‘ಆಪರೇಷನ್‌ ಮಾಡಾಳು’ ರಹಸ್ಯ ದಾಳಿ ಹೇಗಾಯ್ತು ಗೊತ್ತಾ?: ಐದಾರು ದಿನಗಳಿಂದ ದಾಳಿಗೆ ಸಿದ್ಧತೆ

Published : Mar 04, 2023, 04:40 AM IST
‘ಆಪರೇಷನ್‌ ಮಾಡಾಳು’ ರಹಸ್ಯ ದಾಳಿ ಹೇಗಾಯ್ತು ಗೊತ್ತಾ?: ಐದಾರು ದಿನಗಳಿಂದ ದಾಳಿಗೆ ಸಿದ್ಧತೆ

ಸಾರಾಂಶ

ಲಂಚ ಪ್ರಕರಣದಲ್ಲಿ ಆಡಳಿತಾರೂಢ ಬಿಜೆಪಿ ಶಾಸಕ ಹಾಗೂ ಪುತ್ರನನ್ನು ಖೆಡ್ಡಾಕ್ಕೆ ಕೆಡವಿ ರಾಜ್ಯ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ ಲೋಕಾಯುಕ್ತ ಪೊಲೀಸರ ‘ಆಪರೇಷನ್‌ ಮಾಡಾಳು’ ಕಾರ್ಯಾಚರಣೆಯ ಹಿಂದೆ ರೋಚಕವಾದ ಕತೆ ಇದೆ.

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು (ಮಾ.04): ಲಂಚ ಪ್ರಕರಣದಲ್ಲಿ ಆಡಳಿತಾರೂಢ ಬಿಜೆಪಿ ಶಾಸಕ ಹಾಗೂ ಪುತ್ರನನ್ನು ಖೆಡ್ಡಾಕ್ಕೆ ಕೆಡವಿ ರಾಜ್ಯ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ ಲೋಕಾಯುಕ್ತ ಪೊಲೀಸರ ‘ಆಪರೇಷನ್‌ ಮಾಡಾಳು’ ಕಾರ್ಯಾಚರಣೆಯ ಹಿಂದೆ ರೋಚಕವಾದ ಕತೆ ಇದೆ. ಇಡೀ ಕಾರ್ಯಾಚರಣೆಯ ರೂವಾರಿಗಳು ಲೋಕಾಯುಕ್ತ ಪೊಲೀಸ್‌ ವಿಭಾಗದ ಐಜಿಪಿ ಸುಬ್ರಹ್ಮಣ್ಯೇಶ್ವರ್‌ ರಾವ್‌ ಹಾಗೂ ಬೆಂಗಳೂರು ನಗರ ಜಿಲ್ಲೆ ಎಸ್ಪಿ ಕೆ.ವಿ.ಅಶೋಕ್‌ ಅವರಾಗಿದ್ದು, ಕೊನೆ ಕ್ಷಣದವರೆಗೆ ಕಾರ್ಯಾಚರಣೆ ಮಾಹಿತಿ ಸೋರಿಕೆಯಾಗದಂತೆ ಈ ಅಧಿಕಾರಿಗಳು ನಿಗಾವಹಿಸಿ ಯಶಸ್ವಿಯಾಗಿ ಬೇಟೆಯಾಡಿದ್ದಾರೆ. ಈ ಆಪರೇಷನ್‌ಗೆ ಐದಾರು ದಿನಗಳಿಂದ ಸಿದ್ಧತೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಶಾಸಕ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಪ್ರಶಾಂತ್‌ ಅವರ ಚಟುವಟಿಕೆಗಳ ಮೇಲೆ ಕಣ್ಗಾವಲಿಟ್ಟಿದ್ದರು.

ಆಡಳಿತ ಪಕ್ಷದ ಶಾಸಕನಾದರೂ ಡೊಂಟ್‌ ಕೇರ್‌: ಕೆಎಸ್‌ಡಿಎಲ್‌ನ ಟೆಂಡರ್‌ ಹಣ ಬಿಡುಗಡೆ ಹಾಗೂ ಕಾರ್ಯಾದೇಶ ನೀಡುವ ಸಂಬಂಧ ಕೆಎಸ್‌ಡಿಎಲ್‌ ಅಧ್ಯಕ್ಷ ಹಾಗೂ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಬೆಂಗಳೂರು ಜಲಮಂಡಳಿಯ ಮುಖ್ಯ ಲೆಕ್ಕಪರಿಶೋಧಕ ಪ್ರಶಾಂತ್‌ ಅವರು 81 ಲಕ್ಷ ರು.ಗೆ ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಲೋಕಾಯುಕ್ತ ಸಂಸ್ಥೆಗೆ ಕೆಮಿಕ್ಸಿಲ್‌ ಕಂಪನಿ ಮಾಲಿಕ ಶ್ರೇಯಸ್‌ ಕಶ್ಯಪ್‌ ದೂರು ಸಲ್ಲಿಸಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಐಜಿಪಿ ಸುಬ್ರಹ್ಮಣ್ಯೇಶ್ವರ್‌ ರಾವ್‌, ಈ ಬಗ್ಗೆ ತನಿಖೆ ನಡೆಸುವಂತೆ ಎಸ್ಪಿ ಅಶೋಕ್‌ ಅವರಿಗೆ ಸೂಚಿಸಿದರು. ಈ ವೇಳೆ ಐಜಿಪಿಗೆ ಡೀಲ್‌ ಕುರಿತ ಆಡಿಯೋ ತುಣುಕನ್ನು ಕಶ್ಯಪ್‌ ಸಲ್ಲಿಸಿದರು ಎನ್ನಲಾಗಿದೆ. ನಂತರ ಕಾರ್ಯಾಚರಣೆ ಶುರುವಾಗಿದೆ.

ಕಾಂಗ್ರೆಸ್‌ ಇದ್ದಿದ್ರೆ ಕೇಸ್‌ ಆಗ್ತಾ ಇರ್ಲಿಲ್ಲ, ಕೇಸ್‌ ಮುಚ್ಚಿ ಹಾಕೋ ಕೆಲಸ ಮಾಡುತ್ತಿದ್ದರು: ಸಿ.ಟಿ.ರವಿ

ಕರೆ ಮಾಡಿ ಸಿಕ್ಕಿಬಿದ್ದ ಪ್ರಶಾಂತ್‌: ಡೀಲ್‌ ಮಾತುಕತೆ ಸಂಬಂಧ ಸಂಜೆ 6.30ಕ್ಕೆ ಕ್ರೆಸೆಂಟ್‌ ರಸ್ತೆಯ ತಮ್ಮ ಖಾಸಗಿ ಕಚೇರಿಗೆ ಬರುವಂತೆ ದೂರುದಾರ ಕಶ್ಯಪ್‌ಗೆ ಪ್ರಶಾಂತ್‌ ಸೂಚಿಸಿದ್ದರು. ಈ ವಿಷಯ ತಿಳಿದ ಕೂಡಲೇ ಎಸ್ಪಿ ಅವರು ನಾಲ್ವರು ಡಿವೈಎಸ್ಪಿಗಳ ನೇತೃತ್ವದಲ್ಲಿ ಪ್ರತ್ಯೇಕ ಮೂರು ತಂಡಗಳನ್ನು ರಚಿಸಿದರು. ನಂತರ ಪ್ರಶಾಂತ್‌ ಕಚೇರಿಗೆ ಸಂಜೆ 6.30ಕ್ಕೆ ಕಶ್ಯಪ್‌ರ ಕಾರು ಹಿಂಬಾಲಿಸಿ ಮತ್ತೊಂದು ಕಾರಿನಲ್ಲಿ ಲೋಕಾಯುಕ್ತ ಪೊಲೀಸರು ತೆರಳಿದರು. ಕಚೇರಿಯೊಳಗೆ ಕಶ್ಯಪ್‌ ತೆರಳಿ ಹಣದ ಕಂತೆಗಳನ್ನು ಪ್ರಶಾಂತ್‌ ನೀಡಿದ ಕೂಡಲೇ ಅವರ ಕಚೇರಿಗೆ ಡಿವೈಎಸ್ಪಿ ಪ್ರಮೋದ್‌ ತಂಡ ಪ್ರವೇಶಿಸಿದೆ. ತಾವು ಲೋಕಾಯುಕ್ತ ಪೊಲೀಸರೆಂದ ಕೂಡಲೇ ಪ್ರಶಾಂತ್‌ ಬೆವೆತರು. ಅಲ್ಲಿ ದೊಡ್ಡ ಮೊತ್ತದ ಹಣ ಜಪ್ತಿಯಾದ ಕೂಡಲೇ ಶಾಸಕರು ಹಾಗೂ ಕೆಎಸ್‌ಡಿಎಲ್‌ ಎಂಡಿ ಮನೆ ಮೇಲೆ ದಾಳಿಗೆ ಅಧಿಕಾರಿಗಳು ಹಸಿರು ನಿಶಾನೆ ತೋರಿಸಿದ್ದಾರೆ.

ಮದುವೆ ಆಮಂತ್ರಣ ನೆಪದಲ್ಲಿ ಮನೆ ಹುಡುಕಿದರು: ಸಂಜಯನಗರದಲ್ಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮನೆ ಇದೆ ಎಂಬ ಮಾಹಿತಿ ಸಿಕ್ಕಿತ್ತು. ಆಗ ಪ್ರಶಾಂತ್‌ ಮೊಬೈಲ್‌ ಕರೆಗಳನ್ನು (ಸಿಡಿಆರ್‌) ಆಧರಿಸಿ ಮನೆ ಪತ್ತೆ ಹಚ್ಚಲಾಯಿತು. ಕೊನೆಗೆ ಶಾಸಕರ ಮನೆಗೆ ಮದುವೆ ಆಮಂತ್ರಣ ನೀಡುವ ನೆಪದಲ್ಲಿ ಗುರುವಾರ ಮಧ್ಯಾಹ್ನ ತೆರಳಿ ಅವರದ್ದೇ ಮನೆ ಎಂಬುದನ್ನು ಲೋಕಾಯುಕ್ತ ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ. ಬಳಿಕ ಸಂಜೆ ಡಿವೈಎಸ್ಪಿ ಸತೀಶ್‌ ತಂಡ ದಾಳಿ ಸಜ್ಜಾಗಿ ನಿಂತಿತು.

ಶಾಸಕರ ಬೆಡ್‌ ರೋಮ್‌ನಲ್ಲೇ ಹಣ, ಎಣಿಕೆ ಯಂತ್ರ: ತಮ್ಮ ಪ್ರಕರಣದಲ್ಲಿ ಹಣ ಪತ್ತೆಯಾದಾಗ ಕೂಡಲೇ ಆ ವ್ಯಕ್ತಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲು ಸಿಆರ್‌ಪಿಸಿ 165ರಡಿ ಸಚ್‌ರ್‍ ವಾರೆಂಟ್‌ ಹೊರಡಿಸುವ ಅಧಿಕಾರವು ತನಿಖಾಧಿಕಾರಿಗೆ ಇದೆ. ಶಾಸಕರ ಪುತ್ರನ ಕಚೇರಿಯಲ್ಲಿ ಹಣ ಪತ್ತೆಯಾದ ಕೂಡಲೇ ತನಿಖಾಧಿಕಾರಿ ಕುಮಾರಸ್ವಾಮಿ ಅವರು ಶಾಸಕರು ಹಾಗೂ ಕೆಎಸ್‌ಡಿಎಲ್‌ ಎಂಡಿ ಮನೆಗಳ ಶೋಧನೆಗೆ ರಾತ್ರಿ 8.45ಕ್ಕೆ ಸಚ್‌ರ್‍ ವಾರೆಂಟ್‌ ನೀಡಿದರು. ಅದರನ್ವಯ ಆ ಇಬ್ಬರ ಮನೆಗಳನ್ನು ತಪಾಸಣೆ ನಡೆಸಲಾಯಿತು. 3ನೇ ಮಹಡಿಯಲ್ಲಿ ಅವರಿಗೆ ಪ್ರತ್ಯೇಕ ಕೋಣೆ ಮೀಸಲಿಟ್ಟಿದ್ದರು. ಆ ಕೋಣೆಯಲ್ಲಿ ಡಿಜಿಟಲ್‌ ಲಾಕರ್‌ ಹೊಂದಿದ್ದ 4 ಅಡಿ ಎತ್ತರದ ತಿಜೋರಿ ಇತ್ತು. ಆ ತಿಜೋರಿ ತೆಗೆಸಿದಾಗ ಬ್ಯಾಗ್‌ಗಳಲ್ಲಿ ತುಂಬಿದ್ದ 6.10 ಕೋಟಿ ರು ಹಣ, ಹಣ ಎಣಿಸುವ ಯಂತ್ರ ಹಾಗೂ ದಾಖಲೆಗಳು ಸಿಕ್ಕವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಜೆಪಿ ಅಂದ್ರೆ ಭ್ರಷ್ಟ ಜನತಾ ಪಾರ್ಟಿ, ಭ್ರಷ್ಟಶೂರ ಬೊಮ್ಮಾಯಿ: ಸುರ್ಜೆವಾಲಾ ಟೀಕೆ

ಹಣ ನೀವೇ ಇಟ್ಕೊಳ್ಳಿ, ಯಾರಿಗೂ ಹೇಳ್ಬೇಡಿ ಸರ್‌!: ಶಾಸಕರ ಮನೆ ಮೇಲೆ ದಾಳಿ ನಡೆದಾಗ ಅಲ್ಲಿ ಶಾಸಕರ ಇಬ್ಬರು ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಮಾತ್ರ ಇದ್ದರು. ಲಂಚ ಸ್ವೀಕರಿಸುವಾಗ ತಮ್ಮ ಸೋದರ ಸಿಕ್ಕಿಬಿದ್ದ ವಿಚಾರ ತಿಳಿದ ಕೂಡಲೇ ಶಾಸಕರ ಹಿರಿಯ ಪುತ್ರ ಮಾಡಾಳು ಮಲ್ಲಿಕಾರ್ಜುನ್‌ ರಾತ್ರಿ 1 ಗಂಟೆಗೆ ನಗರಕ್ಕೆ ದೌಡಾಯಿಸಿ ಬಂದಿದ್ದರು. ಆಗ ಮನೆಯಲ್ಲಿ ಪತ್ತೆಯಾದ ಕೋಟಿ ಕೋಟಿ ಹಣಕ್ಕೆ ಲೋಕಾಯುಕ್ತ ಪೊಲೀಸರು ಲೆಕ್ಕ ಕೇಳಿದಾಗ ಮಲ್ಲಿಕಾರ್ಜುನ್‌ ಆತಂಕಗೊಂಡಿದ್ದಾರೆ. ‘ಸರ್‌ ಈ ಹಣದ ಲೆಕ್ಕ ಕೊಡಲು ಸಾಧ್ಯವಿಲ್ಲ. ನೀವೇ ಮಡಿಕ್ಕೊಳಿ. ನಾವು ಯಾರಿಗೂ ಹೇಳೋದಿಲ್ಲ. ನೀವೂ ಯಾರಿಗೂ ಹೇಳ್ಬೇಡಿ. ಈ ವಿಚಾರ ಇಲ್ಲಿಗೆ ಮುಗಿಸಿಬಿಡಿ’ ಎಂದು ಗೋಗರೆದಿದ್ದಾರೆ. ಇದಕ್ಕೆ ಪೊಲೀಸರು ಕ್ಯಾರೆ ಎನ್ನಲಿಲ್ಲ ಎಂದು ತಿಳಿದುಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ