಳು ವಿರೂಪಾಕ್ಷಪ್ಪ. ಈ ನಡುವೆ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಬಂಧಿಸಲು ಸಜ್ಜಾಗುತ್ತಿರುವ ಲೋಕಾಯುಕ್ತ ಪೊಲೀಸರು. 

ಬೆಂಗಳೂರು(ಮಾ.04):  ಲಂಚ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಪ್ರಾಥಮಿಕ ಮಾಹಿತಿ ವರದಿಯಲ್ಲಿ (ಎಫ್‌ಐಆರ್‌) ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರೇ ಮೊದಲನೇ ಆರೋಪಿಯಾಗಿದ್ದು, ಎರಡನೇ ಆರೋಪಿಯಾಗಿ ಅವರ ಪುತ್ರ ಹಾಗೂ ಬೆಂಗಳೂರು ಜಲಮಂಡಳಿಯ ಮುಖ್ಯ ಲೆಕ್ಕಪರಿಶೋಧಕ ಪ್ರಶಾಂತ್‌ ಹೆಸರು ಉಲ್ಲೇಖವಾಗಿದೆ. ಇದರ ಬೆನ್ನಲ್ಲೇ ಶುಕ್ರವಾರ ಮಾಡಾಳು ವಿರೂಪಾಕ್ಷಪ್ಪ ಅವರು ಸರ್ಕಾರಿ ಸ್ವಾಮ್ಯದ ಕೆಎಸ್‌ಡಿಎಲ್‌ (ಕರ್ನಾಟಕ ಸೋಫ್ಸ್‌ ಅಂಡ್‌ ಡಿಟರ್ಜೆಂಟ್ಸ್‌ ಲಿ.) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ನಡುವೆ ಲೋಕಾಯುಕ್ತ ಪೊಲೀಸರು ಮಾಡಾಳು ವಿರೂಪಾಕ್ಷಪ್ಪ ಅವರನ್ನು ಬಂಧಿಸಲು ಸಜ್ಜಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಲಂಚ ಪ್ರಕರಣದಲ್ಲಿ ತಮ್ಮ ಪುತ್ರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಬೆನ್ನಲ್ಲೇ ಬಂಧನ ಭೀತಿಗೊಳಗಾಗಿ ತಲೆಮರೆಸಿಕೊಂಡಿರುವ ಮಾಡಾಳು ವಿರೂಪಾಕ್ಷಪ್ಪ ಅವರು ಶನಿವಾರ ಬೆಳಗ್ಗೆ ಹೊತ್ತಿಗೆ ಬಂಧನವಾಗುವ ಸಾಧ್ಯತೆಗಳಿವೆ.
ಪುತ್ರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದ ಮಾಹಿತಿ ತಿಳಿದ ಕೂಡಲೇ ತಮ್ಮ ಸ್ವಕ್ಷೇತ್ರ ಚನ್ನಗಿರಿಯಲ್ಲಿದ್ದ ವಿರೂಪಾಕ್ಷಪ್ಪ ಅವರು, ರಾತ್ರೋರಾತ್ರಿ ತಮ್ಮ ಹಿರಿಯ ಮಗ ಮಲ್ಲಿಕಾರ್ಜುನ್‌ ಜತೆ ಬೆಂಗಳೂರಿಗೆ ಬಂದಿದ್ದಾರೆ. ಅಷ್ಟರಲ್ಲಿ ಪ್ರಕರಣದ ಕುರಿತು ದಾಖಲಾದ ಎಫ್‌ಐಆರ್‌ನಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿರುವ ವಿಷಯ ಗೊತ್ತಾಗಿ ಶಾಸಕರು ಅಜ್ಞಾತವಾಗಿದ್ದಾರೆ. ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲದೆ ಶುಕ್ರವಾರ ಬೆಳಗ್ಗೆ ತಮ್ಮ ಹುದ್ದೆಗೆ ಕೆಎಸ್‌ಡಿಎಲ್‌ ಅಧ್ಯಕ್ಷ ಹುದ್ದೆಗೆ ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗಳಿಗೆ ಬೆಂಬಲಿಗರ ಮೂಲಕವೇ ವಿರೂಪಾಕ್ಷಪ್ಪ ಕಳುಹಿಸಿಕೊಟ್ಟಿದ್ದಾರೆ.

ಹೇಗಿತ್ತು ಲೋಕಾಯುಕ್ತದ 'ಆಪರೇಷನ್‌ ಮಾಡಾಳ್' ಕಾರ್ಯಾಚರಣೆ? ಪಿನ್‌ ಟು ಪಿನ್ ಮಾಹಿತಿ..

ಚನ್ನಗಿರಿಯಲ್ಲಿ ಗುರುವಾರ ರಾತ್ರಿ ಕೊನೆ ಬಾರಿಗೆ ಶಾಸಕ ವಿರೂಪಾಕ್ಷಪ್ಪ ಕಾಣಿಸಿಕೊಂಡಿದ್ದಾರೆ. ಇದಾದ ನಂತರ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಬೆಂಗಳೂರಿಗೆ ಬಂದಿರುವ ಮಾಹಿತಿ ಇದೆ. ಹೀಗಾಗಿ ನಗರದಲ್ಲಿ ಹುಡುಕಾಟ ನಡೆದಿದ್ದು, ಶನಿವಾರ ಬೆಳಗ್ಗೆ ಹೊತ್ತಿಗೆ ಅವರನ್ನು ಪತ್ತೆ ಹಚ್ಚುತ್ತೇವೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಡೀಲ್‌ಗೆ ಬಂದಿದ್ದವರ ಮೇಲೂ ಕೇಸ್‌:

ಕೆಎಸ್‌ಡಿಎಲ್‌ಗೆ ರಾಸಾಯನಿಕ ಕಚ್ಚಾ ವಸ್ತುಗಳ ಪೂರೈಕೆಗೆ ಕಾರ್ಯಾದೇಶ ನೀಡಲು 81 ಲಕ್ಷ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿ ಲೋಕಾಯುಕ್ತ ಪೊಲೀಸರಿಗೆ ಕೆಮಿಕ್ಸಿಲ್‌ ಕಾರ್ಪೋರೇಷನ್‌ ಕಂಪನಿ ಪಾಲುದಾರ ಶ್ರೇಯಸ್‌ ಕಶ್ಯಪ್‌ ದೂರು ಸಲ್ಲಿಸಿದ್ದರು. ಈ ದೂರಿನಲ್ಲಿ ತಮ್ಮ ಬಳಿ ಶಾಸಕರೇ ಹಣ ಕೇಳಿದ್ದರು ಎಂದು ಹೇಳಲಾಗಿತ್ತು. ಅದರ ಅನ್ವಯ ಪ್ರಕರಣದ ಮೊದಲ ಆರೋಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಎರಡನೇ ಆರೋಪಿ ಶಾಸಕರ ಪುತ್ರ ಮತ್ತು ಬೆಂಗಳೂರು ಜಲ ಮಂಡಳಿಯ ಮುಖ್ಯ ಲೆಕ್ಕ ಪರಿಶೋಧಕ ಮಾಡಾಳು ಪ್ರಶಾಂತ್‌, 3ನೇ ಆರೋಪಿ ಪ್ರಶಾಂತ್‌ ಕಚೇರಿ ಲೆಕ್ಕಾಧಿಕಾರಿ ಸುರೇಂದ್ರ, ನಾಲ್ಕನೇ ಆರೋಪಿ ಶಾಸಕರ ಸಂಬಂಧಿ ಸಿದ್ದೇಶ್‌ ಹಾಗೂ ಪ್ರಶಾಂತ್‌ ಅವರ ಜತೆ ಡೀಲ್‌ಗೆ ಬಂದಿದ್ದ ಕರ್ನಾಟಕ ಅರೋಮಸ್‌ ಕಂಪನಿಯ ಉದ್ಯೋಗಿಗಳಾದ ಆಲ್ಬರ್ಚ್‌ ನಿಕೋಲಾ ಹಾಗೂ ಗಂಗಾಧರ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಮಾಡಾಳು ವಿರುಪಾಕ್ಷಪ್ಪ ಪುತ್ರ ಲಂಚ: ಬಿಜೆಪಿ ಭ್ರಷ್ಟಾಚಾರಕ್ಕೆ ಇನ್ನೆಂಥ ಸಾಕ್ಷ್ಯ ಬೇಕು? : ಸಿದ್ದರಾಮಯ್ಯ

ಎಫ್‌ಐಆರ್‌ನಲ್ಲೇನಿದೆ?:

ಬೆಂಗಳೂರಿನ ಕೆ.ಆರ್‌.ರಸ್ತೆಯಲ್ಲಿ ಕೆಮಿಕ್ಸಿಲ್‌ ಕಾರ್ಪೋರೇಷನ್‌ ಎಂಬ ಹೆಸರಿನಲ್ಲಿ ಪಾಲುದಾರಿಕೆ ಕಂಪನಿ ಹೊಂದಿದ್ದು, ಚಾಮರಾಜಪೇಟೆಯಲ್ಲಿ ತನ್ನ ಪರಿಚಯಸ್ಥ ಟಿ.ಎ.ಎಸ್‌.ಮೂರ್ತಿ ಪಾಲುದಾರಿಕೆಯಲ್ಲಿ ಡೆಲಿಸಿಯಾ ಕೆಮಿಕಲ್ಸ್‌ ಹೆಸರಿನಲ್ಲಿ ಮತ್ತೊಂದು ಕಂಪನಿ ಸಹ ಇದೆ. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮಕ್ಕೆ ಕೆಮಿಕಲ್‌ ಆಯಿಲ್‌ ಪೂರೈಕೆ ಮಾಡುವ ಸಂಬಂಧ 2023ರ ಜನವರಿಯಲ್ಲಿ ಕರೆಯಲಾಗಿದ್ದ ಟೆಂಡರ್‌ನಲ್ಲಿ ಈ ಕಂಪನಿಗಳು ಭಾಗವಹಿಸಿದ್ದವು. ಈ ಕಂಪನಿಗಳಿಗೆ ಕೆಮಿಕಲ್‌ ಆಯಿಲ್‌ ಸಪ್ಲೈ ಮಾಡುವ ಸಲುವಾಗಿ ಮಂಜೂರು ಮಾಡಿರುವ ಟೆಂಡರ್‌ ಮತ್ತು ಈ ಸಂಬಂಧ ನೀಡಿರುವ ಖರೀದಿ ಆದೇಶ ಹಾಗೂ ಸರಬರಾಜು ಮಾಡಿದ ರಾಸಾಯನಿಕ ಸರಕಿಗೆ ಯಾವುದೇ ಅಡೆ ತಡೆಯಿಲ್ಲದೆ ಬಿಲ್‌ನ ಮೊತ್ತವನ್ನು ಬಿಡುಗಡೆಗೊಳಿಸಲು 81 ಲಕ್ಷ ರು. ಲಂಚ ನೀಡುವಂತೆ ಕೆಎಸ್‌ಡಿಎಲ್‌ ಅಧ್ಯಕ್ಷ ಹಾಗೂ ಶಾಸಕ ಮಾಡಾಳು ವಿರೂಪಾಕ್ಷಪ್ಪನವರ ಪರವಾಗಿ ಅವರ ಪುತ್ರ ಹಾಗೂ ಬೆಂಗಳೂರು ಜಲಮಂಡಳಿಯ ಪ್ರಧಾನ ಲೆಕ್ಕಪರಿಶೋಧಕ ಪ್ರಶಾಂತ್‌ ಮಾಡಾಳು ಬೇಡಿಕೆಯಿಟ್ಟಿರುವ ಕುರಿತು ಕಾನೂನು ಕ್ರಮ ಜರುಗಿಸುವಂತೆ ಶ್ರೇಯಸ್‌ ಕಶ್ಯಪ್‌ ದೂರು ನೀಡಿದ್ದಾರೆ. ಅದರನ್ವಯ ಎಫ್‌ಐಆರ್‌ ದಾಖಲಾಗಿದೆ. ದಾಳಿ ವೇಳೆ ಪ್ರಶಾಂತ್‌ ಜೊತೆ ಇತರೆ ನಾಲ್ವರು ಸಿಕ್ಕಿಬಿದ್ದಿದ್ದಾರೆ.

ರಾಜೀನಾಮೆ ಪತ್ರದಲ್ಲೇನಿದೆ?

‘ದಿನಾಂಕ 02.03.2023ರಂದು ನಡೆದ ಲೋಕಾಯುಕ್ತ ದಾಳಿಗೂ ನನಗೂ ಯಾವುದೇ ಸಂಬಂಧ ಇರುವುದಿಲ್ಲ. ಇದು ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಷಡ್ಯಂತ್ರವಾಗಿರುತ್ತದೆ. ಆದಾಗಿಯೂ ನನ್ನ ಮೇಲೆ ಆಪಾದನೆ ಬಂದಿರುವುದರಿಂದ ನಾನು ನೈತಿಕ ಹೊಣೆ ಹೊತ್ತು ಕೆಎಸ್‌ಡಿಎಲ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ದಯವಿಟ್ಟು ಮಾನ್ಯರು ಈ ನನ್ನ ರಾಜೀನಾಮೆಯನ್ನು ಅಂಗೀಕರಿಸಲು ಕೋರುತ್ತೇನೆ’ ಎಂದು ಮಾಡಾಳು ವಿರೂಪಾಕ್ಷಪ್ಪ ಅವರು ಮುಖ್ಯಮಂತ್ರಿಗಳಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ