
ಬೀದರ್ : ರೈತರ ಸಾಲ ಮನ್ನಾ ಮೊತ್ತವಾದ 1300 ಕೋಟಿ ರು.ಗಳನ್ನು ಸಹಕಾರಿ ಬ್ಯಾಂಕುಗಳಿಗೆ ನವೆಂಬರ್ ಅಂತ್ಯದೊಳಗೆ ಬಿಡುಗಡೆ ಮಾಡಲಿದ್ದೇವೆ. ಇನ್ನು 20 ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಪ್ರಕ್ರಿಯೆಯನ್ನೂ ಪ್ರಾರಂಭಿಸಲಿದ್ದೇವೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಸಾಲ ಮನ್ನಾ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸುಳ್ಳು ಹೇಳಿಕೆ ನೀಡುತ್ತಿರುವುದಾಗಿ ಆರೋಪಿಸಿದರು.
ರೈತರ ಸಾಲ ಮನ್ನಾ ಮಾಡಲು ನಾನು ನಾಲ್ಕು ವರ್ಷಗಳ ಸಮಯ ಕೇಳಿಲ್ಲ. ಫೆಬ್ರವರಿಯಲ್ಲಿ ಮಂಡನೆ ಮಾಡಲಿರುವ ಬಜೆಟ್‌ನಲ್ಲಿ ಅಗತ್ಯ ಹಣಕಾಸು ವ್ಯವಸ್ಥೆ ಮಾಡಿಕೊಂಡು ಪ್ರಕಟಿಸುತ್ತೇವೆ. ಬರುವ ಜೂನ್‌ವರೆಗೆ ಪ್ರತಿ ತಿಂಗಳು ಬ್ಯಾಂಕ್‌ಗಳಿಗೆ ಹಣ ಬಿಡುಗಡೆ ಮಾಡುತ್ತೇವೆ. ಈಗ ಸಹಕಾರ ಬ್ಯಾಂಕುಗಳು ಜುಲೈನಿಂದ ಅಕ್ಟೋಬರ್ ತಿಂಗಳವರೆಗೆ ಸಾಲ ಪಡೆದ ರೈತರ ವಿವರ ಸಲ್ಲಿಸಿರುವ ಆಧಾರದ ಮೇಲೆ 1300 ಕೋಟಿ ರು. ಸಾಲ ಮನ್ನಾ ಹಣವನ್ನು ನವೆಂಬರ್ ಅಂತ್ಯದೊಳಗಾಗಿ ಬ್ಯಾಂಕಿಗೆ ಬಿಡುಗಡೆಗೆ ತೀರ್ಮಾನ ಕೈಗೊಂಡಿದ್ದೇವೆ ಎಂದರು.
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ 21 ಲಕ್ಷ ರೈತ ಕುಟುಂಬಗಳ 2 ಲಕ್ಷ ರು.ಗಳವರೆಗಿನ ಸಾಲ ಮನ್ನಾ ನಿರ್ಧಾರ ಜಾರಿ ಕುರಿತಂತೆ ಬರುವ 20 ದಿನಗಳಲ್ಲಿ ಪ್ರಕ್ರಿಯೆ ಆರಂಭವಾಗಲಿದೆ. ಈ ಕುರಿತಾಗಿ ಆರೂವರೆ ಸಾವಿರ ಕೋಟಿ ರು.ಗಳನ್ನು ಬಜೆಟ್‌ನಲ್ಲಿಯೇ ಹಣ ಇಟ್ಟಿದ್ದು ಸರ್ಕಾರಕ್ಕೆ ಹಣದ ಕೊರತೆ ಇಲ್ಲ ಎಂದರು.
ಸಾಲ ಮನ್ನಾ ಪ್ರಕ್ರಿಯೆ ಸರಳಗೊಳಿಸಲು ಐಎಎಸ್ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ತಂಡ ರಚಿಸಿ ಆದೇಶಿಸಿದ್ದೇನೆ. ಅವರು ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ. ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲದ ಮಾಹಿತಿ ಪಡೆಯುತ್ತಿದ್ದಾರೆ ಎಂದು ಸಿಎಂ ಎಚ್‌ಡಿ ಕುಮಾರಸ್ವಾಮಿ ತಿಳಿಸಿದರು.
ಬಿಎಸ್‌ವೈ ಹೇಳಿಕೆ ಸುಳ್ಳು: ಸಿದ್ದರಾಮಯ್ಯ ಅವರ ಕಾಲದ ಸಾಲ ಮನ್ನಾ ಹಣದ ಪೈಕಿಯ ಬಾಕಿ ಹಣವನ್ನು ಸಂಪೂರ್ಣವಾಗಿ ಬ್ಯಾಂಕ್‌ಗಳಿಗೆ ಭರಿಸಲಾಗಿದೆ. ಆದರೆ ಬಿ.ಎಸ್.ಯಡಿಯೂರಪ್ಪ ಅವರು ಜನತೆಗೆ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ